ವಿಧಾನಸಭೆ ಚುನಾವಣೆ ಇನ್ನೂ ಮೂರು ತಿಂಗಳ ಅಷ್ಟೇ ಬಾಕಿ ಇರುವಾಗ ಕಾಂಗ್ರೆಸ್ ನ ಗೆಲುವಿನ ನಾಗಲೋಟಕ್ಕೆ ಕೆಸಿಆರ್ ಪ್ರಕರಣ ತಣ್ಣೀರೆರಚಿದ ಹಾಗೇ ಕಂಡು ಬರುತ್ತಿದೆ. ಈ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಹೆಸರು ಕೇಳಿ ಬಂದಿದೆ.
ವರದಿ- ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಜ.21): ವಿಧಾನಸಭೆ ಚುನಾವಣೆ ಇನ್ನೂ ಮೂರು ತಿಂಗಳ ಅಷ್ಟೇ ಬಾಕಿ ಇರುವಾಗ ಕಾಂಗ್ರೆಸ್ ನ ಗೆಲುವಿನ ನಾಗಲೋಟಕ್ಕೆ ಕೆಸಿಆರ್ ಪ್ರಕರಣ ತಣ್ಣೀರೆರಚಿದ ಹಾಗೇ ಕಂಡು ಬರುತ್ತಿದೆ. ಒಂದಲ್ಲಾ ಒಂದು ಪ್ರಕರಣದಲ್ಲಿ ಬಿಜೆಪಿ ತಪ್ಪುಗಳನ್ನ ಟಾರ್ಗೆಟ್ ಮಾಡಿ ಫೈಟ್ ಮಾಡುತ್ತಿದ್ದ ಕಾಂಗ್ರೆಸ್ ಈಗ ಮುಜುಗರದ ಸನ್ನಿವೇಶ ಎದುರಿಸುತ್ತಿದೆ.
ರಾಜ್ಯ ರಾಜಕಾರಣ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) 500 ಕೋಟಿ ಆಫರ್ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಶಾಸಕ ಜಮೀರ್ ಕೆಸಿಆರ್ ಭೇಟಿ ಮಾಡಿದ ಬೆನ್ನಲ್ಲೆ ಕಾಂಗ್ರೆಸ್ ನಾಯಕರೊಬ್ಬರು ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಲು 500 ಕೋಟಿ ಆಫರ್ ಬಂದಿದೆ ಎನ್ನುವ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದ್ದು, ಈ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮದ್ ಹೆಸರು ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಜಮೀರ್ ಅಹಮದ್ ಹೆಸರು ಕೇಳಿ ಬಂದಿದ್ದು, ಕಾಂಗ್ರೆಸ್ ನ ಯಾವ ನಾಯಕರು ಕೂಡ ಸಮರ್ಥಿಸಿಕೊಳ್ಳುತ್ತಿಲ್ಲ. ಇದರಿಂದ ಬೇಸತ್ತಿರುವ ಜಮೀರ್ ಕೈ ನಾಯಕರ ವಿರುದ್ದು ಮುನಿಸಿಕೊಂಡಿದ್ದಾರೆ.
ಕೆಸಿಆರ್‌ನಿಂದ 500 ಕೋಟಿ ಆಫರ್ ಆರೋಪ: ಶಾಸಕ ಜಮೀರ್ ಖಾನ್ ಹೇಳಿದ್ದೇನು?
