
ವಿಧಾನಸಭೆ : ‘ನಾನು ಅಸಹಾಯಕ ಮುಖ್ಯಮಂತ್ರಿಯಲ್ಲ, ಸರ್ಕಾರ ಹಾದಿಯನ್ನೂ ತಪ್ಪಿಲ್ಲ. ಜನರಿಗೆ ನೀಡಿದ್ದ ಭರವಸೆ ಈಡೇರಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದೇವೆ. ನಮ್ಮ ಅಭಿವೃದ್ಧಿ ಮಾದರಿಯನ್ನು ಕೇಂದ್ರದ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೇ ಮೆಚ್ಚಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ನಡೆದ 15.17 ಗಂಟೆಗಳ ಚರ್ಚೆಯಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರು ಪ್ರಸ್ತಾಪಿಸಿದ್ದ ಪ್ರತಿ ವಿಷಯಕ್ಕೂ ಒಂದೊಂದಾಗಿ ಸಿದ್ದರಾಮಯ್ಯ ಪ್ರತ್ಯುತ್ತುರ ನೀಡಿದರು.
‘ನಾನು 2013-2018ರ ವೇಳೆ ಇದ್ದಂತೆ ಇಲ್ಲ ಎಂದಿದ್ದೀರಿ. ಅಸಹಾಯಕ ಮುಖ್ಯಮಂತ್ರಿ ಎಂದೂ ಹೇಳಿದ್ದೀರಿ. ನಮ್ಮ ಸಂವೇದನೆಯನ್ನು, ಆಲಿಸುವ ಗುಣವನ್ನು ಪ್ರಶ್ನೆ ಮಾಡಿದ್ದೀರಿ. ಈ ಮಾತು ಆಡುವ ಅರ್ಹತೆ ನಿಮಗೆ ಇದೆಯೇ? 2013-18ರ ಅವಧಿಯಲ್ಲಿ ನಾನು ಅತ್ಯುತ್ತಮವಾಗಿದ್ದೆ ಎನ್ನುವುದಾದರೆ ಆಗ ನೀವು ನನ್ನನ್ನು ಟೀಕಿಸಿರಲಿಲ್ಲವೇ?’ ಎಂದು ಪ್ರತಿಪಕ್ಷ ಸದಸ್ಯರನ್ನು ಪ್ರಶ್ನಿಸಿದರು.
ಇದೇ ವೇಳೆ, ‘ನಾನು ಹಿಂದೆಯೂ, ಈಗಲೂ ಒಂದೇ ರೀತಿ ಇದ್ದೇನೆ. ಮುಂದೆಯೂ ಇದೇ ರೀತಿ ಇರುತ್ತೇನೆ. ನನ್ನ ಸಂವೇದನೆ ಬಗ್ಗೆ ಪ್ರಶ್ನಿಸುವ ನಿಮಗೆ ಕೊರೋನಾ ವೇಳೆ ಆಕ್ಸಿಜನ್ ಇಲ್ಲದೆ 34 ಮಂದಿ ಸತ್ತಾಗ ಸಂವೇದನೆ ಇತ್ತೇ ಎಂಬುದನ್ನು ಉತ್ತರಿಸಿ’ ಎಂದು ಆಗ್ರಹಿಸಿದರು.
