ಬಿಜೆಪಿಗರು, ಆರೆಸ್ಸೆಸ್‌ ವಿರುದ್ಧ ರಾಜ್ಯ ಸರ್ಕಾರ ಕೆಐಎಡಿಬಿ ಭೂ ಪ್ರತ್ಯಸ್ತ್ರ: ಸಚಿವ ಎಂ.ಬಿ.ಪಾಟೀಲ್‌

By Kannadaprabha News  |  First Published Aug 30, 2024, 4:28 AM IST

ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನೀಡಿರುವ 5 ಎಕರೆ ಕೆಐಎಡಿಬಿ ಸಿಎ ನಿವೇಶನದ ಬಗ್ಗೆ ಮಾತನಾಡುತ್ತಿರುವ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯಹರಿಶ್ಚಂದ್ರ ಅಲ್ಲ. 


ಬೆಂಗಳೂರು (ಆ.30): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ ವಿರುದ್ಧ ಪ್ರತಿಪಕ್ಷದವರ ಆರೋಪಕ್ಕೆ ಪ್ರತ್ಯಸ್ತ್ರವಾಗಿ ಬಿಜೆಪಿ ನಾಯಕರು ಆರೆಸ್ಸೆಸ್‌, ಸಂಘ ಪರಿವಾರದ ಅಂಗ ಸಂಸ್ಥೆಗಳಿಗೆ ನೀಡಿರುವ ಕೆಐಎಡಿಬಿ ಭೂಮಿಯು ನಿಯಮಾನುಸಾರ ಇಲ್ಲದಿದ್ದರೆ ಅಥವಾ ಷರತ್ತುಬದ್ಧವಾಗಿ ಲೀಸ್‌ ಅವಧಿಯೊಳಗೆ ಶೇ.51ರಷ್ಟು ಭೂಮಿ ಅಭಿವೃದ್ಧಿಪಡಿಸದಿದ್ದರೆ ವಾಪಸ್‌ ಪಡೆಯಲು ಸರ್ಕಾರ ಮುಂದಾಗಿದೆ. 

ಈ ಸಂಬಂಧ ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನೀಡಿರುವ 5 ಎಕರೆ ಕೆಐಎಡಿಬಿ ಸಿಎ ನಿವೇಶನದ ಬಗ್ಗೆ ಮಾತನಾಡುತ್ತಿರುವ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯಹರಿಶ್ಚಂದ್ರ ಅಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ ಪಡೆದಿರುವ 2 ಎಕರೆಗೂ ಹೆಚ್ಚು ವಿಸ್ತೀರ್ಣದ ಕೆಐಎಡಿಬಿ ನಿವೇಶನದಲ್ಲಿ 18 ವರ್ಷಗಳಾದರೂ ನಿಯಮಾನುಸಾರ ಶೇ.51ರಷ್ಟು ಭೂಮಿ ಅಭಿವೃದ್ಧಿಪಡಿಸಿಲ್ಲ. ಈಗ ಕಾಟಾಚಾರಕ್ಕೆ ಕೇವಲ 5000 ಚ.ಅಡಿ ಶೆಡ್‌ ಕಟ್ಟಿ ಬಾಡಿಗೆಗೆ ಲಭ್ಯವಿದೆ ಎಂದು ಬೋರ್ಡ್‌ ಹಾಕಿದ್ದಾರೆ. ಅಭಿವೃದ್ಧಿಯನ್ನೇ ಮಾಡದೆ ಸೇಲ್‌ ಡೀಡ್‌ಗೂ ಅರ್ಜಿ ಹಾಕಿದ್ದಾರೆ ಎಂದು ಆರೋಪಿಸಿದರು.

