ಜೆಡಿಎಸ್ ಮುಗಿಸುತ್ತೇನೆ ಎನ್ನುವವ ಮಾತು ಕೇಳಿದರೆ ಇಳಿವಯಸ್ಸಿನಲ್ಲೂ ನನ್ನ ದೇಹದ ಪ್ರತಿಯೊಂದು ರಕ್ತದ ಕಣವೂ ಕುದಿಯುತ್ತದೆ. ಜೆಡಿಎಸ್ ಮುಗಿದೇ ಹೋಯಿತು ಎನ್ನುವವರು ಎಲ್ಲಿಂದ ಬಂದರು.
ಕೆ.ಆರ್.ಪೇಟೆ (ಮೇ.06): ಜೆಡಿಎಸ್ ಮುಗಿಸುತ್ತೇನೆ ಎನ್ನುವವ ಮಾತು ಕೇಳಿದರೆ ಇಳಿವಯಸ್ಸಿನಲ್ಲೂ ನನ್ನ ದೇಹದ ಪ್ರತಿಯೊಂದು ರಕ್ತದ ಕಣವೂ ಕುದಿಯುತ್ತದೆ. ಜೆಡಿಎಸ್ ಮುಗಿದೇ ಹೋಯಿತು ಎನ್ನುವವರು ಎಲ್ಲಿಂದ ಬಂದರು. ಜೆಡಿಎಸ್ ಬಗ್ಗೆ ಮಾತನಾಡುವ ಮುನ್ನ ಎಚ್ಚರದಿಂದ ಇರುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರೋಧಿಗಳಿಗೆ ತಿರುಗೇಟು ನೀಡಿದರು. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಪರ ಪಟ್ಟಣದ ಪುರಸಭಾ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಬಹಿರಂಗ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿಗೆ ವಲಸೆ ಬಂದ ರಾಜಕಾರಣಿಯೊಬ್ಬ ಜೆಡಿಎಸ್ ಪಕ್ಷವನ್ನು ಮುಗಿಸುತ್ತೇನೆ ಎಂದು ಹೇಳುತ್ತಿದ್ದಾನೆ ಎಂದು ಪರೋಕ್ಷವಾಗಿ ಸಚಿವ ಕೆ.ಸಿ.ನಾರಾಯಣಗೌಡರಿಗೆ ತಿವಿದರಲ್ಲದೆ, ನನ್ನ ಜೀವನ ಕಡೆಯ ಉಸಿರಿರುವವರೆಗೂ ನನ್ನ ನೀರಾವರಿ ಹೋರಾಟ ನಿಲ್ಲಿಸುವುದಿಲ್ಲ ಎಂದರು. ಮುಸ್ಲಿಂ ಮೀಸಲಾತಿ ನೀಡಿದ್ದು ನಾನು: ಮುಸ್ಲಿಂ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡರು, ಅವರಿಗೆ ಮೀಸಲಾತಿ ಕೊಟ್ಟಿದ್ದು ನಾವು. ದೇಶದ ಯಾವುದೇ ಪ್ರಧಾನಿ ಕಾಶ್ಮೀರಕ್ಕೆ ಕಾಲಿಡಲು ಹೆದರುತ್ತಿದ್ದ ಸನ್ನಿವೇಶದಲ್ಲಿ ಅಲ್ಲಿಗೆ ಹೋಗಿ ಅಲ್ಲಿನ ಜನರ ಪ್ರೀತಿ ಸಂಪಾದಿಸಿದವನು ನಾನು. ಇಂದು ರಾಜ್ಯದಲ್ಲಿ ಲಿಂಗಾಯತ, ಹಾಲುಮತ, ನಾಯಕ, ದಲಿತರು ಸೇರಿದಂತೆ ಎಲ್ಲಾ ಸಮುದಾಯದ ಜನ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ: ಪತಿ ಶವದ ಮುಂದೆ ಸಾವನ್ನಪ್ಪಿದ ಪತ್ನಿ
