2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೊಳಗಾದ ರಾಜಕಾರಣಿಗಳ ಆಜೀವ ಅನರ್ಹತೆಗೆ ಕೇಂದ್ರದ್ದೇ ವಿರೋಧ!

Published : Feb 27, 2025, 07:31 AM ISTUpdated : Feb 27, 2025, 08:23 AM IST
2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೊಳಗಾದ ರಾಜಕಾರಣಿಗಳ ಆಜೀವ ಅನರ್ಹತೆಗೆ ಕೇಂದ್ರದ್ದೇ ವಿರೋಧ!

ಸಾರಾಂಶ

ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಜನಪ್ರತಿನಿಧಿಗಳ ಆಜೀವ ಅನರ್ಹತೆಗೆ ಕೇಂದ್ರ ಸರ್ಕಾರವು ವಿರೋಧ ವ್ಯಕ್ತಪಡಿಸಿದೆ. ಈಗಿರುವ 6 ವರ್ಷದ ಅನರ್ಹತೆಯೇ ಸಾಕು ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಅಲ್ಲದೆ ಇದು ಸಂಸತ್ತಿನ ಪರಮಾಧಿಕಾರ ಎಂದು ಹೇಳಿದೆ.

ನವದೆಹಲಿ: ರಾಜಕೀಯವನ್ನು ಅಪರಾಧ ಮುಕ್ತಗೊಳಿಸುವ ಕುರಿತು ಪದೇ ಪದೇ ಮಾತನಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕ್ರಿಮಿನಲ್‌ ಪ್ರಕರಣಗಳಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೊಳಗಾದ ಜನಪ್ರತಿನಿಧಿಗಳ ಆಜೀವ ಅನರ್ಹತೆಗೆ ಪರೋಕ್ಷ ವಿರೋಧ ವ್ಯಕ್ತಪಡಿಸಿದೆ. ಇಂಥ ಪ್ರಕರಣಗಳಲ್ಲಿ ಈಗಿರುವ 6 ವರ್ಷದ ಅನರ್ಹತೆಯೇ ಸಾಕು. ಅದಕ್ಕಿಂತ ಹೆಚ್ಚಿನ ಶಿಕ್ಷೆ ಕಠಿಣವಾದೀತು ಎಂದು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಅಲ್ಲದೆ ಇಂಥ ಶಿಕ್ಷೆ ನಿಗದಿ ಅವಧಿ ಸಂಸತ್ತಿನ ಪರಮಾಧಿಕಾರ ಎನ್ನುವ ಮೂಲಕ, ಆಜೀವ ಅನರ್ಹತೆ ವಿಷಯದಲ್ಲಿ ನ್ಯಾಯಾಲಯದ ಪರಾಮರ್ಶೆಯ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಿದೆ.

ಏನಿದು ಪ್ರಕರಣ?

ಕ್ರಿಮಿನಲ್‌ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ರಾಜಕಾರಣಿಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ಅಧಿಕಾರಿಗಳನ್ನು ಆಜೀವ ಅನರ್ಹಗೊಳಿಸಬೇಕು ಎಂದು ಕೋರಿ ಬಿಜೆಪಿ ನಾಯಕ, ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ 2016ರಲ್ಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಇಂಥ ಪ್ರಕರಣಗಳಲ್ಲಿ ಜನಪ್ರತಿನಿಧಿಗಳಿಗೆ ಶಿಕ್ಷೆ ಪೂರೈಸಿದ ಬಳಿಕ ಗರಿಷ್ಠ 6 ವರ್ಷ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಗರಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸುವ 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8 ಮತ್ತು 9ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ್ದರು.

ಸರ್ಕಾರದ ವಾದವೇನು?

ಕ್ರಿಮಿನಲ್‌ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದವರಿಗೆ ಅಜೀವ ಅನರ್ಹತೆ ಅಗತ್ಯವೋ ಅಥವಾ ಇಲ್ಲವೋ ಎಂಬುದು ಇಲ್ಲಿ ಪ್ರಶ್ನೆಯೇ ಅಲ್ಲ. ಏಕೆಂದರೆ ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳನ್ನು ಜೀವಮಾನವಿಡೀ ಅನರ್ಹಗೊಳಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರ ಸಂಸತ್ತಿನ ವ್ಯಾಪ್ತಿಗೆ ಸೇರಿದೆ. ಅನರ್ಹತೆಯನ್ನು ಸಂಸತ್ತು ನಿರ್ಧರಿಸುತ್ತದೆ. ಕಾರಣ ಹಾಗೂ ಪ್ರಮಾಣದ ತತ್ವಗಳನ್ನು ಪರಿಗಣಿಸಿ ಸಂಸತ್ತು ಅನರ್ಹತೆಯನ್ನು ನಿರ್ಧರಿಸುತ್ತದೆ. ಇಂಥದ್ದೇ ಶಾಸನ ರೂಪಿಸುವಂತೆ ಸಂಸತ್ತಿಗೆ ಸೂಚಿಸಲು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ. ಇದು ಸಂಪೂರ್ಣವಾಗಿ ನ್ಯಾಯಾಲಯದ ಪರಾಮರ್ಶೆಯ ವ್ಯಾಪ್ತಿಗೆ ಹೊರತಾದ ಮನವಿಯಾಗಿದೆ. ಇಂಥದ್ಧೇ ಶಾಸನ ರೂಪಿಸಿ ಎಂದು ನ್ಯಾಯಾಲಯ ಸಂಸತ್ತಿಗೆ ಸೂಚಿಸಲು ಸಾಧ್ಯವಿಲ್ಲ’ ಎಂದಿದೆ.

ಜೊತೆಗೆ ಈಗಾಗಲೇ ಇಂಥ ಪ್ರಕರಣಗಳಿಗೆಂದೇ 6 ವರ್ಷ ಅನರ್ಹಗೊಳಿಸುವ ಅವಕಾಶ ಕಲ್ಪಿಸಲಾಗಿದೆ. ಇದು ತಪ್ಪು ಮರುಕಳಿಸದಂತೆ ಜನಪ್ರತಿನಿಧಿಗಳನ್ನು ಎಚ್ಚರಿಸಲು ಸೂಕ್ತವಾಗಿದೆ. ಹೀಗಾಗಿ ಆಜೀವ ಅನರ್ಹತೆ ಕಠಿಣ ಕ್ರಮವಾದೀತು ಎಂದು ಸರ್ಕಾರ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