ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್‌ ದಿಢೀರ್‌ ಬುಲಾವ್‌: 8-10 ನಿಷ್ಕ್ರಿಯ, ಕೆಲ ಹಿರಿಯ ಮಂತ್ರಿಗಳಿಗೆ ಕೊಕ್‌?

Kannadaprabha News   | Kannada Prabha
Published : Jun 10, 2025, 01:39 AM IST
Karnataka CM Siddaramaiah

ಸಾರಾಂಶ

ದೆಹಲಿಯಲ್ಲಿ ನಡೆಯಲಿರುವ ಈ ಸಭೆಗೆ ಆಗಮಿಸುವಂತೆ ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ಬುಲಾವ್‌ ನೀಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈಗಾಗಲೇ ದೆಹಲಿಯಲ್ಲಿ ಇದ್ದಾರೆ.

ಬೆಂಗಳೂರು (ಜೂ.10): ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ ರಾಜ್ಯ ಸರ್ಕಾರದ ಇಮೇಜ್‌ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ದಿಸೆಯಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್‌ ಗಾಂಧಿ ಚರ್ಚೆ ನಡೆಸಲಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ ಈ ಸಭೆಗೆ ಆಗಮಿಸುವಂತೆ ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ಬುಲಾವ್‌ ನೀಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಗೆ ತೆರಳಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈಗಾಗಲೇ ದೆಹಲಿಯಲ್ಲಿ ಇದ್ದಾರೆ. ಈ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು ಚರ್ಚೆ ನಡೆಸಲಿದ್ದಾರೆ.

8 ರಿಂದ 10 ಸಚಿವರಿಗೆ ಕೊಕ್?: ಈ ಸಭೆಯಲ್ಲಿ ಮುಖ್ಯಮಂತ್ರಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್‌ ವಲಯದಲ್ಲಿ ಹಾಲಿ ನಡೆದಿರುವ ಚರ್ಚೆಗಳ ಪ್ರಕಾರ, ರಾಜ್ಯ ಸರ್ಕಾರದ ಎಂಟರಿಂದ ಹತ್ತು ಮಂದಿ ಹಿರಿಯ ಸಚಿವರುಗಳ ಕಾರ್ಯವೈಖರಿ ಬಗ್ಗೆ ಹೈಕಮಾಂಡ್‌ ತೀವ್ರ ಅಸಮಾಧಾನ ಹೊಂದಿದೆ. ಅವರೆಲ್ಲರನ್ನೂ ಸಂಪುಟದಿಂದ ಕೈಬಿಟ್ಟು ಉತ್ಸಾಹಿ ಶಾಸಕರುಗಳಿಗೆ ಅವಕಾಶ ನೀಡುವ ಆಲೋಚನೆ ಹೊಂದಿದೆ.

ಹಾಲಿ ಸಚಿವ ಸಂಪುಟದ 8 ರಿಂದ 10 ಸಚಿವರು ಉತ್ತಮ ಆಡಳಿತ ನೀಡುವ ಬಗ್ಗೆ ಗಮನ ಕೊಡುತ್ತಿಲ್ಲ. ಅಲ್ಲದೆ, ಭ್ರಷ್ಟಾಚಾರ ತಡೆಗೂ ಕ್ರಮ ಕೈಗೊಂಡಿಲ್ಲ. ವಿಶೇಷವಾಗಿ ಸಚಿವರ ವಿಶೇಷಾಧಿಕಾರಿಗಳು ಹಾಗೂ ಆಪ್ತರೇ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ಆರೋಪಗಳಿದ್ದರೂ ಆ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಅಷ್ಟೇ ಏಕೆ, ಈ ಸಚಿವರು ವಿಧಾನಸೌಧದತ್ತ ತಲೆಹಾಕುತ್ತಿಲ್ಲ ಎಂಬ ವರದಿಗಳು ಹೈಕಮಾಂಡ್‌ ಮುಟ್ಟಿವೆ. ಅಲ್ಲದೆ, ಸಂಪುಟದ ಕೆಲ ಹಿರಿಯ ಸಚಿವರಿಗೂ ಕೊಕ್‌ ನೀಡಿ, ಪಕ್ಷದ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುವ ಇರಾದೆಯೂ ಹೈಕಮಾಂಡ್‌ಗೆ ಇದೆ ಎನ್ನಲಾಗಿದೆ.

