ಮರಾಠ ಮತ ಹೆಚ್ಚಾಗಿರುವ ಬೆಳಗಾವಿ ಗ್ರಾಮೀಣ, ಉತ್ತರ, ದಕ್ಷಿಣದಲ್ಲಿ ಇದೀಗ ಪ್ರತಿಮೆ ಪಾಲಿಟಿಕ್ಸ್ ಜೋರು, ಮರಾಠ ಮತ ಓಲೈಕೆಗೆ ಪ್ರತಿಮೆ ಪಾಲಿಟಿಕ್ಸ್ ಜೋರು
ಶ್ರೀಶೈಲ ಮಠದ
ಬೆಳಗಾವಿ(ಫೆ.23): ವಿಧಾನಸಭೆ ಚುನಾವಣೆ ಹೊಸ್ತಿನಲ್ಲಿರುವ ನಡುವೆಯೇ ಗಡಿನಾಡು ಬೆಳಗಾವಿಯಲ್ಲಿ ಗಿಫ್‌್ಟರಾಜಕೀಯದ ಬೆನ್ನ ಹಿಂದೆಯೇ ಇದೀಗ ಮರಾಠ ಮತಗಳ ಬೇಟೆಗೆ ಪ್ರತಿಮೆ ಪಾಲಿಟಿಕ್ಸ್ ಜೋರಾಗಿದೆ. ಎಲ್ಲೆಡೆ ಇದೀಗ ಪ್ರತಿಮೆಗಳದ್ದೇ ಚರ್ಚೆ ಶುರುವಾಗಿದೆ. ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ಹೀಗೆ ಮೂರು ಕ್ಷೇತ್ರಗಳಲ್ಲಿ ಇದೀಗ ಪ್ರತಿಮೆ ಪಾಲಿಟಿಕ್ಸ್ ಜೋರಾಗಿದೆ. ಇದೆಲ್ಲವೂ ಮರಾಠಿ ಮತಗಳ ಓಲೈಕೆಗಾಗಿ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿನ ರಾಜಹಂಸಗಡ ಕೋಟೆಯ ಅಭಿವೃದ್ಧಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಚಾರದಲ್ಲಿ ಹಾಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಮತ್ತು ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಸಚಿವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಅನುದಾನ ತಂದಿದ್ದೇ ನಾನು ಎಂದು ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರತಿಮೆ ಪ್ರತಿಷ್ಠಾನದ ಕ್ರೆಡಿಟ್ ಪಡೆಯಲು ಕಾಂಗ್ರೆಸ್-ಬಿಜೆಪಿ ನಡುವೆ ಫೈಟ್ ನಡೆಯುತ್ತಿದೆ. ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿ, ಅವರಿಂದಲೇ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಮಾಡುವುದಾಗಿ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಪತ್ರಿಕಾ ಪ್ರಕಟಣೆ ನೀಡಿರುವುದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.
'ಕೊಟ್ಟ ಮಾತಿನಂತೆ ನಿಗಮ ಸ್ಥಾಪಿಸಿದ ಬಿಜೆಪಿ'
ರಾಜಕೀಯ ತಿರುವು:
ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು, ಶಿವಾಜಿ ಪ್ರತಿಮೆ ಅನಾವರಣ ವಿಚಾರದಲ್ಲಿ ಗ್ರಾಮೀಣ ಶಾಸಕಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಬಿಜೆಪಿ ಸರ್ಕಾರವೇ ಇದಕ್ಕೆ ಅನುದಾನ ನೀಡಿದ್ದರೂ ಕೇವಲ ಕಾಂಗ್ರೆಸ್ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಆರೋಪಿಸಿದ್ದರು. ಬಿಜೆಪಿ ನಾಯಕರಾದ ರಮೇಶ ಜಾರಕಿಹೊಳಿ, ಸಂಜಯ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು ರಾಜಹಂಸಗಡ ಕೋಟೆಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಅಲ್ಲದೇ, ತಮ್ಮ ಸರ್ಕಾರದ ಅವಧಿಯಲ್ಲೇ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಂಜಯ ಪಾಟೀಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಂದು ರುಪಾಯಿ ಬಿಡುಗಡೆ ಆಗಿಲ್ಲ. ಒಂದು ವೇಳೆ ಅನುದಾನ ಬಿಡುಗಡೆಯಾಗಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲೇ ಅನುದಾನ ಬಿಡುಗಡೆಯಾಗಿರುವ ಕುರಿತು ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದರು. ಶಿವಾಜಿ ಪ್ರತಿಮೆ ಚರ್ಚೆ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.
