ಬಡವರಿಗೆ ಕೊಡುವ ಅಕ್ಕಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಿಜೆಪಿಯವರ ಇಂತಹ ಕಾರ್ಯವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.
ಮದ್ದೂರು (ಜೂ.18): ಬಡವರಿಗೆ ಕೊಡುವ ಅಕ್ಕಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಿಜೆಪಿಯವರ ಇಂತಹ ಕಾರ್ಯವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದರು. ಪಟ್ಟಣದ ಖಾಸಗಿ ಹೊಟೇಲ್‌ಗೆ ಆಗಮಿಸಿದ್ದ ಸಚಿವರನ್ನು ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಕೆ.ಸಿ.ಜೋಗೀಗೌಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ಬಳಿ ಅಕ್ಕಿ ಇದೆ. ಕೊಡುತ್ತೇವೆ ಎಂದು ಪತ್ರದ ಮೂಲಕ ತಿಳಿಸಿ ಅಕ್ಕಿ ಕೊಟ್ಟರೆ ಕಾಂಗ್ರೆಸ್ ಸರ್ಕಾರಕ್ಕೆ ಜನಪ್ರಿಯತೆ ಬರುತ್ತದೆ ಎಂಬ ಕಾರಣಕ್ಕೆ ಅಕ್ಕಿ ಕೊಡುವುದಿಲ್ಲ ಎಂದು ನಿಲ್ಲಿಸುತ್ತಾರೆ.
ಇದರಿಂದ ಕೇಂದ್ರ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದನ್ನು ಹೇಳಲು ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದರು. ಗೋದಾಮಿನಲ್ಲಿರುವ ಅಕ್ಕಿಯನ್ನು ಕೊಡುವುದಕ್ಕೆ ಹೇಳಿ, ಇವರು ನಿಲ್ಲಿಸಿದ್ದಾರೆ ಎಂದರೆ ನಾವು ಬಡವರಿಗೆ ಕೊಡುವುದನ್ನು ನಿಲ್ಲಿಸುತ್ತೇವಾ. ಯಾವ ಯಾವ ರಾಜ್ಯಗಳಿಂದ ಎಲ್ಲೆಲ್ಲಿ ಅಕ್ಕಿ ದೊರೆಯುತ್ತದೋ ಅಲ್ಲಿಂದಲೇ ಖರೀದಿ ಮಾಡಿ ತಂದು ಬಡವರಿಗೆ ಕೊಡುತ್ತೇವೆ ಎಂದು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಕೊಟ್ಟರೆ ದಂಧೆ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಕೇಂದ್ರ ಕೊಡುತ್ತಿಲ್ಲ ಎಂದು ಬಿಜೆಪಿಯವರು ಹೇಳುತ್ತಿರುವುದಕ್ಕೆ ತಿರುಗೇಟು ನೀಡಿದರು.
‘ಅನ್ಯಾಯಕಾರಿ ಬ್ರಹ್ಮ...’ 28 ವರ್ಷಗಳಷ್ಟು ಹಳೆಯ ಹಾಡು: ವೈರಲ್ ಆದ ಮಳವಳ್ಳಿ ಕಲಾವಿದ ಮಹದೇವಸ್ವಾಮಿ
ಬಿಜೆಪಿ ಸರ್ಕಾರ ಶೇ. 40ರಷ್ಟು, ನೂರರಷ್ಟು ಕಮಿಷನ್ ಪಡೆದಿರುವ ಸರ್ಕಾರ ಎಂದು ಈಗಾಗಲೇ ಜಗಜ್ಜಾಹೀರಾಗಿದೆ. ಕಮೀಷನ್ ಹೊಡೆಯುವವರು ಅವರೇ ಹೊರತು ನಾವಲ್ಲ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಿಂದ ದೂರ ಇರುತ್ತದೆ ಎಂದು ಕಿಡಿಕಾರಿದರು. ಬಡವರಿಗೆ ಕೊಡುವ ಅಕ್ಕಿ ಬಗ್ಗೆ ರಾಜಕೀಯ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತೇವೆ. ಜಿಲ್ಲೆಯಲ್ಲೂ ಸಹ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಕೊನೇ ಭಾಗದ ಬೆಳೆಗಳಿಗೆ ನೀರೊದಗಿಸಬೇಕು ಎಂಬ ಉದ್ದೇಶದಿಂದಲೇ ನಾಲೆಯಲ್ಲಿ ನೀರು ಹರಿಸಲಾಗಿದೆ. ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆ ಇದೆ. ಮೂರೂವರೆ ಟಿಎಂಸಿಗಿಂತಲೂ ಕಡಿಮೆ ಇದ್ದಲ್ಲಿ ನೀರಿನ ಒತ್ತಡ ಕಡಿಮೆಯಾಗುತ್ತದೆ. ಆದ್ದರಿಂದ ನಾಲೆಗೆ ಒತ್ತಡದ ಹರಿವು ಕಡಿಮೆಯಾಗಿರುವ ಕಾರಣ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಾವು ಕೊನೇ ಭಾಗಕ್ಕೆ ನೀರು ತಲುಪಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು. ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ, ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಪಿ.ಸಂದರ್ಶ, ಅಶೋಕ್, ಮಾಜಿ ನಿರ್ದೆಶಕ ಸಾತನೂರು ಸತೀಶ್, ಶಿಂಷಾ ಬ್ಯಾಂಕ್ ಅಧ್ಯಕ್ಷ ತಗ್ಗಹಳ್ಳಿ ಚಂದ್ರು, ಉಪಾಧ್ಯಕ್ಷ ಚನ್ನಪ್ಪ, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ಮುಖಂಡರಾದ ಎ.ಪಿ. ಅಮರಬಾಬು, ಅಭಿಲಾಶ್, ಡಾಬಾ ಮಹೇಶ ಮತ್ತಿತರರಿದ್ದರು.
ರಾಮರಾಜ್ಯ ಮಾಡಿದ್ದು ಕಾಂಗ್ರೆಸ್: ರಾಮರಾಜ್ಯ ಮಾಡಲು ಹೊರಟಿರುವುದು ಬಿಜೆಪಿಯವರಲ್ಲ. ನಿಜವಾದ ರಾಮರಾಜ್ಯವನ್ನು ಸ್ಥಾಪಿಸಿರುವುದು, ಸ್ಥಾಪಿಸಿದ್ದವರು ಕಾಂಗ್ರೆಸ್ಸಿಗರೇ ಹೊರತು ಬಿಜೆಪಿಯವರಲ್ಲ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು. ವಿದ್ಯುತ್ ದರ ಹೆಚ್ಚಳ ಮಾಡಿರುವುದು ನಮ್ಮ ಸರ್ಕಾರ ಅಲ್ಲ. ಕೆಆರ್‌ಸಿ ಎಂಬ ಸಂಸ್ಥೆ ಮಾಡಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಸಭಾ ಅಭ್ಯರ್ಥಿ ಹೈಕಮಾಂಡ್ ತೀರ್ಮಾನ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶನಿವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮಾಜಿ ಸಂಸದೆ ರಮ್ಯಾರನ್ನು ಕಣಕ್ಕಿಳಿಸುವ ಬಗ್ಗೆ ಚಾಲ್ತಿಯಲ್ಲಿದೆ. ಆದರೆ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬುದು ಕಾಂಗ್ರೆಸ್‌ನ ಬಹುತೇಕ ನಾಯಕರ ಅಭಿಪ್ರಾಯವಾಗಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಗಮನಕ್ಕೆ ತರಲಾಗಿದೆ.
ಪಕ್ಷದ ನಾಯಕರ ವ್ಯತ್ಯಾಸ, ನಿರ್ಣಯಗಳಿಂದ ಬಿಜೆಪಿಗೆ ಸೋಲು: ಎಲ್.ಆರ್.ಶಿವರಾಮೇಗೌಡ
ಅಂತಿಮವಾಗಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದರು. ಚುನಾವಣೆಯಲ್ಲಿ ಸ್ಥಳೀಯರನ್ನು ಕಣಕ್ಕಿಳಿಸುವ ಬಗ್ಗೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಜಿಲ್ಲೆಯ ಶಾಸಕರು, ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದು ಎಲ್ಲಾ ನಾಯಕರ ಅನಿಸಿಕೆಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಸಚಿವರು ತಿಳಿಸಿದರು. ನಮ್ಮ ಕುಟುಂಬದಿಂದ ಯಾರನ್ನೂ ಕಣಕ್ಕಿಳಿಸುವುದಿಲ್ಲ. ಇದೆಲ್ಲಾ ಊಹಾಪೋಹವಾಗಿದೆ ಎಂದು ಸ್ಪಷ್ಟಪಡಿಸಿದರು.