
ಬೆಂಗಳೂರು (ಜು.14): ಕಾಂಗ್ರೆಸ್ ಪಾರ್ಟಿ ಫಂಡ್ ಕಲೆಕ್ಟ್ ಮಾಡುವುದಕ್ಕಾಗಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮಾಡಲು 18,500 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ಇದು ಡಾಲರ್ಸ್ ಕಾಲನಿ ಮತ್ತು ಕೋರಮಂಗಲದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕೋಟ್ಯಧಿಪತಿ ಸಂಬಂಧಿಕರಿಗೆ ಮಾತ್ರ ಉಪಯೋಗ ಆಗಲಿದೆ. ಬೆಂಗಳೂರಿನ ಶೇ.10 ಜನರಿಗೆ ಉಪಯೋಗ ಆಗುವ ಟನಲ್ ರಸ್ತೆಯನ್ನು ಬಾಕಿ ಶೇ.90 ಜನರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಅತಿ ಹೆಚ್ಚು ಅನ್ಯಾಯವಾಗುತ್ತಿದೆ. ಮೂಲಸೌಕರ್ಯ ನಿರ್ಲಕ್ಷಿಸಿದ್ದಾರೆ. ಪಾರ್ಟಿ ಫಂಡ್‌ಗೆ ಮಾತ್ರ ಅವರಿಗೆ ಬೆಂಗಳೂರು ಬೇಕು. ಇದಕ್ಕಾಗಿ ಟನಲ್ ರೋಡ್ (ಸುರಂಗ ರಸ್ತೆ) ಪ್ರಾಜೆಕ್ಟ್ ಭ್ರಷ್ಟಾಚಾರಕ್ಕಾಗಿ ಮಾಡುತ್ತಿದ್ದಾರೆ. ಯಾವುದೇ ಕಾರಣದಿಂದಲೂ ಯೋಜನೆ ಸಾಧ್ಯವಿಲ್ಲ. ಹೆಬ್ಬಾಳದಿಂದ - ಡೈರಿ ಸರ್ಕಲ್ ವರೆಗೆ ಕೇವಲ ಕಾರುಗಳಿಗಾಗಿ ಈ ಯೋಜನೆ ಮಾಡುತ್ತಿದ್ದಾರೆ. ಇನ್ನು ಯೋಜನೆಯ ವಿಸ್ತೃತ ವರದಿಯಲ್ಲಿಯೇ (ಡಿಪಿಆರ್) ಸಾಕಷ್ಟು ಲೋಪವಿರುವುದು ಕಂಡುಬರುತ್ತಿದೆ ಎಂದು ಹೇಳಿದರು.
ಹೆಬ್ಬಾಳದಿಂದ ಡೈರಿ ಸರ್ಕಲ್‌ವರೆಗಿನ ಇದೇ ಮಾರ್ಗದಲ್ಲಿ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಿದರೆ ಪ್ರತಿದಿನ 25 ಸಾವಿರ ಜನ ಓಡಾಡಬಹುದು. ಇನ್ನು ಬೈಕ್, ಕಾರ್‌ಗೆ ಈ ಸುರಂಗ ಮಾರ್ಗ ಮಾಡಿದರೆ, ಈ ರಸ್ತೆಯಲ್ಲಿ ಸಾವಿರ ಜನವೂ ಓಡಾಡೋದು ಕಷ್ಟವಾಗಲಿದೆ. ಜೊತೆಗೆ, ಈ ರಸ್ತೆಯಲ್ಲಿ ಓಡಾಡಲು ಒಂದು ಕಾರ್‌ಗೆ 660 ರೂ. ಟೋಲ್ ಚಾರ್ಜ್ ಆಗಲಿದೆ. ಡಾಲರ್ಸ್ ಕಾಲೊನಿ ಹಾಗೂ ಕೋರಮಂಗಲದ ಕೋಟ್ಯಾಧಿಪತಿಗಳಿಗೆ ಮಾತ್ರ ರಸ್ತೆ ಎನ್ನುವಂತಿದೆ ಎಂದು ಟೀಕೆ ಮಾಡಿದರು.
ಡಾಲರ್ಸ್ ಕಾಲನಿಯಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಂಬಂಧಿಗಳಿಗೆ ಹಾಗೂ ಅಕ್ಕದಲ್ಲಿರುವವರಿಗೆ ಮಾತ್ರ ಈ ಟನಲ್ ರೋಡ್ ಮಾಡುತ್ತಿದ್ದಾರೆ. ಬೆಂಗಳೂರಿನ ಶೇ.90 ಜನರ ತೆರಿಗೆ ಹಣದಲ್ಲಿ ಶೇ.10 ಪರ್ಸೆಂಟ್ ಜನರಿಗೆ ಅನುಕೂಲ ಮಾಡಿಕೊಡಲು ಸುರಂಗ ರಸ್ತೆ ನಿರ್ಮಿಸಲಾಗುತ್ತಿದೆ. ಆರ್ಥಿಕ ಅಸ್ಪೃಷ್ಯತೆಯ ರಸ್ತೆ ಇದಾಗಿದೆ. ಹಣವಂತರು, ಹಣಂವಂತರಿಂದ ಹಣವಂತರಿಗಾಗಿಯೇ ಮಾಡುವ ಟನಲ್ ರೋಡ್ ಡಿಪಿಆರ್ ಅನ್ನು ಮಾಡುವುದಕ್ಕೆಂದೇ ಬಿಬಿಎಂಪಿ ₹9.5 ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ. ಇದನ್ನು ಮೆಟ್ರೋ ಪ್ರಾಜೆಕ್ಟ್‌ನವರು 1.5 ಕೋಟಿ ರೂ. ಸಿದ್ಧಪಡಿಸಿದ ಡಿಪಿಆರ್ ಆಗಿದೆ. ಅದನ್ನೇ ಕಟ್ ಆಂಡ್ ಪೇಸ್ಟ್ ಮಾಡಿ ಬಿಬಿಎಂಪಿ ನಿಯೋಜಿಸಿದ ಟೆಂಡರುದಾರರು ಡಿಪಿಆರ್ ಸಲ್ಲಿಕೆ ಮಾಡಿದ್ದಾರೆ. ಆಲ್ಟಿನಾ ಕಂಪೆನಿ ಮಧ್ಯಪ್ರದೇಶದಲ್ಲಿ 'ಡಿಬಾರ್' ಆಗಿದೆ. ಅವರಿಗೆ ಫಿಸಿಬಲಿಟಿ ಮಾಡಲು ಟೆಂಡರ್ ಕೊಟ್ಟಿದ್ದಾರೆ. ಎಸಿಬಿ ಕೇಸ್ ಎದುರಿಸುತ್ತಿರುವ ರಾಡಿಕ್ ಕನ್ಸಲ್ಟಂಟ್ ಕಂಪೆನಿಗೆ ಡಿಪಿಆರ್ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಇನ್ನು 120 ಕಿ.ಮೀ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಚಿವಾಲಯವು 8,480 ಕೋಟಿ ರೂ. ಖರ್ಚು ಮಾಡಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ 9.02 ಕಿ.ಮೀ. ಉದ್ದದ ಅಟಲ್ ಸುರಂಗ ಮಾರ್ಗವನ್ನು ಮಾಡಲು 3,309 ಕೋಟಿ ರೂ. ಖರ್ಚು ಆಗಿದೆ. ಆದರೆ, ಬೆಂಗಳೂರಿನಲ್ಲಿ 18 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡುವುದಕ್ಕೆ ಬರೋಬ್ಬರಿ 18,500 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಲೆಕ್ಕ ತೋರಿಸಲಾಗುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.