ಮೀನುಗಾರರಿಗೆ ಕೇಂದ್ರ ಅನುದಾನ ನೀಡದಿದ್ದರೇ ರಾಜ್ಯವೇ ಭರಿಸುತ್ತದೆ: ಸಚಿವ ಮಂಕಾಳ ವೈದ್ಯ

Published : Oct 09, 2025, 07:56 PM IST
Mankala Vaidya

ಸಾರಾಂಶ

ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಪೂರಕ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ಮನವಿ ಮಾಡಲಾಗುತ್ತದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ಮಲ್ಪೆ (ಅ.09): ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಪೂರಕ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ಮನವಿ ಮಾಡಲಾಗುತ್ತದೆ. ಒಂದೊಮ್ಮೆ ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೂ, ರಾಜ್ಯ ಸರ್ಕಾರವೇ ಅಗತ್ಯವಿರುವ ಅನುದಾನವನ್ನು ಭರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದ್ದಾರೆ. ಅವರು ಮಲ್ಪೆಯ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಮೀನುಗಾರಿಕೆ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಮಲ್ಪೆಯು ದೇಶದಲ್ಲಿಯೇ ಅತಿ ಹೆಚ್ಚು ಮೀನುಗಾರಿಕಾ ಉತ್ಪನ್ನಗಳ ವ್ಯವಹಾರ ಮಾಡುವ ಬಂದರಾಗಿದೆ. ಆದ್ದರಿಂದ ಮೀನುಗಾರಿಕೆಗೆ ಪೂರಕವಾಗುವಂತೆ ಇಲ್ಲಿ ಮೂಲಸೌಕರ್ಯಗಳನ್ನೊದಗಿಸಲು ಸರ್ಕಾರ ಬದ್ಧವಾಗಿದೆ ಎಂದರು. ಕೆಲವು ವರ್ಷಗಳಿಂದ ಸಿಆರ್‌ಝಡ್ ನಿಯಮಾವಳಿಗಳಿಂದ ಬಂದರುಗಳ ಅಭಿವೃದ್ಧಿಗೆ ಬಂದ ಅನುದಾನ ಬಳಸಲಾಗದೇ ವಾಪಸ್‌ ಹೋಗಿದೆ. ನೆರೆಯ ಗೋವಾ, ಕೇರಳಗಳಲ್ಲಿ ಸಿಆರ್‌ಝಡ್ ನಿಯಮಗಳಂತೆ ಎಲ್ಲ ರಾಜ್ಯಗಳಲ್ಲಿ ಏಕರೂಪದ ಸರಳ ನಿಯಮಗಳಿದ್ದರೇ ಅನುದಾನ ಬಳಕೆ ಸಾಧ್ಯ. ನಮ್ಮ ರಾಜ್ಯದಲ್ಲಿಯೂ ನಿಮಯಗಳನ್ನು ಬದಲಾಯಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದರಿಂದ ಮೀನುಗಾರಿಕೆ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಮಲ್ಪೆಯು ಸರ್ವಋತು ಬಂದರಿನಲ್ಲಿ ಮೀನುಗಾರಿಕಾ ದೋಣಿಗಳು ಹೆಚ್ಚಾಗಿದ್ದು, ಅವುಗಳ ನಿಲುಗಡೆಗೆ ಬಂದರಿನ ವಿಸ್ತರಿಸಬೇಕು. ಬಂದರಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಚಿವರು ಸ್ಥಳೀಯ ಮೀನುಗಾರರ ಅಹವಾಲು ಸಭೆ ನಡೆಸಬೇಕು ಎಂದರು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ರಾಜ್ಯ ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕ ಸಿದ್ದಯ್ಯ ಡಿ., ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕಿ ಸವಿತಾ ಖಾದ್ರಿ ಎಸ್.ಕೆ. ಮತ್ತಿತರರು ಉಪಸ್ಥಿತರಿದ್ದರು.

ಹಂಗಾರಕಟ್ಟೆ ಬಾರ್ಜ್‌ ಚಾಲನೆ ಕುಂದಾಪುರ ತಾಲೂಕಿನ ಕೋಡಿಬೆಂಗ್ರೆ - ಹಂಗಾರಕಟ್ಟೆ ನಡುವೆ ನದಿ ಸಂಪರ್ಕ ಕಲ್ಪಿಸುವ ಸುಮಾರು 2 ಕೋಟಿ ರು. ವೆಚ್ಚದ ಮಧ್ಯಮ ಗಾತ್ರದ ಹೊಸ ಬಾರ್ಜ್ ಕಾವೇರಿಯನ್ನು ಸಚಿವ ಮಂಕಾಳ ವೈದ್ಯ ಉದ್ಘಾಟಿಸಿದರು. ಇದುವರೆಗೆ ಬೆಂಗ್ರೆಯಿಂದ ಹಂಗಾರಕಟ್ಟೆಗೆ ಸ್ಥಳೀಯರು, ಪ್ರವಾಸಿಗರು ಹತ್ತಾರು ಕಿ.ಮೀ. ಸುತ್ತು ಹೊಡೆದು ಪ್ರಯಾಣಿಸಬೇಕಾಗಿತ್ತು. ಈ ಬಾರ್ಜ್‌ನಿಂದ ಬಹಳ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಹಂಗಾರಕಟ್ಟೆ ಬಂದರಿನಲ್ಲಿ ಹೂಳೆತ್ತುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಶೆಡ್ ನಿರ್ಮಾಣಕ್ಕೆ ೫೦ ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್, ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ, ಮುಖಂಡರಾದ ದಿನೇಶ್ ಹೆಗ್ಡೆ, ರಾಜು ಬಂಗೇರ, ಪ್ರಸಾದ್ ಪಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.

ಕೋಡಿಬೆಂಗ್ರೆ ತಂಬಾಕುಮುಕ್ತ

ಕೋಡಿಬೆಂಗ್ರೆಯನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಜಿಲ್ಲಾಡಳಿತ ಘೋಷಿಸಿದೆ. ಸ್ಥಳೀಯ ಜನರು ವ್ಯಸನ ಮುಕ್ತರಾಗಿರುವುದು ಬಹಳ ಸಂತೋಷದ ವಿಷಯ. ಇದರಿಂದ ಜನರ ಆರೋಗ್ಯ ಹೆಚ್ಚುತ್ತದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಚಿವ ಮಂಕಾಳ ವೈದ್ಯ ಸಲಹೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