ರಾಜ್ಯ ಸರ್ಕಾರ ತಕ್ಷಣವೇ ಬರಗಾಲ ಘೋಷಿಸಿ: ಬಿಎಸ್‌ವೈ, ಬೊಮ್ಮಾಯಿ ಆಗ್ರಹ

By Kannadaprabha News  |  First Published Aug 26, 2023, 9:43 AM IST

ರಾಜ್ಯ ಸರ್ಕಾರ ಕಾಲಹರಣ ಮಾಡದೆ ತಕ್ಷಣ ಬರಪೀಡಿತ ಪ್ರದೇಶಗಳನ್ನು ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. 


ಬೆಂಗಳೂರು/ಹುಬ್ಬಳ್ಳಿ (ಆ.26): ರಾಜ್ಯ ಸರ್ಕಾರ ಕಾಲಹರಣ ಮಾಡದೆ ತಕ್ಷಣ ಬರಪೀಡಿತ ಪ್ರದೇಶಗಳನ್ನು ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಯಡಿಯೂರಪ್ಪ ಅವರು, ರಾಜ್ಯದ 120ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಬಹುತೇಕ ಅಣೆಕಟ್ಟುಗಳು ಬರಿದಾಗಿ ನಮ್ಮ ರೈತ ಸಮುದಾಯ ಒಣ ಬೇಸಾಯವನ್ನೂ ಮಾಡಲಾಗದೆ ಸಂಕಷ್ಟಎದುರಿಸುತ್ತಿದೆ. ರಾಜ್ಯ ಸರ್ಕಾರ ಇನ್ನು ಕಾಲಹರಣ ಮಾಡದೆ ಕೂಡಲೇ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ರೈತರಿಗೆ ಪರಿಹಾರ ನೀಡಬೇಕು. 

ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಬರದ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮಳೆ ಕೊರತೆ ಇದ್ದರೂ ಈವರೆಗೂ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಜೂನ್‌ ತಿಂಗಳ ಕೊನೆಯ ವಾರದವರೆಗೂ ಮಳೆ ಬರಲಿಲ್ಲ. ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಸಂಪೂರ್ಣ ಹಾಳಾದವು. ಜುಲೈನಲ್ಲಿ ಅಲ್ಪಪ್ರಮಾಣದ ಮಳೆಯಾಯಿತು. ಈಗ ಆಗಸ್ಟ್‌ನಲ್ಲಿ ಮತ್ತೆ ಮಳೆ ಕೊರತೆ ಕಂಡುಬಂದಿದೆ. ಆದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಭಾವನೆ ತಾಳಿದೆ. 

Tap to resize

Latest Videos

ಶ್ರೀಮಂತರ ಜೇಬು ತುಂಬಿಸುವವರು ದೇಶದಲ್ಲಿ ಅಧಿಕಾರದಲ್ಲಿದ್ದಾರೆ: ಸಿದ್ದರಾಮಯ್ಯ

ಈವರೆಗೂ ಬರಪೀಡಿತ ತಾಲೂಕುಗಳ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಹರಿಹಾಯ್ದರು. ಕೂಡಲೇ ಬರಪೀಡಿತ ತಾಲೂಕುಗಳ ಘೋಷಣೆ ಮಾಡಬೇಕು. ಬೆಳೆ ಸಮೀಕ್ಷೆ ಮಾಡಿಸಿ, ಪರಿಹಾರ ಕೊಡುವ ಕೆಲಸ ಮಾಡಬೇಕು. ಕುಡಿಯುವ ನೀರಿನ ಕೊರತೆ ನೀಗಿಸಬೇಕು. ಈಗಾಗಲೇ ಕೇಂದ್ರ ಸರ್ಕಾರ ನೈಸರ್ಗಿಕ ವಿಪತ್ತು ಪರಿಹಾರದ ಅಡಿ ಒಂದು ಕಂತು ಪರಿಹಾರದ ಹಣ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಹಣವಿದೆ. ಇದನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಬೇಕು ಎಂದು ಹೇಳಿದರು.