ಜಾಲತಾಣದಲ್ಲಿ ಆಕ್ರೋಶ:
ಇನ್ನು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಇತ್ತೀಚೆಗೆ ಸಂಭಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಿವಚರಿತ್ರೆ ಉದ್ಘಾಟನೆಗೆ ಬಿಜೆಪಿ ಶಾಸಕ ಅಭಯ… ಪಾಟೀಲ… ತಯಾರಿ ನಡೆಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಕಲಾಕೃತಿ ಮೂಲಕ ಪರಿಚಯಿಸುವ ಧ್ವನಿ ಬೆಳಕಿನ ಕಾರ್ಯಕ್ರಮ ಶಿವಚರಿತ್ರೆ ಉದ್ಘಾಟನೆಯಾಗಲಿದೆ. ಪೀರನವಾಡಿಯಲ್ಲಿ ಹೋರಾಟ ಮಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 4 ರ ಬಳಿ ವೃತ್ತದಲ್ಲಿ 2008ರಲ್ಲಿ ವಿಶ್ವಗುರು ಬಸವಣ್ಣ ಅಶ್ವಾರೂಢ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಈವರೆಗೂ ಅದಕ್ಕೆ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ. 2008ರಲ್ಲಿ ಅಭಯ… ಪಾಟೀಲ… ಶಾಸಕರಾಗಿದ್ದಾಗ ಸ್ವಂತ ಖರ್ಚಿನಲ್ಲಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪಿಸಿದ್ದರು. ಮರಾಠಿ ಮಹಾಪುರುಷರ ಪ್ರತಿಮೆಗಳಿಗೆ ಆದ್ಯತೆ ನೀಡುತ್ತ, ಕನ್ನಡ ಮಹಾಪುರುಷರ ಪ್ರತಿಮೆಗಳನ್ನು ಮರೆತಿರುವ ಬೆಳಗಾವಿ ರಾಜಕಾರಣಿಗಳ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಜಾನಿ ಜಾನಿ ಎಸ್ ಪಪ್ಪಾ.. ಬೆಳಗಾವಿ ಅಭಿವೃದ್ಧಿ ನೋ ಪಪ್ಪಾ.. ಇಲ್ಲಿ ಬರೀ ಮರಾಠಿಗರ ಓಲೈಕೆ ಹಾ.. ಹಾ.. ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇದೆ. ಆದರೆ, ಮರಾಠ ಮತಗಳ ಓಲೈಕೆಯಲ್ಲಿ ಕನ್ನಡ ಮಹನೀಯರ ಮರಿಬೇಡಿ ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.
ದಮ್ಮು, ತಾಕತ್ತಿದ್ರೆ ನನ್ನ ಹೊಡೆದು ಹಾಕಿ: ಸಿದ್ದು ಗುಡುಗು
ಬಸವಣ್ಣನ ಪತ್ರಿಮೆ ಅನಾವರಣಕ್ಕೆ ಇರದ ಆತುರ ಶಿವಾಜಿ ಪ್ರತಿಮೆ ಅನಾವರಣಕ್ಕೆ ಏಕೆ?
ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣಕ್ಕೆ ಆತುರ ತೋರುತ್ತಿರುವ ಶಾಸಕರಿಗೆ ಹಿರೇಬಾಗೇವಾಡಿಯಲ್ಲಿನ ಆಶ್ವಾರೂಢ ಬಸವಣ್ಣನ ಪ್ರತಿಮೆ ಅನಾವರಣಕ್ಕೆ ಕಾಳಜಿ ಏಕೆ ತೋರುತ್ತಿಲ್ಲ. 15 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 4ರ ಬಳಿ, ರಾಜ್ಯ ಹೆದ್ದಾರಿ ವೃತ್ತದಲ್ಲಿ ಹಿರೇಬಾಗೇವಾಡಿಯ ವೃತ್ತದಲ್ಲಿ ಬಸವಣ್ಣನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಆದರೆ, ಈವರೆಗೂ ಬಸವಣ್ಣನ ಪ್ರತಿಮೆ ಅನಾವರಣಕ್ಕೆ ಭಾಗ್ಯವೇ ಸಿಕ್ಕಿಲ್ಲ. ಶಿವಾಜಿ ಪ್ರತಿಮೆಗೂ ಮೊದಲು ಬಸವಣ್ಣನ ಪ್ರತಿಮೆ ಲೋಕಾರ್ಪಣೆ ಮಾಡುವಂತೆ ಹಿರೇಬಾಗೇವಾಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಶಾಸಕರಿಗೆ ಬಸವಣ್ಣನ ಬಗ್ಗೆ ಕಾಳಜಿ ಇಲ್ಲ. ಬಸವಣ್ಣನ ಪ್ರತಿಮೆ ಲೋಕಾರ್ಪಣೆ ಏಕೆ? ವಿಳಂಬ ಮಾಡಲಾಗುತ್ತಿದೆ. ಕಾಲಹರಣ ಏಕೆ ಮಾಡಲಾಗುತಿದೆ. ಗ್ರಾಮೀಣ ಕ್ಷೇತ್ರದಲ್ಲಿ ಬಸವಣ್ಣನಿಗೆ ಒಂದು ನ್ಯಾಯವಾದರೆ, ಶಿವಾಜಿ ಮಹಾರಾಜರಿಗೆ ಒಂದು ನ್ಯಾಯ ಏಕೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.