ಪ್ರಾದೇಶಿಕ ಪಕ್ಷ ಬೆಂಬಲಿಸಿ: ತಮಿಳುನಾಡಿನಲ್ಲಿ ಒಬ್ಬರೇ ಒಬ್ಬರು ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿ ಶಾಸಕರಾಗಲಿ ಇಲ್ಲ. ಅವರನ್ನು ನೋಡಿ ನಮ್ಮ ರಾಜ್ಯದ ಜನತೆ ತಿಳಿದುಕೊಳ್ಳ ಬೇಕು. ಪ್ರಾದೇಶಿಕ ಪಕ್ಷ ಬೆಂಬಲಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮನವಿ ಮಾಡಿದರು. ತಾಲೂಕಿನ ಸುಗ್ಗನಹಳ್ಳಿ ಮತ್ತು ಕೈಲಾಂಚ ಗ್ರಾಮದಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ ಅವರು, ನಮ್ಮ ನಾಡಿನ ಜನತೆ ಕುಡಿಯುವ ನೀರಿಗಾಗಿ ಮೇಕೆದಾಟು ಅಣೆಕಟ್ಟೆನಿರ್ಮಾಣ ಮಾಡಲು ಅಡ್ಡಪಡಿಸುವ ತಮಿಳುನಾಡಿನವರು ಸೇಲಂ ಜಿಲ್ಲೆಯಲ್ಲಿ 6 ಲಕ್ಷ ಎಕರೆಗೆ ನೀರಾವರಿ ಮಾಡಿಕೊಳ್ಳುತ್ತದೆ. ಕೇಂದ್ರ ಸರ್ಕಾರ ತಮಿಳುನಾಡಿನ ಪ್ರಾದೇಶಿಕ ಪಕ್ಷದ ಬಲ ನೋಡಿ ನ್ಯಾಯದ ಪರ ನಿಲ್ಲದೆ ಮೌನ ವಹಿಸುತ್ತಿದೆ. ನಾಡಿನ ಹಿತದೃಷ್ಟಿಯಿಂದ ಎಲ್ಲರೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ- ಕಾಂಗ್ರೆಸ್ ಬೆಂಬಲಿಸಲಿಲ್ಲ: ಲೋಕಸಭೆಯಲ್ಲಿ ನಾನು ಕಾವೇರಿ ವಿಚಾರವನ್ನು ಪ್ರಸ್ತಾಪಿಸಿದಾಗ ರಾಜ್ಯದಿಂದ ಆಯ್ಕೆಯಾಗಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರು ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಕಾಂಗ್ರೆಸ್‌ನಲ್ಲಿದ್ದ ಎಸ್.ಎಂ.ಕೃಷ್ಣ, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಯಾರೂ ದನಿಗೂಡಿಸಲಿಲ್ಲ. 16 ಮಂದಿ ಬಿಜೆಪಿ ಎಂಪಿಗಳಿದ್ದರು ನನ್ನ ಬೆಂಬಲಕ್ಕೆ ಬರಲಿಲ್ಲ. ಅನಂತ್‌ಕುಮಾರ್ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡೆ. ಅವರು ಬೆಳಿಗ್ಗೆ ಮಾತನಾಡುತ್ತೇನೆ ಅಂದವರು ಪತ್ತೆಯೇ ಇಲ್ಲವಾದರು ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್, ಜೆಡಿಎಸ್ ಸಜ್ಜು: ಕೊರಟಗೆರೆಯಲ್ಲಿ ಪರಂಗೆ ‘ಕೈ’ ಹಿಡಿಯುತ್ತಾ ಅದೃಷ್ಟ?
ಕಾವೇರಿ ವಿಚಾರವಾಗಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದರೆ ಅವರು ತಮಿಳುನಾಡಿನಲ್ಲಿ 40 ಸಂಸದರು ಇದ್ದಾರೆ. ಅವರ ಬೆಂಬಲ ಬೇಕು ನೀವು ಕೋರ್ಟಿಗೆ ಹೋಗಿ ಎಂದು ಅಲವತ್ತುಕೊಂಡರು. ಇಗ್ಗಲೂರು ಮತ್ತು ಮಂಚನಬಲೆ ಅಣೆಕಟ್ಟನ್ನು ಕಟ್ಟಲು ಯಾವ ವಾಜಪೇಯಿ, ಮನಮೋಹನ್ ಸಿಂಗ್, ಮೋದಿ ಹಣ ನೀಡಿಲಿಲ್ಲ. ಅದು ರೈತರ ಪರಿಶ್ರಮದ ಹಣದಿಂದ ಕಟ್ಟಿದ್ದೇನೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.