ಮೈಸೂರಲ್ಲದೇ ಮಂಡ್ಯದಲ್ಲೂ ಪ್ರತಾಪ್ ಆಕ್ಟೀವ್, ಕುತೂಹಲ ಮೂಡಿಸಿದ ಸಿಂಹ ನಡೆ

By Suvarna NewsFirst Published Jun 25, 2022, 3:29 PM IST
Highlights

* ಮಂಡ್ಯ ಸಂಸದೆ VS ಮೈಸೂರು ಸಂಸದ.
* ಪ್ರತಾಪ್ ಸಿಂಹ ಸುಮಲತಾ ನಡುವೆ ಕ್ರೆಡಿಟ್ ವಾರ್.
* ಮೈಸೂರಲ್ಲದೇ ಮಂಡ್ಯದಲ್ಲೂ ಪ್ರತಾಪ್ ಸಿಂಹ ಆಕ್ಟೀವ್.

ಮೈಸೂರು. ಮಂಡ್ಯ, (ಜೂನ್.25): ಕಳೆದ ಹಲವು ದಿನಗಳಿಂದ ಮಂಡ್ಯ ಸಂಸದೆ ಸುಮಲತಾ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ನಡುವೆ ಶೀತಲ ಸಮರ ನಡೆಯುತ್ತಿದೆ. ಮೈಸೂರು ಜೊತೆಗೆ ಮಂಡ್ಯ ವಿಚಾರಗಳಿಗೂ ಪ್ರತಾಪ್ ಸಿಂಹ ತಲೆ ಹಾಕ್ತಿದ್ದು ಸುಮಲತಾ ಕಣ್ಣು ಕೆಂಪಗಾಗಿಸಿದೆ. ಇಲ್ಲಿಯವರೆಗೆ ಸುಮಲತಾ ವಿರುದ್ಧ ವಾಗ್ಯುದ್ದ ನಡೆಸುತ್ತಿದ್ದ ಪ್ರತಾಪ್ ಸಿಂಹ ಒಂದು ಹೆಜ್ಜೆ ಮುನ್ನುಗ್ಗಿ ಮಂಡ್ಯ ಜನರ ಸಮಸ್ಯೆ ಬಗೆಹರಿಸುವ ಮೂಲಕ ಟಕ್ಕರ್ ನೀಡಿದ್ದಾರೆ.

ಹೆದ್ದಾರಿ ವಿಚಾರದಲ್ಲಿ ಶುರುವಾದ ಸಂಸದರ ಸಮರ
ಉಭಯ ಸಂಸದರ ನಡುವೆ ವಾಕ್ಸಮರ ಶುರುವಾಗಿದ್ದು ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ವಿಚಾರದಲ್ಲಿ. ಸುಮಲತಾ ಏನು ಕೆಲಸ‌ ಮಾಡ್ತಿಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ನೀಡಿದ್ದ ಸುಮಲತಾ ಬೇರೆ ಕ್ಷೇತ್ರದ ಉಸಾಬರಿ ಬಿಟ್ಟು ತನ್ನ ಕ್ಷೇತ್ರದ ಕೆಲಸ ಮಾಡುವಂತೆ ಹೇಳಿದ್ದರು.  ನಂತರ ಮದ್ದೂರಿನ‌ ಕೆ.ಕೋಡಿಹಳ್ಳಿ ಗ್ರಾಮದ ಸೇತುವೆ ನಿರ್ಮಾಣ ವಿಚಾರದಲ್ಲೂ ಕ್ರೆಡಿಟ್‌ಗಾಗಿ ಇಬ್ಬರೂ ಪರಸ್ಪರ ವಾಗ್ದಾಳಿ ನಡೆಸಿದ್ದರು. ಆ ಬಳಿಕ ಪದೇ ಪದೇ ಮಂಡ್ಯಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸುತ್ತಿರುವ ಪ್ರತಾಪ್ ಸಿಂಹ ಇದೀಗ ಕೊಟ್ಟ ಭರವಸೆ ಈಡೇರಿಸಿ ಮಂಡ್ಯ ಜನರಿಗೆ ಮತ್ತಷ್ಟು ಹತ್ತಿರುವಾಗುವ ಪ್ರಯತ್ನ ಮಾಡ್ತಿದ್ದಾರೆ. ಆ ಮೂಲಕ ಸುಮಲತಾಗೆ ಟಾಂಗ್ ಕೊಡ್ತಿದ್ದಾರೆ.

ಮೈಸೂರು MP VS ಮಂಡ್ಯ MP: ಪ್ರತಾಪ್ ಸಿಂಹ, ಸುಮಲತಾ ನಡುವೆ ಟೆರಿಟರಿ ವಾರ್!

