Karnataka Politics: ಬಿಜೆಪಿ-ಕಾಂಗ್ರೆಸ್‌ ನಡುವೆ ಕಾಶ್ಮೀರ್‌ ಫೈಲ್ಸ್‌ ಜಟಾಪಟಿ

Published : Mar 16, 2022, 08:43 AM IST
Karnataka Politics: ಬಿಜೆಪಿ-ಕಾಂಗ್ರೆಸ್‌ ನಡುವೆ ಕಾಶ್ಮೀರ್‌ ಫೈಲ್ಸ್‌ ಜಟಾಪಟಿ

ಸಾರಾಂಶ

*  ಬಜೆಟ್‌ ಚರ್ಚೆ ಬಿಟ್ಟು, ಸಿನೆಮಾ ತೋರಿಸುವ ಆಸಕ್ತಿ ಏಕೆ: ಕಾಂಗ್ರೆಸ್‌ ಟೀಕೆ *  ಭಾರತದಲ್ಲಲ್ಲದೇ ಪಾಕ್‌ನಲ್ಲಿ ತೋರಿಸೋಕೆ ಆಗುತ್ತಾ: ಬಿಜೆಪಿ ತಿರುಗೇಟು *  ಸಭಾಪತಿ ಹೊರಟ್ಟಿ ಸರ್ಕಾರದ ಪ್ರಕಟಣೆ ಓದಿದ್ದಕ್ಕೆ ಕಾಂಗ್ರೆಸ್ಸಿಗರ ಆಕ್ರೋಶ  

ಬೆಂಗಳೂರು(ಮಾ.16): ಹಿಂದಿ(Hindi) ಚಲನಚಿತ್ರ ‘ದಿ ಕಾಶ್ಮೀರ್‌ ಫೈಲ್ಸ್‌’(The Kashmir Files) ಚಿತ್ರ ವೀಕ್ಷಣೆಗೆ ಪರಿಷತ್‌ ಸದಸ್ಯರಿಗೆ ಆಹ್ವಾನಿಸುವ ಸರ್ಕಾರದ ಪ್ರಕಟಣೆಯನ್ನು ಸದನದಲ್ಲಿ ಉಲ್ಲೇಖಿಸಿದ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಅವರ ಕ್ರಮಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ಸರ್ಕಾರದ ವಿರುದ್ಧ ಹರಿಹಾಯ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ತೀವ್ರ ವಾಗ್ವಾದ ನಡೆಸಿದ ಘಟನೆ ನಡೆಯಿತು.

ಒಂದು ಹಂತದಲ್ಲಿ ಪ್ರಕಟಣೆ ವಾಪಸ್‌ ಪಡೆಯಬೇಕು ಎಂದು ಕಾಂಗ್ರೆಸ್‌(Congress) ಸದಸ್ಯರು ಸಭಾಪತಿಗಳ ಮುಂದೆ ಧರಣಿ ನಡೆಸಿದರು. ಈ ಬಗ್ಗೆ ತೀವ್ರ ಮಾತಿನ ಚಕಮಕಿ, ರಾಜಕೀಯ ಆರೋಪ-ಪ್ರತ್ಯಾರೋಪಗಳ ವಿನಿಮಯ ಸಹ ನಡೆದು ಗದ್ದಲದ ವಾತಾವರಣ ಉಂಟಾದ ಪರಿಣಾಮ ಸಭಾಪತಿಗಳು ಸದನವನ್ನು ಕೆಲ ನಿಮಿಷಗಳ ಕಾಲ ಮುಂದೂಡಿದರು. ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪರಿಷತ್‌ ಸದಸ್ಯರಿಗೆ ಸಂಜೆ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಚಿತ್ರ ವೀಕ್ಷಣೆ ಮಾಡಬಹುದು ಎಂದು ಸರ್ಕಾರದ ಪ್ರಕಟಣೆಯನ್ನು ಓದಿದರು.