‘ಆಕ್ಸಿಜನ್ ಇಲ್ಲದೆ ರೋಗಿಗಳು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಾಗ ನಿಮ್ಮ ಸಂವೇದನೆಯನ್ನೂ ಐಸಿಯುನಲ್ಲಿಟ್ಟಿದ್ದಿರೇ? ಕೊರೋನಾ ವೇಳೆ ಜನರು ಸಂಕಷ್ಟದಲ್ಲಿದ್ದಾರೆ, ಕುಟುಂಬಕ್ಕೆ 10 ಸಾವಿರ ರು. ಕೊಡಿ ಎಂದರೆ ಕೊಡಲಿಲ್ಲ. ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿದಿರಿ. ಪಶುಗಳು ಸತ್ತರೆ ನೀಡುವ ಪರಿಹಾರವನ್ನೂ ರದ್ದು ಮಾಡಿದಿರಿ. ಗೊಬ್ಬರ ಕೇಳಿದರೆ ಗೋಲಿಬಾರ್ ನಡೆಸಿ ರೈತರನ್ನು ಕೊಂದಿರಿ. ಆಗ ಸಂವೇದನೆ ಇತ್ತೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಾವು ನಿಮ್ಮಂತೆ ಮಾಡಿಲ್ಲ. ಸಂವೇದನೆ ಇರುವುದಕ್ಕಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇದುವರೆಗೆ 1.16 ಲಕ್ಷ ಕೋಟಿ ರು. ಜನರಿಗೆ ನೀಡಿದ್ದೇವೆ. ಕಬ್ಬು ಬೆಳೆಗಾರರಿಗೆ ಕೇಂದ್ರದ ಎಫ್ಆರ್‌ಪಿ ಆಧರಿಸಿ ಪ್ರತಿ ಟನ್‌ಗೆ 3300 ರು. ನಿಗದಿಪಡಿಸಿದ್ದೇವೆ. ಇದಕ್ಕಾಗಿ 300 ಕೋಟಿ ರು. ಹೊರೆ ಭರಿಸಿದ್ದೇವೆ. ಮೆಕ್ಕೆ ಜೋಳ ಬೆಳೆಗಾರರಿಗೂ ನ್ಯಾಯ ಒದಗಿಸಿದ್ದೇವೆ. ಎಸ್ಸಿಪಿ-ಟಿಎಸ್‌ಪಿ ಯೋಜನೆಯಡಿ ಬಿಜೆಪಿಗಿಂತ ಹೆಚ್ಚು ಹಣ ನೀಡಿದ್ದೇವೆ. ನಿಮಗೆ ಬದ್ಧತೆಯಿದ್ದರೆ ಕೇಂದ್ರದಿಂದಲೂ ಎಸ್ಸಿಪಿ-ಟಿಎಸ್ಪಿ ಜಾರಿ ಮಾಡಲು ಒತ್ತಾಯಿಸಿ ಎಂದು ಬಿಜೆಪಿ ಸದಸ್ಯರಿಗೆ ಸಿದ್ದರಾಮಯ್ಯ ಹೇಳಿದರು.
ಅಷ್ಟೇ ಏಕೆ? ನಮ್ಮ ಸರ್ಕಾರ ಹಾಗೂ ಅಭಿವೃದ್ಧಿ ಮಾದರಿಯನ್ನು ನಿತಿನ್ ಗಡ್ಕರಿ ಸೇರಿದಂತೆ 21 ಮಂದಿ ಕೇಂದ್ರ ಬಿಜೆಪಿ ಹಾಗೂ ಬಿಜೆಪಿ ರಾಜ್ಯದ ಮುಖ್ಯಮಂತ್ರಿಗಳೇ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಸರ್ಕಾರದ ಸಾಧನೆಯನ್ನು ರಾಜ್ಯಪಾಲರು ಓದಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ನಿಗಮ-ಮಂಡಳಿಗಳಿಗೆ ನೀಡಿರುವ ಅನುದಾನ, ಹಾಸ್ಟೆಲ್‌ಗಳ ನಿರ್ಮಾಣ ಹಾಗೂ ಮನೆಗಳ ಹಂಚಿಕೆ ಎಲ್ಲದರಲ್ಲೂ ಬಿಜೆಪಿ ಅವಧಿಗಿಂತ ಹೆಚ್ಚು ನೆರವು ನೀಡಿದ್ದೇವೆ ಎಂದು ಹೇಳಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಅಂಕಿ-ಅಂಶಗಳ ಕುರಿತು ಕೆಲಕಾಲ ವಾಗ್ವಾದವೂ ನಡೆಯಿತು.
ರಾಜ್ಯ ಸರ್ಕಾರವು ಇಷ್ಟೆಲ್ಲಾ ಗ್ಯಾರಂಟಿ ನೀಡುತ್ತಿದ್ದರೂ ಅಬಕಾರಿ, ನೋಂದಣಿ ತೆರಿಗೆ ಬೇರೆ ರಾಜ್ಯಗಳಿಗಿಂತ ಕಡಿಮೆ ಇದೆ. ಪೆಟ್ರೋಲ್, ಮದ್ಯವು ನೆರೆ ರಾಜ್ಯಗಳಿಗಿಂತ ನಮ್ಮಲ್ಲಿ ಕಡಿಮೆ ಇದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವೂ ತಮಿಳುನಾಡು, ಕೇರಳ, ಮಹಾರಾಷ್ಟ್ರಕ್ಕಿಂತ ಕಡಿಮೆ ಇದೆ ಎಂದು ಅಂಕಿ-ಅಂಶಗಳ ಸಹಿತ ಸಿದ್ದರಾಮಯ್ಯ ವಿವರಿಸಿದರು.
ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದಲ್ಲಿ ಮಾಡಿರುವ ಅನ್ಯಾಯದಿಂದ 5 ವರ್ಷಗಳಲ್ಲಿ ರಾಜ್ಯಕ್ಕೆ 1.25 ಲಕ್ಷ ಕೋಟಿ ರು. ನಷ್ಟ ಉಂಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯದಿಂದ 4.50 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡಿದರೆ 55-60 ಸಾವಿರ ಕೋಟಿ ರು. ವಾಪಸು ನೀಡುತ್ತಾರೆ. ಕೇಂದ್ರ ಸರ್ಕಾರ ಸೆಸ್, ಸರ್‌ಚಾರ್ಜ್‌ನಿಂದಲೇ 6 ಲಕ್ಷ ಕೋಟಿ ರು. ವಸೂಲಿ ಮಾಡುತ್ತದೆ. ಆದರೆ ಅದರಲ್ಲಿ ನಯಾಪೈಸೆಯನ್ನೂ ರಾಜ್ಯಗಳಿಗೆ ನೀಡಲ್ಲ. ಸೆಸ್ ಅನ್ನು ಶೇ.5ಕ್ಕೆ ಸೀಮಿತಗೊಳಿಸಬೇಕು ಇಲ್ಲದಿದ್ದರೆ ರಾಜ್ಯಗಳಿಗೆ ಪಾಲು ನೀಡಬೇಕೆಂಬ ಬೇಡಿಕೆಗೂ ಬಜೆಟ್‌ನಲ್ಲಿ ಸ್ಪಂದಿಸಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಿಗಮ-ಮಂಡಳಿಗಳ ಅನುದಾನ ವಾಗ್ವಾದ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2022-23ರ ಬಿಜೆಪಿ ಅವಧಿ ಹಾಗೂ 2023-24ನೇ ಸಾಲಿನ ಕಾಂಗ್ರೆಸ್ ಅವಧಿಯಲ್ಲಿ ನಿಗಮ-ಮಂಡಳಿಗಳಿಗೆ ನೀಡಿದ್ದ ಅನುದಾನದ ಅಂಕಿ-ಅಂಶ ತೆರೆದಿಟ್ಟರು. ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ಸದಸ್ಯ ಸುನಿಲ್‌ಕುಮಾರ್ ಬಿಜೆಪಿಗಿಂತ ನಿಮ್ಮ ಅವಧಿಯಲ್ಲಿ ಕಡಿಮೆ ನೀಡಿದ್ದೀರಿ. ಈ ಬಗ್ಗೆ ಅಂಕಿ-ಅಂಶ ತೆಗೆದಿಡುತ್ತೇವೆ ಎಂದು ಹೇಳಿದರು. ಈ ವೇಳೆ ಕೆಲ ಕಾಲ ವಾಗ್ವಾದ ನಡೆಯಿತು.
ನಾನು ಹೇಗೆ ಅಸಹಾಯಕ ಸಿಎಂ?
ನಾನು 2013-2018ರ ವೇಳೆ ಇದ್ದಂತೆ ಇಲ್ಲ ಎಂದಿದ್ದೀರಿ. ಅಸಹಾಯಕ ಮುಖ್ಯಮಂತ್ರಿ ಎಂದೂ ಹೇಳಿದ್ದೀರಿ. ನಮ್ಮ ಸಂವೇದನೆಯನ್ನು, ಆಲಿಸುವ ಗುಣವನ್ನು ಪ್ರಶ್ನೆ ಮಾಡಿದ್ದೀರಿ. ಈ ಮಾತು ಆಡುವ ಅರ್ಹತೆ ನಿಮಗೆ ಇದೆಯೇ? 2013-18ರ ಅವಧಿಯಲ್ಲಿ ನಾನು ಅತ್ಯುತ್ತಮವಾಗಿದ್ದೆ ಎನ್ನುವುದಾದರೆ ಆಗ ನೀವು ನನ್ನನ್ನು ಟೀಕಿಸಿರಲಿಲ್ಲವೇ?
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.