ಬರ ಘೋಷಣೆ ಬಗ್ಗೆ ಮುಂದಿನ ವಾರ ನಿರ್ಧಾರ: ರಾಜ್ಯದ ಸುಮಾರು 130ಕ್ಕೂ ಹೆಚ್ಚಿನ ತಾಲೂಕುಗಳಲ್ಲಿ ಬರದ ಛಾಯೆ ಇದೆ ಎಂದು ಮಾಹಿತಿ ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ಬರ ಘೋಷಣೆ ಕುರಿತು ಮುಂದಿನ ವಾರ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.79ರಷ್ಟುಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಬೆಳೆ ಒಣಗುತ್ತಿದೆ. ಸಚಿವ ಸಂಪುಟ ಉಪಸಮಿತಿಯಲ್ಲಿ ಕೈಗೊಂಡ ತೀರ್ಮಾನದಂತೆ ತೀವ್ರ ಬರಪೀಡಿತ ಪ್ರದೇಶದಲ್ಲಿ ಬೆಳೆ ಪರಿಸ್ಥಿತಿ ಸಮೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ವರದಿ ಪಡೆದು ಮತ್ತೊಮ್ಮೆ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಮಾಡಲಾಗುವುದು. ಬರ ಘೋಷಣೆಗೆ ಕೇಂದ್ರದ ಮಾರ್ಗಸೂಚಿ ಅನ್ವಯವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಸಿದ್ದು, ಡಿಕೆಶಿ ನಡುವೆ ಪೈಪೋಟಿ ಇಲ್ಲ: ನಾಗೇಂದ್ರ, ಚಲುವರಾಯ

ಶೇ.25ರಷ್ಟು ಮಳೆ ಕೊರತೆ: ಜೂ.1ರಿಂದ ಆ.24ರವರೆಗೆ ವಾಡಿಕೆ ಮಳೆ 651 ಮಿ.ಮೀ. ಆಗಬೇಕಿದ್ದು, ವಾಸ್ತವಿಕ ಮಳೆ 487 ಮಿ.ಮೀ. ಆಗಿದೆ. ಶೇ.25ರಷ್ಟುಕೊರತೆಯುಂಟಾಗಿದೆ. 5.54 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 77,445 ಕ್ವಿಂಟಲ್‌ ಲಭ್ಯತೆ ಇದೆ. 3.30 ಲಕ್ಷ ಕ್ವಿಂಟಲ್‌ ವಿತರಣೆ ಮಾಡಲಾಗಿದೆ. 80 ಸಾವಿರ ಕ್ವಿಂಟಲ್‌ ಆರ್‌ಎಸ್‌ಕೆಗಳಲ್ಲಿ ಪ್ರಸ್ತುತ ಬೀಜ ಲಭ್ಯತೆ ಇದೆ. ಮುಂಗಾರು ಹಂಗಾಮಿನಲ್ಲಿ 25.47 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ದಾಸ್ತಾನು 33.20 ಲಕ್ಷ ಮೆಟ್ರಿಕ್‌ ಟನ್‌ ಲಭ್ಯ ಇದೆ. 19.89 ಲಕ್ಷ ಮೆಟ್ರಿಕ್‌ ಟನ್‌ ಮಾರಾಟ ಮಾಡಲಾಗಿದೆ. 13.30 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಉಳಿಕೆಯಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಅಧಿಸೂಚಿತ ಬೆಳೆಗಳು 36 ಇದ್ದು, ಈಗಾಗಲೇ 16.23 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 15.31 ಲಕ್ಷ ಹೆಕ್ಟೇರ್‌ ಬೆಳೆ ವಿಮೆ ವ್ಯಾಪ್ತಿಗೆ ಒಳಪಟ್ಟಿದೆ. 2022-23ನೇ ಸಾಲಿನಲ್ಲಿ 12.64 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿ 1114.17 ಕೋಟಿ ರು.ಗಳನ್ನು ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

click me!