The Kashmir Files: ಕಾಶ್ಮೀರ್ ಫೈಲ್ಸ್‌ಗೆ ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ

ತಕ್ಷಣ ಎದ್ದು ನಿಂತ ಕಾಂಗ್ರೆಸ್‌ ಸದಸ್ಯ ಸಲೀಂ ಅಹಮದ್‌(Saleem Ahmed) ಅವರು, ಮಹತ್ವದ್ದಾಗಿರುವ ಬಜೆಟ್‌ ಮೇಲಿನ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಸಿನಿಮಾ(Movie) ತೋರಿಸುವುದು ಯಾಕೆ. ಇಂತಹ ಪ್ರಕಟಣೆ ಸಭಾಪತಿ(Speaker) ಪೀಠದಿಂದ ಬರಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು, ಇಷ್ಟವಿದ್ದವರು ಸಿನಿಮಾ ನೋಡಬಹುದು, ಯಾರಿಗೂ ಕಡ್ಡಾಯವಿಲ್ಲ ಎಂದು ಹೇಳಿದರು. ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ‘ಫರ್ಜಾನಾ’ ಮತ್ತು ‘ವಾಟರ್‌’ ಎಂಬ ಎರಡು ಸಿನಿಮಾ ಇದೆ ಅವುಗಳನ್ನು ತೋರಿಸಿ, ಜೊತೆಗೆ ಗುಜರಾತ್‌ ಫೈಲ್ಸ್‌ ಸಹ ತೋರಿಸಿ ಎಂದರು.

ಮುಂದುವರೆದು ಪ್ರಕಟಣೆ ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ಸಭಾಪತಿಗಳ ಮುಂದೆ ಬಂದು ಪ್ರತಿಭಟನೆ ನಡೆಸತೊಡಗಿದರು. ಇದಕ್ಕೆ ಬಿಜೆಪಿ(BJP) ಸದಸ್ಯರು ನಿಮ್ಮ ಆರ್ಭಟದ ಮಾತುಗಳು ನಡೆಯುವುದಿಲ್ಲ, ಪಂಚರಾಜ್ಯಗಳ ಚುನಾವಣೆಯಲ್ಲಿ ಜನರು ನಿಮಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ‘ಕಾಶ್ಮೀರ್‌ ಫೈಲ್ಸ್‌’ ಚಿತ್ರವನ್ನು ಭಾರತದಲ್ಲಿ ತೋರಿಸದೇ ಪಾಕಿಸ್ತಾನದಲ್ಲಿ ತೋರಿಸಲು ಆಗುತ್ತದೆಯೇ ಎಂದು ತಿರುಗೇಟು ನೀಡಿದರು. ಇದರಿಂದ ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು ಕೆಲಕಾಲ ಮುಂದೂಡಿದ ಸಭಾಪತಿಗಳು ಸಂಧಾನ ಸಭೆ ನಡೆಸಿದರು.

