
ಚನ್ನಗಿರಿ (ಅ.09): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಕ್ತಿ ಯೋಜನೆಯನ್ನು ಜಾರಿಗೆ ತಂದು ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಇದರಿಂದಾಗಿ ಮಹಿಳಾ ಉದ್ಯೋಗದಲ್ಲಿ ಶೇ.23ರಷ್ಟು ಹೆಚ್ಚಳವಾಗಿದೆ ಎಂದು ರಾಜ್ಯ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಪಟ್ಟಣದ ಹೊರವಲಯದ ಅಜ್ಜಿಹಳ್ಳಿ ಗ್ರಾಮದ ಬಳಿ ₹8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೆ.ಎಸ್.ಆರ್.ಟಿ.ಸಿ. ಡಿಪೋದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಹಿಂದಿನ ಸರ್ಕಾರ ರಾಜ್ಯದಲ್ಲಿ ₹80 ಸಾವಿರ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಹಣ ಮಂಜೂರು ಮಾಡದೆ ಟೆಂಡರ್ ಪ್ರಕ್ರಿಯೆ ನಡೆಸಿದ್ದರು. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಎಲ್ಲ ಕಾಮಗಾರಿಗಳಿಗೂ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ನಮ್ಮ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡದೇ ಯಾವ ಕಾಮಗಾರಿಗಳಿಗೂ ಟೆಂಡರ್ ಪ್ರಕ್ರಿಯೆ ನಡೆಸುವುದಿಲ್ಲ ಎಂದರು.
900 ಹೊಸ ಬಸ್‌ಗಳ ಖರೀದಿ: ರಾಜ್ಯದಲ್ಲಿ ಶಕ್ತಿಯೋಜನೆ ಜಾರಿಗೆ ಬಂದ ಮೇಲೆ 568 ಕೋಟಿ ಮಹಿಳೆಯವರು ನಮ್ಮ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಿದ್ದು, ಟಿಕೆಟ್ ಹಣವನ್ನು ಸರ್ಕಾರವೇ ಭರಿಸುತ್ತಿದೆ. ಇದರಿಂದ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಲಾಭದಾಯಕದಲ್ಲಿದೆ. ಮುಂದಿನ ಕೆಲವೇ ದಿನಗಳಲ್ಲಿ 900 ಹೊಸ ಬಸ್‌ಗಳನ್ನು ಖರೀದಿಸಲಿದ್ದು, ಅವಶ್ಯಕತೆ ಇರುವ ಕಡೆ ಹೊಸ ಬಸ್‌ಗಳನ್ನು ಬಿಡಲಾಗುವುದು ಎಂದರು. ಮಾಯಕೊಂಡ ಗ್ರಾಮಕ್ಕೆ ಬಸ್ ನಿಲ್ದಾಣ ಬೇಕು ಎಂದು ಆ ಭಾಗದ ಶಾಸಕ ಬಸವಂತಪ್ಪನವರು ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿಯೇ ಅಗತ್ಯ ಅನುದಾನ ಬಿಡುಗಡೆ ಮಾಡಿ, ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ನಡೆಸಲಾಗುವುದು ಎಂದರು.
ಒಟ್ಟು 43 ಬಸ್‌ಗಳು: ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜು ವಿ. ಶಿವಗಂಗಾ ಮಾತನಾಡಿ, ನಮ್ಮ ವಿರೋಧ ಪಕ್ಷದವರು ಎಲ್ಲ ಕಾಮಗಾರಿಗಳನ್ನು ನಾನೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಡಿಪೋ ನಿರ್ಮಾಣಗೊಂಡು ಪ್ರಾರಂಭವಾಗಲು ಹಲವಾರು ತಾಂತ್ರಿಕ ಕಾರಣದಿಂದ ತಡೆಯಾಗಿತ್ತು. ಈಗ ಅವುಗಳನ್ನೆಲ್ಲ ಕಾನೂನು ಪ್ರಕಾರವಾಗಿ ಬಗೆಹರಿಸಿ, ಇಂದು ಚನ್ನಗಿರಿಯ ಡಿಪೋ ಪ್ರಾರಂಭವಾಗಿದೆ. ಈ ಡಿಪೋಗೆ ಒಟ್ಟು 43 ಬಸ್‌ಗಳು ಬರಲಿವೆ. ಮೊದಲ ಹಂತದಲ್ಲಿ 27 ಬಸ್‌ಗಳನ್ನು ಬಿಡಲಾಗಿದ್ದು, ಮುಂದಿನ ಒಂದು ವಾರದ ಒಳಗಾಗಿ ಇನ್ನುಳಿದ ಬಸ್‌ಗಳು ಕಾರ್ಯಾರಂಭ ಮಾಡಲಿವೆ ಎಂದರು.