ಮೈಸೂರಿನಲ್ಲಿ ಕಾರ್ಯಕ್ರಮವಿದ್ದರೂ ಹಾಜರಾಗದ ಜಮೀರ್: ಕಳೆದೆರೆಡು ದಿನಗಳಿಂದ ಮೈಸೂರಿನ ಬನ್ನಿಮಂಟಪದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿರುವ ಶಾಸಕ ಜಮೀರ್ ಅಹಮದ್, ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಮೈಸೂರಿಗೆ ಬಂದರೂ ಅವರ ಜೊತೆ ಕಾಣಿಸಿಕೊಂಡಿರಲಿಲ್ಲ. ನಿನ್ನೆಯಷ್ಟೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೆಡದ ಜೆಡಿಎಸ್ ಪಕ್ಷದ ಪ್ರಮುಖರನ್ನ ಕಾಂಗ್ರೆಸ್ ಸೇರಿಸಿಕೊಳ್ಳುವ ಕಾರ್ಯಕ್ರಮಕ್ಕೆ ಮೈಸೂರಿನಲ್ಲೇ ಇದ್ದ ಜಮೀರ್ ಗೈರಾಗಿದ್ದರು. ಬೆಳಗ್ಗೆ ನಮಾಜ್ ಮುಗಿಸಿ ಹೋಟೆಲ್ ನ ರೂಮ್ ಸೇರಿಕೊಂಡ ಜಮೀರ್ ಯಾರ ಭೇಟಿಗೂ ಅವಕಾಶ ಕೊಡದೆ ಸಂಜೆಯವರೆಗೂ ಹೋಟೆಲ್ ನಿಂದ ಹೊರಗೆ ಬಂದಿರಲಿಲ್ಲ. ಇದು ಕೈ ನಾಯಕರ ವಿರುದ್ಧ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ತೋರಿಸುತ್ತಿತ್ತು.
ನನಗೆ ಯಾವುದೇ ಆಫರ್ ಬಗ್ಗೆ ಗೊತ್ತಿಲ್ಲ: ಈ ಬಗ್ಗೆ ಮಾತನಾಡಿದ ಜಮೀರ್ ನಾನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನ ಭೇಟಿ ಮಾಡಿದ್ದು ನಿಜ. ಆದರೆ, ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಯಾವುದೇ ಆಫರ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಎಲ್ಲ ಆರೋಪದಿಂದ ತಾವು ಮುಕ್ತವಾಗಿದ್ದೇವೆ ಎಂಬಂತೆ ಹೇಳಿಕೊಂಡಿದ್ದಾರೆ.
Assembly election: ಕಾಂಗ್ರೆಸ್ ಬಿಟ್ಟು ಬಿಆರ್‌ಎಸ್‌ನತ್ತ ಜಮೀರ್? ಕೈ ಹೈಕಮಾಂಡ್ ಬುಲಾವ್
ಜಮೀರ್ ಜೊತೆ ಸಿದ್ದರಾಮಯ್ಯ ಗುಪ್ತ ಸಭೆ: ಇನ್ನು ನಿನ್ನೆ ದಿನವಿಡಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಮನೆಗೆ ಜಮೀರ್ ಅವರನ್ನ ಕರೆಸಿಕೊಳ್ಳದೆ ತಾವೇ ಜಮೀರ್ ಇದ್ದ ಹೋಟೆಲ್ ಗೆ ತೆರಳಿದ್ದರು. ಇದು ಅನುಮಾನಕ್ಕೆ ಇನ್ನಷ್ಟು ಪುಷ್ಟಿಯನ್ನ ಕೊಟ್ಟಿದೆ. ಸುಮಾರು 45 ನಿಮಿಷಗಳ ಕಾಲ ಜಮೀರ್ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಗೌಪ್ಯ ಸಭೆ ನಡೆಸಿದ್ದರು. ಈ ವೇಳೆ ಮಾಧ್ಯಮಗಳನ್ನ ಕಂಡು ಗರಂ ಆದ ಸಿದ್ದರಾಮಯ್ಯ, ಇದು ಖಾಸಗಿ ಮೀಟಿಂಗ್ ಯಾಕೆ ಬರ್ತೀರಾ ಅಂಥಾ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದರು.
ಕಾಂಗ್ರೆಸ್‌ನಲ್ಲಿ ದೊಡ್ಡ ಬಿರುಕು: ಒಟ್ಟಾರೆ ಇಡೀ ಪ್ರಕರಣವನ್ನ ಗಮನಿಸಿದರೆ ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗರು ಎಂಬ ಬಿರುಕು ದೊಡ್ಡದಾಗಿ ಕಾಣುತ್ತಿದೆ. ಜಮೀರ್ ಅವರನ್ನ ಯಾರು ಸಮರ್ಧಿಸಿಕೊಳ್ಳುತ್ತಿಲ್ಲ. ಆದರೆ ತಮ್ಮ ಬೆಂಬಲಿಗರನ್ನ ಕಾಪಾಡಿಕೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ಮಾತ್ರ ಏಕಾಂಗಿ ತಿಣುಕಾಡುತ್ತಿರುವುದು ಇಂದು ಕಂಡು ಬಂದಿತು.