ಸ್ಪೀಕರ್‌-ಸಭಾಪತಿ ಬದಲಾವಣೆ?: ಸಂಪುಟ ಪುನಾರಚನೆ ವೇಳೆ ವಿಧಾನಸಭೆ ಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸಭಾಪತಿ ಸ್ಥಾನಗಳಿಗೂ ಬದಲಾವಣೆ ತರುವ ಸಾಧ್ಯತೆ ಇದೆ. ಜೊತೆಗೆ ವಿಧಾನ ಪರಿಷತ್‌ನ ಪಕ್ಷದ ಕೆಲ ಹಿರಿಯ ಸದಸ್ಯರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವ ಆಲೋಚನೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು, ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಹೈಕಮಾಂಡ್‌ ಅಂತಿಮಗೊಳಿಸಿದ ಪಟ್ಟಿಯನ್ನೇ ಪ್ರಕಟಿಸಿದರೂ ಪಕ್ಷದಲ್ಲೇ ತೀವ್ರ ಆಕ್ಷೇಪ, ಅಸಮಾಧಾನ ಉಂಟಾಗಿರುವುದರಿಂದ ತಡೆಹಿಡಿಯಲಾಗಿದೆ. ಈ ಬಗ್ಗೆಯೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ಹೈಕಮಾಂಡ್‌ ನಾಯಕರು ಚರ್ಚಿಸಲಿದ್ದು, ಅಸಮಾಧಾನ ಸರಿಪಡಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಏನೇನು ಚರ್ಚೆ ನಡೆಯಬಹುದು?
-8ರಿಂದ 10 ಸಚಿವರ ಕಾರ್ಯವೈಖರಿ ಬಗ್ಗೆ ದೆಹಲಿ ನಾಯಕರಿಗೆ ಯಾವುದೇ ಸಮಾಧಾನ ಇಲ್ಲ
-ಈ ಸಚಿವರು ಉತ್ತಮ ಆಡಳಿತದ ಬಗ್ಗೆ ಲಕ್ಷ್ಯ ಕೊಡುತ್ತಿಲ್ಲ. ಭ್ರಷ್ಟಾಚಾರ ತಡೆಗೂ ಕ್ರಮ ವಹಿಸಿಲ್ಲ
-ಈ ಮಂತ್ರಿಗಳ ವಿಶೇಷಾಧಿಕಾರಿಗಳು, ಆಪ್ತರ ವಿರುದ್ಧವೇ ಭ್ರಷ್ಟಾಚಾರ ಕುರಿತು ಗಂಭೀರ ದೂರು
-8-10 ಸಚಿವರು ವಿಧಾನಸೌಧದತ್ತಲೂ ತಲೆ ಹಾಕುತ್ತಿಲ್ಲ ಎಂಬ ಆರೋಪ ವರಿಷ್ಠರಿಗೆ ಮುಟ್ಟಿದೆ
-ಅಂತಹ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಉತ್ಸಾಹಿ ಶಾಸಕರಿಗೆ ಅವಕಾಶ ನೀಡಲು ಒಲವು
-ಇದೇ ವೇಳೆ ಕೆಲ ಹಿರಿಯ ಸಚಿವರನ್ನು ಕೈಬಿಟ್ಟು, ಪಕ್ಷದ ಕೆಲಸಕ್ಕೆ ನಿಯೋಜಿಸಲೂ ಚಿಂತನೆ
-ಸ್ಪೀಕರ್‌, ಸಭಾಪತಿ ಬದಲಾವಣೆ ಜತೆಗೆ ಕೆಲ ಎಂಎಲ್ಸಿಗಳಿಗೆ ಸಚಿವ ಸ್ಥಾನ ನೀಡಲು ಆಲೋಚನೆ
-ಆಖೈರುಗೊಂಡ ಬಳಿಕವೂ ತಡೆ ನೀಡಲಾಗಿರುವ ಎಂಎಲ್ಸಿಗಳ ಪಟ್ಟಿ ಬಗ್ಗೆ ಮತ್ತೊಮ್ಮೆ ಚರ್ಚೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು - Jaya Bachchan ಬಾಯ್ಕಾಟ್‌ ಆಗ್ತಾರಾ?