ಸದನದ ಒಳಗೆ- ಹೊರಗೆ ಕಾಂಗ್ರೆಸ್‌- ಬಿಜೆಪಿ ವಾಗ್ಯುದ್ಧ: 150 ಕೋಟಿ ಜಟಾಪಟಿ

By Kannadaprabha News  |  First Published Dec 17, 2024, 4:29 AM IST

ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್‌ ಖರ್ಗೆ, ಪತ್ರಿಕೆಯಲ್ಲಿ ಬಂದಿದ್ದನ್ನು ನಾನು ಉಲ್ಲೇಖಿಸಿದ್ದೇನೆ. ನಿಮ್ಮದೇ ವಕ್ತಾರರಾದ ಅನ್ವರ್‌ ಮಾಣಿಪ್ಪಾಡಿ ಅವರು ನೀಡಿರುವ ಹೇಳಿಕೆ ಅದು. ಒಂದು ವೇಳೆ ಅದು ತಪ್ಪಾಗಿದ್ದರೆ ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.


ವಿಧಾನಸಭೆ(ಡಿ.17):  ವಕ್ಫ್‌ ಆಸ್ತಿ ಅಕ್ರಮದ ವರದಿಯನ್ನು ಮುಚ್ಚಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 150 ಕೋಟಿ ರು. ಆಮಿಷವೊಡ್ಡಿದ್ದಾಗಿ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಹೇಳಿದ್ದಾರೆಂಬ ಕಾಂಗ್ರೆಸ್‌ ಆರೋಪ, ಈ ವಿಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ ಮತ್ತು ತಾವು ಆ ರೀತಿ ಹೇಳಿಯೇ ಇಲ್ಲ ಎಂಬ ಮಾಣಿಪ್ಪಾಡಿ ಹೇಳಿಕೆ ವಿಚಾರ ಸೋಮವಾರ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಜಟಾಪಟಿಗೆ ಕಾರಣವಾಯಿತು. ಸದನದ ಹೊರಗೂ ಆರೋಪ- ಪ್ರತ್ಯಾರೋಪ ನಡೆಯಿತು.

ಈ ವೇಳೆ ಸಿದ್ದರಾಮಯ್ಯ ಅವರಿಗೆ ಧೈರ್ಯವಿದ್ದರೆ ನನ್ನ ಮೇಲಿನ 150 ಕೋಟಿ ರು. ಆಮಿಷ ಆರೋಪ, ಅನ್ವರ್‌ ಮಾಣಿಪ್ಪಾಡಿ ಶಿಫಾರಸು ಆಧರಿಸಿ ಮಾಡಿರುವ ಉಪ ಲೋಕಾಯುಕ್ತ ತನಿಖಾ ವರದಿ ಹಾಗೂ ಮುಡಾ ಹಗರಣ ಸೇರಿ ಮೂರೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಲಿ ಎಂದು ವಿಜಯೇಂದ್ರ ಸವಾಲು ಎಸೆದರು. ಸದನದ ಹೊರಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮುಡಾ ಪ್ರಕರಣದಲ್ಲಿ ಸಿಲುಕಿದೆ. ವಾಲ್ಮೀಕಿ ಪ್ರಕರಣದಲ್ಲೂ ಮುಖ್ಯಮಂತ್ರಿಗಳ ಸೂಚನೆಯಂತೆ ಹಣ ವರ್ಗಾವಣೆ ಸಾಬೀತಾಗಿದೆ. ಇದರಿಂದ ವಿಷಯಾಂತರ ಮಾಡಲು ನನ್ನ ವಿರುದ್ಧ ಹಿಟ್‌ ಅಂಡ್‌ ರನ್‌ ಆರೋಪ ಮಾಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

Tap to resize

Latest Videos

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ: ಬಿ.ವೈ.ವಿಜಯೇಂದ್ರ

ಸೋಮವಾರ ಸಂತಾಪ ಸೂಚನಾ ನಿರ್ಣಯದ ಬಳಿಕ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್‌, ವಕ್ಫ್‌ ಕುರಿತ ಚರ್ಚೆ ವೇಳೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ವಿಜಯೇಂದ್ರ ಮೇಲೆ 150 ಕೋಟಿ ರು. ಆಮಿಷ ಒಡ್ಡಿರುವ ಆರೋಪ ಮಾಡಿದ್ದಾರೆ. ಸದಸ್ಯರ ಅನುಪಸ್ಥಿತಿಯಲ್ಲಿ ಅವರ ನೋಟಿಸ್‌ ಇಲ್ಲದೆ ಮಾತನಾಡಿರುವುದು ತಪ್ಪು. ಈ ಬಗ್ಗೆ ವಿಜಯೇಂದ್ರ ಅವರ ಸ್ಪಷ್ಟನೆಗೆ ಅವಕಾಶ ನೀಡಬೇಕು ಎಂದು ಕೋರಿದರು.