ಪ್ರತಾಪ್ ಸಿಂಹ ಕ್ರೆಡಿಟ್ ರಾಜಕೀಯ
ಕಳೆದ ತಿಂಗಳು ಮಂಡ್ಯದ ಮಳೆಹಾನಿ ಪ್ರದೇಶಗಳಿಗೆ ಪ್ರತಾಪ್ ಸಿಂಹ ಭೇಟಿ ನೀಡಿದ್ದರು. ಬೀಡಿ ಕಾಲೋನಿಗೆ ತೆರಳಿದ್ದ ವೇಳೆ ಹೆದ್ದಾರಿ ನಿರ್ಮಾಣ ಸಂಧರ್ಭದಲ್ಲಿ ಲಾರಿ ಟಿಪ್ಪರ್‌ಗಳು ಸಂಚರಿಸಿ ರಸ್ತೆ ಹದಗೆಟ್ಟಿರುವ ಬಗ್ಗೆ ಸ್ಥಳೀಯರು  ಪ್ರತಾಪ್ ಸಿಂಹ ಗಮನಕ್ಕೆ ತಂದರು. ಜನರ ಮನವಿಗೆ ಸ್ಪಂದಿಸಿ ತಿಂಗಳೊಳಗೆ ಸಮಸ್ಯೆ ಬಗೆಹರಿಸಿದ ಪ್ರತಾಪ್ ಸಿಂಹ ಹದಗೆಟ್ಟ ರಸ್ತೆ ದುರಸ್ತಿ ಮಾಡಿಸಿ ಸ್ಥಳೀಯ ಸಂಸದ ಸುಮಲತಾಗೆ  ತಿರುಗೇಟು ನೀಡಿದ್ದಾರೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್ ಮಾಡಿದ್ದಾರೆ.

ಆದರೆ ಪ್ರತಾಪ್ ಸಿಂಹ ನಡೆ ಖಂಡಿಸಿರುವ ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್. ಕಳೆದ ದಿಶಾ ಸಭೆಯಲ್ಲೇ ರಸ್ತೆ ಸಮಸ್ಯೆ ಬಗ್ಗೆ ಸುಮಲತಾ ರವರು ಅಧಿಕಾರಿಗಳನ್ನು ಪ್ರಶ್ನಿಸಿ ಶೀಘ್ರ ಸರಿಪಡಿಸುವಂತೆ ಸೂಚಿಸಿದ್ದರು ಆದರೆ ಪ್ರತಾಪ್ ಸಿಂಹ ಕ್ರೆಡಿಟ್ ರಾಜಕೀಯ ಮಾಡ್ತಿದ್ದಾರೆ. ಅವರದ್ದು ಕೇವಲ ಗಿಮಿಕ್, ಪರ್ಸೆಂಟೇಜ್‌ಗಾಗಿ ಈ ನಾಟಕ ಎಂದಿದ್ದಾರೆ. ಒಟ್ಟಾರೆ ನಾಯಕರ ಕ್ರೆಡಿಟ್ ವಾರ್ ಕ್ಷೇತ್ರದ ಗಡಿದಾಟಿದೆ ಉಭಯ ಸಂಸದರ ಸಮರ ಎಲ್ಲಿಗೆ ಹೋಗಿ ನಿಲ್ಲಲಿದೆ ಕಾದುನೋಡಬೇಕು.

ಸುಮಲತಾ ಅಂಬರೀಶ್‌ಗೆ ಬಿಜೆಪಿ ಗಾಳ
ಹೌದು...ಹಲವು ದಿನಗಳಿಂದ ಪಕ್ಷೇತರ ಸಂಸದೆ ಸುಮಲತಾ ಅವರಿಗೆ ಬಿಜೆಪಿ ಗಾಳ ಹಾಕಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ಈ ಬಾರಿ ಕಮಲ ಅರಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸುಮಲತಾ ಅವರ ಕೆಲ ಆಪ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ  ಸುಮಲತಾ ಅವರನ್ನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದೆ.

ಈಗಾಗಲೇ ಮಾತುಕತೆಗಳು ಸಹ ಆಗಿವೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್‌ ಸೇರುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಆದ್ರೆ, ಈ ಬಗ್ಗೆ ಸುಮಲತಾ ಅಂಬರೀಶ್ ಅವರು ಯಾವುದೇ  ದೃಢ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿಲ್ಲ. ಬದಲಿಗೆ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.ರಾಜ್ಯ ರಾಜಕಾರಣದ ಬೆಳವಣಿಗೆಗಳನ್ನ ಗಮನಿಸಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ ಒಟ್ಟಿನಲ್ಲಿ ಸುಮಲತಾ ನಡೆ ತೀವ್ರ ಕುತೂಹಲ ಮೂಡಿಸಿದೆ.

click me!