ಈಗಾಗಲೇ ನೂತನ ಡಿಪೋಗೆ 180 ಸಿಬ್ಬಂದಿ ನೇಮಕವಾಗಿದೆ. ಚನ್ನಗಿರಿಯಿಂದ ಹೊನ್ನಾಳಿ, ಭದ್ರಾವತಿ, ದಾವಣಗೆರೆ, ಶಿವಮೊಗ್ಗ, ಹೊಸದುರ್ಗ, ಹುಬ್ಬಳಿ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಬಸ್‌ಗಳು ಸಂಚರಿಸಲಿವೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಾಣ ಮಾಡಲು 2 ಎಕರೆ ಜಾಗ ಇದೆ. ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಈ ಜಾಗವನ್ನು ನಾನು ಕೊಡಿಸಲಿದ್ದೇನೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಸಾರಿಗೆ ಸಚಿವರು ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಡಿಪೋ ಪ್ರಾರಂಭೋತ್ಸವ ನಿಮಿತ್ತ ಚನ್ನಗಿರಿಯಿಂದ ಐದು ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸಲು ಚಾಲನೆಯನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ, ರಾಜ್ಯ ಜೀವ ವೈವಿದ್ಯ ನಿಗಮ ಅಧ್ಯಕ್ಷ ವಡ್ನಾಳ್ ಜಗದೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಚನ್ನಗಿರಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ತಹಸೀಲ್ದಾರ್ ಎನ್.ಜೆ. ನಾಗರಾಜ್, ಚನ್ನಗಿರಿ ಡಿಪೋ ವ್ಯವಸ್ಥಾಪಕ ಸಿದ್ದೇಶ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಮಾರಂಭದ ಉದ್ಘಾಟನೆ ನೆರವೇರಿಸಿ, ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ಶಕ್ತಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಜಾರಿಗೆ ಬಂದಾಗಿನಿಂದ ಜಿಲ್ಲೆಯಲ್ಲಿ 10.83 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈಗ ಚನ್ನಗಿರಿ ಪಟ್ಟಣದಲ್ಲಿ ನಿರ್ಮಾಣವಾಗಿರುವ ಡಿಪೋದಿಂದ ಇನ್ನಷ್ಟು ಜನರಿಗೆ ಅನುಕೂಲವಾಗಲಿದೆ. ಅನೇಕ ತೀರ್ಥ ಕ್ಷೇತ್ರಗಳಿಗೆ ಹೋಗಲು ಚನ್ನಗಿರಿ ಜಂಕ್ಷನ್‌ನಂತೆ ಇದೆ. ಈ ಭಾಗದಲ್ಲಿ ಸಾರಿಗೆ ಡಿಪೋ ನಿರ್ಮಾಣ ಆಗಿರುವುದು ಮಲೆನಾಡು ಮತ್ತು ಅರೆಮಲೆನಾಡು ಜನರಿಗೆ ವರದಾನವಾಗಿದೆ ಎಂದರು. ಚನ್ನಗಿರಿ ತಾಲೂಕು ಅರೆ ಮಲೆನಾಡು ಪ್ರದೇಶವಾಗಿದ್ದು, ಈ ಕ್ಷೇತ್ರವನ್ನು ಎನ್.ಜಿ.ಹಾಲಪ್ಪ, ಜೆ.ಎಚ್.ಪಟೇಲ್ ಪ್ರತಿನಿಧಿಸಿದ್ದರು. ಈ ಕ್ಷೇತ್ರ ಅಭಿವೃದ್ಧಿಪಡಿಸಲು ನಾನು ಮತ್ತು ಈ ಕ್ಷೇತ್ರದ ಶಾಸಕರು ಬದ್ಧರಾಗಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.