ಶಿವಸೇನೆ - ಕಾಂಗ್ರೆಸ್‌ ಮೈತ್ರಿ ಖತಂ..? ಸಾವರ್ಕರ್‌ ವಿರುದ್ಧ ಹೇಳಿಕೆ ಹಿನ್ನೆಲೆ ಉದ್ಧವ್‌ ಬಣದ ಚಿಂತನೆ

By Kannadaprabha NewsFirst Published Nov 19, 2022, 7:51 AM IST
Highlights

ಸಾವರ್ಕರ್‌ ಕುರಿತ ರಾಹುಲ್‌ ವಿವಾದಿತ ಹೇಳಿಕೆ ಹಿನ್ನೆಲೆ ಶಿವಸೇನೆ - ಕಾಂಗ್ರೆಸ್‌ ನಡುವಿನ ಮೈತ್ರಿ ಖತಂ ಆಗಲಿದೆ ಎಂಬ ಸೂಚನೆಗಳು ಸಿಗುತ್ತಿದೆ. ಮೈತ್ರಿ ಅಂತ್ಯಕ್ಕೆ ಚಿಂತನೆ ನಡೆಯುತ್ತಿದೆ ಎಂದು ಶಿವಸೇನೆ ಸಂಸದ ಅರವಿಂದ ಸಾವಂತ್‌ ಹೇಳಿದ್ದಾರೆ. 

ಮುಂಬೈ: ಹಿಂದುತ್ವ ಪ್ರತಿಪಾದಕ ಹಾಗೂ ‘ಸ್ವಾತಂತ್ರ್ಯವೀರ’ ವಿನಾಯಕ ದಾಮೋದರ ಸಾವರ್ಕರ್‌ (Vinayak Damodar Savarkar) ‘ಬ್ರಿಟಿಷರ ಅಡಿಯಾಳು’ ಎಂಬ ಕಾಂಗ್ರೆಸ್‌ (Congress) ಮುಖಂಡ ರಾಹುಲ್‌ ಗಾಂಧಿ (Rahul Gandhi) ಮಾತಿಗೆ ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್‌ ಮಿತ್ರಪಕ್ಷ ಶಿವಸೇನೆಯ (Shiv Sena) ಉದ್ಧವ್‌ ಠಾಕ್ರೆ (Uddhav Thackeray) ಬಣ ಕೆರಳಿದೆ. ಕಾಂಗ್ರೆಸ್‌ ಜತೆಗಿನ ಮೈತ್ರಿ (Alliance) ಕಡಿದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ. ಶುಕ್ರವಾರ ಟಿವಿ ಸಂದರ್ಶನವೊಂದರಲ್ಲಿ ಈ ಸುಳಿವು ನೀಡಿದ ಉದ್ಧವ್‌ ಠಾಕ್ರೆ ಬಣದ ಸೇನಾ ಸಂಸದ ಅರವಿಂದ ಸಾವಂತ್‌, ‘ಉದ್ಧವ್‌ ಠಾಕ್ರೆ ಅವರು ಈಗಾಗಲೇ ರಾಹುಲ್‌ ಹೇಳಿಕೆ ವಿರೋಧಿಸಿ ಹೇಳಿಕೆ ನೀಡಿದ್ದಾರೆ. ಸಂಜಯ ರಾವುತ್‌ ಅವರು ಕೂಡ ಮಾತನಾಡಿ ಮಹಾರಾಷ್ಟ್ರ ವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ಶಿವಸೇನೆ ಮುಂದುವರಿಯಲಿಕ್ಕಿಲ್ಲ ಎಂದಿದ್ದಾರೆ. ಪಕ್ಷ ಗಂಭೀರ ಪ್ರತಿಕ್ರಿಯೆ ನೀಡಿದೆ. ಇದಕ್ಕಿಂತ ಹೆಚ್ಚೇನು ಹೇಳಲಿ?’ ಎಂದರು.

‘ರಾಷ್ಟ್ರಧ್ವಜ ಗೌರವಿಸದ ಪಿಡಿಪಿ ಜತೆ ಹಿಂದೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಈಗ ಶಿವಸೇನೆ ಕೂಡ ಅಂಥದ್ದೇ ಸನ್ನಿವೇಶದಲ್ಲಿದೆ’ ಎಂದ ಸಾವಂತ್‌, ಮೈತ್ರಿಕೂಟದಿಂದ ಹೊರಬೀಳುವ ಸುಳಿವು ನೀಡಿದರು. 2019ರ ವಿಧಾನಸಭೆ ಚುನಾವಣೆ ಬಳಿಕ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಕೊಡಲು ಬಿಜೆಪಿ ನಿರಾಕರಿಸಿತ್ತು. ಹೀಗಾಗಿ ಬಿಜೆಪಿ ಸಂಗ ತೊರೆದಿದ್ದ ಶಿವಸೇನೆಯು ವೈಚಾರಿಕ ಭಿನ್ನಮತ ಇದ್ದರೂ ಕಾಂಗ್ರೆಸ್‌-ಎನ್‌ಸಿಪಿ ಮಿತ್ರಕೂಟದ ಜತೆ ಸೇರಿಕೊಂಡು ಸರ್ಕಾರ ರಚಿಸಿತ್ತು.

ಇದನ್ನು ಓದಿ: ಸ್ವಾತಂತ್ರ್ಯ ಸೇನಾನಿಗೆ ಅಪಮಾನ, ರಾಹುಲ್‌ ಗಾಂಧಿ ವಿರುದ್ಧ ಸಾವರ್ಕರ್‌ ಮೊಮ್ಮಗನಿಂದ ಕೇಸ್‌!