undefined

ಸ್ಪೀಕರ್‌ ಅನುಮತಿ ಬಳಿಕ ಮಾತು ಆರಂಭಿಸಿದ ವಿಜಯೇಂದ್ರ, ನನ್ನ ಅನುಪಸ್ಥಿತಿಯಲ್ಲಿ ಪ್ರಿಯಾಂಕ್‌ ಖರ್ಗೆ ಗುರುತರ ಆರೋಪ ಮಾಡಿದ್ದಾರೆ. ನಾನು ಅನ್ವರ್‌ ಮಾಣಿಪ್ಪಾಡಿ ಅವರಿಗೆ 150 ಕೋಟಿ ರು. ಆಮಿಷ ಒಡ್ಡಿರುವುದಾಗಿ ಆರೋಪ ಮಾಡಿದ್ದು, ಮುಖ್ಯಮಂತ್ರಿಗಳು ಇದನ್ನು ಪುನರುಚ್ಚರಿಸಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ಅವರು ಕಾಂಗ್ರೆಸ್ ನಾಯಕರು ವಕ್ಫ್‌ ಆಸ್ತಿ ಗುಳುಂ ಮಾಡಿರುವ ಬಗ್ಗೆ ವರದಿ ನೀಡಿದ್ದರು. ಈ ಬಗ್ಗೆ ಉಪ ಲೋಕಾಯುಕ್ತರು ತನಿಖೆ ನಡೆಸಿ 2016ರಲ್ಲಿ ತನಿಖಾ ವರದಿಯನ್ನೂ ಮಂಡಿಸಿದ್ದರು. 2016 ಮಾರ್ಚ್‌ನಲ್ಲಿ ಇದೇ ಸಿದ್ದರಾಮಯ್ಯ ಸಂಪುಟ ತನಿಖಾ ವರದಿ ತಿರಸ್ಕರಿಸಿತ್ತು. ತಡವಾಗಿ ಮುಖ್ಯಮಂತ್ರಿಗಳಿಗೆ ಸಿಬಿಐ ಮೇಲೆ ವಿಶ್ವಾಸ ಬಂದಿದ್ದು, ಅವರಿಗೆ ಧೈರ್ಯವಿದ್ದರೆ ಮಾಣಿಪ್ಪಾಡಿ ಅವರ ವರದಿ ಆಧಾರ ಮೇಲೆ ಉಪ ಲೋಕಾಯುಕ್ತ ನಡೆಸಿರುವ ತನಿಖಾ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚಿಸಿ ಸಿಬಿಐ ತನಿಖೆಗೆ ನೀಡಲಿ. ಜತೆಗೆ ಅವರ ಕುಟುಂಬವೇ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದು, ಆ ಪ್ರಕರಣವನ್ನೂ ಸಿಬಿಐ ತನಿಖೆಗೆ ನೀಡಲಿ, ಜತೆಗೆ ನನ್ನ ಮೇಲಿನ ಆರೋಪವನ್ನೂ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.

ಬಿ.ವೈ.ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆಯಾಗಲಿ: ಸಚಿವ ಕೃಷ್ಣ ಬೈರೇಗೌಡ

ವಾದ-ಪ್ರತಿವಾದ: 

ಈ ವೇಳೆ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್‌ ಖರ್ಗೆ, ಪತ್ರಿಕೆಯಲ್ಲಿ ಬಂದಿದ್ದನ್ನು ನಾನು ಉಲ್ಲೇಖಿಸಿದ್ದೇನೆ. ನಿಮ್ಮದೇ ವಕ್ತಾರರಾದ ಅನ್ವರ್‌ ಮಾಣಿಪ್ಪಾಡಿ ಅವರು ನೀಡಿರುವ ಹೇಳಿಕೆ ಅದು. ಒಂದು ವೇಳೆ ಅದು ತಪ್ಪಾಗಿದ್ದರೆ ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಸಚಿವ ಕೃಷ್ಣಬೈರೇಗೌಡ, 150 ಕೋಟಿ ರು. ಆಮಿಷ ಆರೋಪಕ್ಕಷ್ಟೇ ನೀವು ಸ್ಪಷ್ಟನೆ ನೀಡಬೇಕು. ಅದನ್ನು ಬಿಟ್ಟು ಮುಡಾ ಮತ್ತಿತರ ವಿಚಾರಗಳ ಬಗ್ಗೆ ರಾಜಕೀಯ ಭಾಷಣ ಬೇಡ. ಅಮೆರಿಕ ನ್ಯಾಯಾಲಯ ಅದಾನಿ 2,500 ಕೋಟಿ ರು. ಲಂಚ ನೀಡಿರುವುದಾಗಿ ಹೇಳಿದೆ. ಆ ಬಗ್ಗೆ ತನಿಖೆ ಮಾಡಿ ಎಂದು ಕಿಡಿಕಾರಿದರು. ಈ ವೇಳೆ ಆರೋಪ-ಪ್ರತ್ಯಾರೋಪಗಳು ಜೋರಾದಾಗ ಮಧ್ಯಪ್ರವೇಶಿಸಿದ ಸ್ಪೀಕರ್‌ ಯು.ಟಿ.ಖಾದರ್‌, ನಾನು ಹೇಳಿದಂತೆ ಇಬ್ಬರೂ ಕೇಳುವುದಿಲ್ಲ ಎನ್ನುವುದಾದರೆ ಯಾಕೆ ಹೇಳಲಿ. ಸದ್ಯ ಉತ್ತರ ಕರ್ನಾಟಕ ಬಗ್ಗೆ ಚರ್ಚೆಯಾಗಲಿ, ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಚರ್ಚೆಗೆ ತೆರೆ ಎಳೆದರು.

click me!