ಹೊಣೆ ಹೊತ್ತು ರಾಜೀನಾಮೆ ಕೊಡಿ : ಸಿಎಂ ಸಿದ್ದರಾಮಯ್ಯಗೆ ಬಿವೈವಿ ಪತ್ರ

Published : Jun 11, 2025, 04:50 AM IST
BY Vijayendra

ಸಾರಾಂಶ

ಸಿದ್ದರಾಮಯ್ಯನವರೇ ಇತಿಹಾಸ ಎಂದಿಗೂ ನಿಮ್ಮನ್ನು ಕ್ಷಮಿಸಲಾರದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ.

 ಬೆಂಗಳೂರು : ‘ಸಿದ್ದರಾಮಯ್ಯನವರೇ, ನ್ಯಾಯವಲ್ಲದ ಸಾವುಗಳಿಗೆ ಕನಿಷ್ಠ ನ್ಯಾಯ ಸಿಗಬೇಕೆಂದರೆ ಹೊಣೆಗೇಡಿತನದ ನಿರ್ಧಾರ ಕೈಗೊಂಡ ನೀವು ನೈತಿಕ ಜವಾಬ್ದಾರಿಯನ್ನು ಹೊರಲೇಬೇಕು. ಇಲ್ಲದಿದ್ದರೆ ಇತಿಹಾಸ ಎಂದಿಗೂ ನಿಮ್ಮನ್ನು ಕ್ಷಮಿಸಲಾರದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೂರು ಪುಟಗಳ ಬಹಿರಂಗ ಪತ್ರ ಬರೆದಿರುವ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೂ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜೂ.4ರಂದು ಕರ್ನಾಟಕದ ಇತಿಹಾಸದಲ್ಲಿ ಕರಾಳ ಅಧ್ಯಾಯದ ದಿನ. ಕ್ರಿಕೆಟ್ ಅಭಿಮಾನದ ಲಾಭ ಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ನೀವು ಮತ್ತು ನಿಮ್ಮ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಘಟನೆ ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ. ಇಷ್ಟಾಗಿಯೂ ಸರ್ಕಾರಕ್ಕೂ ಈ ಘಟನೆಗೂ ಏನೇನೂ ಸಂಬಂಧವಿಲ್ಲ, ಸರ್ಕಾರ ಈ ಘಟನೆಯ ಜವಾಬ್ದಾರಿಯನ್ನು ಹೊರಲಾಗದು ಎಂಬ ನಿಮ್ಮ ಹೇಳಿಕೆ ಪಲಾಯನವಾದ ಹಾಗೂ ನಿರ್ಲಜ್ಜತನದ ಹೊಣೆಗೇಡಿತನವನ್ನು ಪ್ರತಿಬಿಂಬಿಸುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಭಂಡತನದ ನಿಮ್ಮ ನಡೆ ಕರ್ನಾಟಕದ ನೈತಿಕ ರಾಜಕಾರಣವನ್ನು ಅವಮಾನಿಸುತ್ತಿದೆ ಎಂದು ಟೀಕಿಸಿದ್ದಾರೆ.

ಕಾಲ್ತುಳಿತದ ಘೋರ ದುರಂತದ ಅಧ್ಯಾಯದಲ್ಲಿ ಕಳಂಕಿತ ಸ್ಥಾನದಲ್ಲಿರುವ ನೀವು, ಉಪಮುಖ್ಯಮಂತ್ರಿ ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ನಿಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ. ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಆರೋಪಗಳು ಬಂದಾಗ ನೈತಿಕ ಜವಾಬ್ದಾರಿ ಹೊತ್ತು ರಾಜಿನಾಮೆ ನೀಡಿದ ಪ್ರಸಂಗಗಳು ಪರಂಪರೆಯ ರಾಜಕಾರಣದ ಘನತೆಯ ಬಿಂದುಗಳಾಗಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್‌.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಸೇರಿದಂತೆ ಇತರರು ಮುಖ್ಯಮಂತ್ರಿಗಳ ಸ್ಥಾನದಲ್ಲಿ ಕುಳಿತು ಕರ್ನಾಟಕದ ಜನರ ಹೃದಯಗಳಲ್ಲಿ ಶಾಶ್ವತ ಗೌರವ-ಅಭಿಮಾನಗಳನ್ನು ಉಳಿಸಿಕೊಂಡಿದ್ದಾರೆ. ಈ ಪರಂಪರೆ ಮುಂದುವರೆಯಬೇಕೆನ್ನುವುದು ಕರ್ನಾಟಕದ ಜನತೆಯ ಅಭಿಪ್ರಾಯವಾಗಿದೆ. ಇದಕ್ಕೆ ಅಪಚಾರವಾಗದಂತೆ ತಾವು ನಡೆದುಕೊಳ್ಳಬೇಕೆನ್ನುವುದು ನಮ್ಮ ಒತ್ತಾಯ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