ರಾಹುಲ್‌ ಯಾತ್ರೆಗೆ ಬಾಂಬ್‌ ಬೆದರಿಕೆ
ಇಂದೋರ್‌: ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ನ.28ರಂದು ಇಲ್ಲಿನ ಖಾಲ್ಸಾ ಸ್ಟೇಡಿಯಂನಲ್ಲಿ ತಂಗಿದರೆ ನಗರದಲ್ಲಿ ಬಾಂಬ್‌ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಕುರಿತ ಬೆದರಿಕೆ ಪತ್ರವೊಂದನ್ನು ಸ್ಥಳೀಯ ಅಂಗಡಿಯೊಂದಕ್ಕೆ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ರಾಹುಲ್‌ ಯಾತ್ರೆಗೆ ಬಿಗಿ ಪೊಲಿಸ್‌ ಭದ್ರತೆ ಒದಗಿಸಬೇಕು ಎಂದು ರಾಜ್ಯ ಕಾಂಗ್ರೆಸ್‌ ಆಗ್ರಹಿಸಿದೆ. ಸದ್ಯ ಮಹಾರಾಷ್ಟ್ರದಲ್ಲಿರುವ ಭಾರತ್‌ ಜೋಡೊ ಯಾತ್ರೆ ನ.20ಕ್ಕೆ ಮಧ್ಯಪ್ರದೇಶ ತಲುಪಲಿದೆ.

ರಾಹುಲ್‌ಗೆ ಗಾಂಧಿ ಮೊಮ್ಮಗ ಸಾಥ್‌
ಶೆಗಾಂವ್‌: ರಾಹುಲ್‌ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ , ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ತುಷಾರ್‌ ಗಾಂಧಿ ಕೂಡಾ ಶುಕ್ರವಾರ ಭಾಗಿಯಾಗಿ ಹೆಜ್ಜೆ ಹಾಕಿದರು. ಬುಲ್ಡಾನಾ ಜಿಲ್ಲೆಯ ಶೆಗಾಂವ್‌ನಲ್ಲಿ ರಾಹುಲ್‌ ಜೊತೆ ತುಷಾರ್‌ ಗಾಂಧಿ ಹೆಜ್ಜೆ ಹಾಕಿದರು. ‘ಶೆಗಾವ್‌ ನನ್ನ ಜನ್ಮ ಸ್ಥಳ. ನಾನು ನ.18 ರಂದು ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವೆ.’ ಎಂದು ಗುರುವಾರ ತುಷಾರ್‌ ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ; ಕಾಂಗ್ರೆಸ್ ಯಾತ್ರೆಯಲ್ಲಿ ಸಾವರ್ಕರ್‌ಗೆ ಅವಮಾನ, ರಾಹುಲ್ ಗಾಂಧಿ ಪೋಸ್ಟರ್‌ಗೆ ಚಪ್ಪಲಿ ಎಸೆತ!

ರಾಹುಲ್‌ ವಿರುದ್ಧ ಮಾನನಷ್ಟು ಕೇಸು
ಥಾಣೆ: ವೀರ ಸಾವರ್ಕರ್‌ ಬಗ್ಗೆ ಅವಹೇಳನಕಾರಿಯಾಗಿ ಟೀಕೆ ಮಾಡಿದ್ದ ಎಂದು ಆರೋಪಿಸಿ ರಾಹುಲ್‌ ಗಾಂಧಿ ವಿರುದ್ಧ ಮಹಾರಾಷ್ಟ್ರದ ಥಾಣೆಯಲ್ಲಿ ಮಾನನಷ್ಟ ಪ್ರಕರಣ ದಾಖಲಿಸಲಾಗಿದೆ. ರಾಹುಲ್‌ ಹೇಳಿಕೆ ಜನರ ಭಾವನೆಗೆ ಧಕ್ಕೆಯನ್ನುಮಟು ಮಾಡಿದೆ ಎಂದು ಶಿವಸೇನೆಯ ವಂದನಾ ಡೊಂಗ್ರೆ ದಾಖಲಿಸಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ ಸಾವರ್ಕರ್‌ ಜನ್ಮ ಸ್ಥಳವಾದ ನಾಸಿಕ್‌ನ ಭಾಗೂರ್‌ ನಿವಾಸಿಗಳು ರಾಹುಲ್‌ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದು ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಅಕೋಲಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್‌ ‘ಸಾವರ್ಕರ್‌ ಬ್ರಿಟಿಷ್ ಅಧಿಕಾರಿಗಳಿಗೆ ಸಹಾಯ ಮಾಡಿದ್ದರು. ಜೈಲಿನಲ್ಲಿದ್ದಾಗ ಭಯದಿಂದ ಕ್ಷಮಾಪಣಾ ಪತ್ರ ಬರೆದಿದ್ದರು’ ಎಂದು ಹೇಳಿದ್ದರು.

ಇದನ್ನೂ ಓದಿ: ಹಿಂದೂಗಳ ಏಕತೆ ಸಾವರ್ಕರ್ ಕನಸಾಗಿತ್ತು, ಇಂದು ಕನಸು ಈಡೇರುವ ಕಾಲ ಬಂದಿದೆ: ಸಾತ್ಯಕಿ ಸಾವರ್ಕರ್‌

click me!