Tap to resize

Latest Videos

ತಿರುಪತಿಗೆ ಲಡ್ಡುಗಾಗಿ ಮತ್ತೆ ನಂದಿನಿ ತುಪ್ಪ ಪೂರೈಕೆ ಶುರು: ಸಿಎಂ ಸಿದ್ದರಾಮಯ್ಯರಿಂದ ಚಾಲನೆ

ಲೀಸ್‌ ಅವಧಿಯೊಳಗೆ ಭೂಮಿ ಅಭಿವೃದ್ಧಿಪಡಿಸದ ಕಾರಣಕ್ಕೆ 2016ರಲ್ಲಿ ಜಮೀನು ವಾಪಸ್‌ ಪಡೆಯಲು ಸರ್ಕಾರ ಆದೇಶಿಸಿತ್ತು. ಇದಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದರು. ಈಗ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಂತಹ ‘ಶೆಡ್‌ ಗಿರಾಕಿ’ ಬಿಜೆಪಿಯವರ ಕುತಂತ್ರದಿಂದ ಖರ್ಗೆ ಅವರ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. 6 ತಿಂಗಳಲ್ಲಿ ಅಭಿವೃದ್ಧಿ ಮಾಡದಿದ್ದರೆ ನಿಯಮಗಳ ಪ್ರಕಾರ ಅವರಿಗೆ ನೀಡಿರುವ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಚಿವರಾಗಿದ್ದಾಗ ನಿರಾಣಿಗೆ ನೂರಾರು ಎಕರೆ: ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡಿದ್ದಾರೆ. ಸರ್ಕಾರ ಆಗ್ರೋಟೆಕ್‌ ಪಾರ್ಕ್‌ಗೆ ಮೀಸಲಿಟ್ಟಿದ್ದ ಜಾಗದಲ್ಲಿ ನಿವೇಶನ ಪಡೆದು ತೇಜಸ್ ಇಂಟರ್‌ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ನಂತರ ಪುನಃ ಕೈಗಾರಿಕಾ ಸಚಿವರಾದಾಗ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿರುವುದು ಆಶ್ಚರ್ಯಕರ ಸಂಗತಿ.

ಅಷ್ಟೇ ಅಲ್ಲ, ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಅದಾಗಲೇ ಬೇರೆ ಸಂಸ್ಥೆಗೆ ಹಂಚಿಕೆಯಾಗಿದ್ದ 112 ಎಕರೆ ಜಮೀನನ್ನು ಏಕಾಏಕಿ ರದ್ದುಮಾಡಿ ತಮಗೆ ತಾವೇ ಹಂಚಿಕೊಂಡಿದ್ದಾರೆ ಎಂದು ದಾಖಲೆ ಸಮೇತ ಆರೋಪಿಸಿದರು. ಈ ರೀತಿ ಸಚಿವರೇ ಭೂಮಿ ಪಡೆಯಲು ಅವಕಾಶವಿದೆಯೇ ಎಂದು ಪರಿಶೀಲಿಸಲಾಗುವುದು. ಈ ರೀತಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರು, ನಾಯಕರಿಗೆ ಎಷ್ಟು ಕೆಐಎಡಿಬಿ ಭೂಮಿ ಹಂಚಿಕೆಯಾಗಿದೆ? ಅದೆಲ್ಲವೂ ಕಾನೂನಾತ್ಮಕವಾಗಿದೆಯೇ? ಷರತ್ತುಬದ್ಧವಾಗಿ ಅಭಿವೃದ್ಧಿ ಆಗಿದೆಯೇ ಎಂದು ಜಾಲಾಡಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭೂಮಿ ವಾಪಸ್‌ ಪಡೆಯುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಚಾಣಕ್ಯ ವಿವಿ, ರಾಷ್ಟ್ರೋತ್ಥಾನ ಪರಿಷತ್‌ ಭೂಮಿ ಪರಿಶೀಲನೆ: ಚಾಣಕ್ಯ ವಿವಿ, ರಾಷ್ಟ್ರೋತ್ಥಾನ ಪರಿಷತ್‌ ಸೇರಿದಂತೆ ಆರೆಸ್ಸೆಸ್‌, ಸಂಘ ಪರಿವಾರದ ಸಂಸ್ಥೆಗಳಿಗೆ ನೀಡಿರುವ ಕೆಐಎಡಿಬಿ ಭೂಮಿಯನ್ನೂ ಪರಿಶೀಲಿಸಿ ಲೀಸ್‌ ಅವಧಿ ಮುಗಿದರೂ ನಿಯಮಾನುಸಾರ ಶೇ.51ರಷ್ಟು ಅಭಿವೃದ್ಧಿಪಡಿಸದ ಭೂಮಿ ವಾಪಸ್‌ ಪಡೆಯಲು ಕ್ರಮ ವಹಿಸಲಾಗುವುದು ಎಂದು ಇದೇ ವೇಳೆ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. ಬಿಜೆಪಿ ಅವಧಿಯಲ್ಲಿ ಆರೆಸ್ಸೆಸ್‌ನವರನ್ನು ಖುಷಿಪಡಿಸಲು ದೇವನಹಳ್ಳಿಯ ಹೈಟೆಕ್‌ ಡಿಫೆನ್ಸ್‌ ಪಾರ್ಕ್‌ನಲ್ಲಿ ಚಾಣಕ್ಯ ವಿವಿಗೆ 177 ಕೋಟಿ ರು. ಮೌಲ್ಯದ 116 ಎಕರೆ ಭೂಮಿಯನ್ನು ಕೇವಲ 50 ಕೋಟಿ ರು.ಗಳಿಗೆ ನೀಡಲಾಗಿದೆ. 