ಇದಕ್ಕೆ ಬಿ.ಕೆ. ಹರಿಪ್ರಸಾದ್‌ ಅವರು, ನೀವು ಪಾಕಿಸ್ತಾನದ(Pakistan) ಪರವಾಗಿ ಇರುವವರು, ಬರ್ತ್‌ ಡೇ ಸಲುವಾಗಿ ಪಾಕಿಸ್ತಾನಕ್ಕೆ ಹೋಗಿದ್ದ ನೀತಿಗೆಟ್ಟಪ್ರಧಾನಿ ನಿಮ್ಮವರು ಎಂದು ವ್ಯಂಗ್ಯವಾಡಿದರು. ಈ ಮಾತಿಗೆ ಬಿಜೆಪಿಯ ಅನೇಕ ಸದಸ್ಯರು ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಪ್ರಕಟಣೆ ವಾಪಸ್‌ ಪಡೆಯಬೇಕೆಂಬ ಕಾಂಗ್ರೆಸ್‌ ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಸಭಾಪತಿ ಹೊರಟ್ಟಿ ಅವರು, ಸರ್ಕಾರ ಹಲವು ಪ್ರಕಟಣೆಗಳನ್ನು ಕಳುಹಿಸುತ್ತದೆ. ಅದನ್ನು ಓದುವುದು ಅನಿವಾರ್ಯ ಎಂದು ಸ್ಪಷ್ಟನೆ ನೀಡಿದರು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು, ಪ್ರತಿಪಕ್ಷದ ನಾಯಕರು ತಾಳ್ಮೆಯಿಂದ ವರ್ತಿಸಬೇಕು, ಮಿತಿ ಮೀರಿ ಮಾತನಾಡಬಾರದು ಎಂದು ಹೇಳಿದರು. ಇದಕ್ಕೆ ಹರಿಪ್ರಸಾದ್‌ ಅವರು,ನಾವು ಯಾವ ಸಿನಿಮಾ ನೋಡಬೇಕು ಎಂದು ಸದನದಲ್ಲಿ ಹೇಳುವ ಹಾಗಿಲ್ಲ. ಕೆಲವರು ಸದನದಲ್ಲಿ ಬ್ಲೂ ಫಿಲಿಂ ನೋಡಿದ್ದಾರೆ, ಹಾಗಾದರೆ ನಾವು ಬ್ಲೂ ಫಿಲಂ ನೋಡಬೇಕಾ, ಸರ್ಕಾರ ಪಿಕ್ಚರ್‌ ತೋರಿಸಲು ಇದೆಯೇ, ಪೀಠದಿಂದ ಇದನ್ನು ಯಾಕೆ ಹೇಳಿಸುತ್ತಿರಿ ಎಂದರು. ಸರ್ಕಾರ ಇರುವುದು ಜನರ ಸೇವೆ ಮಾಡಲು, ಪಿಕ್ಚರ್‌ ತೋರಿಸಲು ಅಲ್ಲ ಎಂದಾಗ, ಸಚಿವ ಬೈರತಿ ಬಸವರಾಜ ಅವರು, ನಿಮ್ಮ ಈ ರೀತಿಯ ಧೋರಣೆಯಿಂದಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಸೋತಿದೆ ಎಂದು ತಿರುಗೇಟು ನೀಡಿದರು.

The Kashmir Files: ಎಲ್ಲರೂ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಿ: ಮೋದಿ

ಸಚಿವರ ಮಾತಿಗೆ ಅಷ್ಠೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್‌ ಪಾಲಿಕೆ ಸದಸ್ಯರಾಗಲು, ಶಾಸಕರಾಗಲು ಕಾಂಗ್ರೆಸ್‌ ಬೇಕು, ಮಂತ್ರಿಯಾಗಲು ಬಿಜೆಪಿಗೆ ಹೋಗಿದ್ದೀರಿ ಎಂದಾಗ, ನ್ಯಾಯಯುತವಾಗಿ ಗೆದ್ದು ಬಂದಿದ್ದೇವೆ. ನೀವೇನು ಎಂಬುದು ಜನರಿಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು. ಇದರಿಂದ ವಾಗ್ವಾದ ಮತ್ತಷ್ಟುತೀವರವಾಯಿತು. ಹೀಗಾಗಿ ಸಭಾಪತಿಗಳು ಸದನವನ್ನು ಕೆಲ ನಿಮಿಷಗಳ ಕಾಲ ಮುಂದೂಡಿದರು.

ತಮ್ಮ ಕಚೇರಿಯಲ್ಲಿ ಉಭಯ ಪಕ್ಷಗಳ ಮುಖಂಡರ ಜೊತೆ ಸಂಧಾನ ಮಾತುಕತೆ ನಡೆಸಿದರು. ನಂತರ ಪುನಃ ಸದನ ಆರಂಭವಾದಾಗ, ಇಷ್ಟವಿದ್ದವರು ಸಿನಿಮಾ ನೋಡಲಿ, ಯಾರಿಗೂ ಕಡ್ಡಾಯ ಇಲ್ಲ ಎಂದು ಹೇಳಿ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!