ಇದರಿಂದ ಸರ್ಕಾರದ ಬೊಕ್ಕಸಕ್ಕೆ 127 ಕೋಟಿ ರು. ನಷ್ಟವಾಗಿದೆ. ಅವರಿಗೆ ನೀಡಿರುವ ಭೂಮಿಯ ಲೀಸ್‌ ಅವಧಿ 2025ರ ಜೂನ್‌ಗೆ ಮುಗಿಯಲಿದೆ. ಅಷ್ಟರೊಳಗೆ ನಿಯಮಾನುಸಾರ ಶೇ.51ರಷ್ಟು ಭೂಮಿ ಅಭಿವೃದ್ಧಿಪಡಿಸದಿದ್ದರೆ ವಾಪಸ್‌ ಪಡೆಯಲು ಪರಿಶೀಲಿಸಲಾಗುವುದು. ಅದೇ ರೀತಿ ರಾಷ್ಟ್ರೋತ್ಥಾನ ಪರಿಷತ್‌ಗೂ ಇದೇ ಜಾಗದಲ್ಲಿ 2013ರಲ್ಲಿ ವಾಣಿಜ್ಯ ಸಂಕೀರ್ಣಕ್ಕೆಂದು 5 ಎಕರೆ ಭೂಮಿ ನೀಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ. ಇತ್ತೀಚೆಗೆ 2023ರ ಡಿ.26ರಂದು ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಅವಧಿ ಮುಗಿಯುವುದರೊಳಗೆ ಅಭಿವೃದ್ಧಿಪಡಿಸದಿದ್ದರೆ ವಾಪಸ್‌ ಪಡೆಯಲು ಪರಿಶೀಲಿಸಲಾಗುವುದು ಎಂದರು.

ಬಿಜೆಪಿ ಅಸ್ತ್ರ ಏನು?: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರಿನ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಕೆಐಎಡಿಬಿಯ 5 ಎಕರೆ ಮಂಜೂರು ಮಾಡಲಾಗಿದೆ. ಇದು ಅಧಿಕಾರ ದುರ್ಬಳಕೆ ಎಂದು ಬಿಜೆಪಿ ಸತತ ಆರೋಪ.

ಸರ್ಕಾರ ಪ್ರತ್ಯಸ್ತ್ರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಕ್ಷದ ನಾಯಕರು, ಆರ್‌ಎಸ್‌ಎಸ್‌, ಸಂಘಪರಿವಾರದ ಅಂಗ ಸಂಸ್ಥೆಗಳಿಗೆ ನೀಡಿರುವ ಕೆಐಎಡಿಬಿ ಜಮೀನು ನಿಯಮಾನುಸಾರ ಇಲ್ಲದಿದ್ದರೆ, ಷರತ್ತು ಪ್ರಕಾರ ಅಭಿವೃದ್ಧಿಪಡಿಸದಿದ್ದರೆ ವಾಪಸ್‌ ಪಡೆಯುವ ನಿರ್ಧಾರ.

ಸಿದ್ದರಾಮಯ್ಯ ಮುಡಾ ಕೇಸ್‌ ಇಂದು ಏನಾಗುತ್ತೆ?: ಎಲ್ಲರ ಚಿತ್ತ ಹೈಕೋರ್ಟ್‌ನತ್ತ

ಜಮೀನು ಎಲ್ಲೆಲ್ಲಿ?
1. 2012ರಲ್ಲಿ ಸಚಿವರಾಗಿದ್ದಾಗ ಮುರುಗೇಶ್‌ ನಿರಾಣಿ ಬಾಗಲಕೋಟೆ ಕೈಗಾರಿಕಾ ಪ್ರದೇಶದಲ್ಲಿ 25 ಎಕರೆ ಪಡೆದು ಶಾಲೆ ತೆರೆದಿದ್ದಾರೆ. 2022ರಲ್ಲಿ ಸಚಿವರಾಗಿದ್ದಾಗ ಮಂಡ್ಯದ ಕೆ.ಆರ್‌. ಪೇಟೆಯಲ್ಲಿ 112 ಎಕರೆ ಹಂಚಿಕೆ ಮಾಡಿಕೊಂಡಿದ್ದಾರೆ.

2. ಬೆಂಗಳೂರಿನ ಡಿಫೆನ್ಸ್‌ ಪಾರ್ಕ್‌ನಲ್ಲಿ ಆರ್‌ಎಸ್‌ಎಸ್‌ನ ಚಾಣಕ್ಯ ವಿವಿಗೆ 116 ಎಕರೆ ಸಿಕ್ಕಿದೆ

3. ರಾಷ್ಟ್ರೋತ್ಥಾನ ಪರಿಷತ್‌ಗೂ ಅದೇ ಜಾಗದಲ್ಲಿ 5 ಎಕರೆ ಮಂಜೂರಾಗಿದೆ: ಎಂ.ಬಿ.ಪಾಟೀಲ್‌

click me!