
ವಿಧಾನಸಭೆ (ಆ.22): ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆ ಸ್ಥಗಿತಗೊಂಡಿದ್ದು, ಶಾಸಕರಿಗೆ ಅನುದಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿಯ ವಿ.ಸುನೀಲ್‌ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ನಿಯಮ 69ರ ಅಡಿಯಲ್ಲಿನ ಅಲ್ಪಾವಧಿ ಚರ್ಚೆ ವೇಳೆ ಮಾತನಾಡಿದ ವಿ.ಸುನೀಲ್ ಕುಮಾರ್, ರಾಜ್ಯದಲ್ಲಿ ಬೋಗಸ್ ಫ್ರಂ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ.
ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಹೊಸ ರಸ್ತೆ, ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಗ್ಯಾರಂಟಿ ಯೋಜನೆಗಳನ್ನೇ ಅಭಿವೃದ್ಧಿ ಕಾರ್ಯ ಎಂದು ಸರ್ಕಾರ ಅಭಿಪ್ರಾಯ ಹೊಂದಿದಂತಿದೆ. ಎಲ್ಲ ಶಾಸಕರಿಗೆ ಹಂಚಬೇಕಾಗಿದ್ದ ನಬಾರ್ಡ್ ಅನುದಾನದಲ್ಲಿ ₹240 ಕೋಟಿಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪ್ರತಿನಿಧಿಸುವ ಮಂಗಳೂರು ಕ್ಷೇತ್ರದಲ್ಲಿ ಸೇತುವೆ ನಿರ್ಮಾಣಕ್ಕೆ ನೀಡಲಾಗಿದೆ. ಇದು ಸರ್ಕಾರದ ತಾರತಮ್ಯದ ಕೆಲಸ. ಅದರ ಬದಲು ಲೋಕೋಪಯೋಗಿ ಇಲಾಖೆಯಲ್ಲಿ ಮೀಸಲಿಟ್ಟಿರುವ ಅನುದಾನ ಕೊಡಬಹುದಿತ್ತು ಎಂದರು.
ಗ್ರಾಮೀಣ ರಸ್ತೆಗಳಿಗೆ ಮಣ್ಣು ಹಾಕಲೂ ಅನುದಾನವಿಲ್ಲದಂತಾಗಿದೆ. ಅದರ ಪರಿಣಾಮ ಗುಂಡಿಗಳಲ್ಲಿ ರಸ್ತೆ ಹುಡುಕಬೇಕಾದ ಪರಿಸ್ಥಿತಿಯಿದೆ. ವಸತಿ ಇಲಾಖೆಯಿಂದ ಕಳೆದೆರಡು ವರ್ಷಗಳಿಂದ ಒಂದೇ ಒದು ಮನೆ ನೀಡಿಲ್ಲ. ಹೀಗಿರುವಾಗ ವಸತಿ ಇಲಾಖೆಯ ಅವಶ್ಯಕತೆಯೇನಿದೆ?, ಅದನ್ನು ವಿಸರ್ಜಿಸಿ. ಕಳೆದ ವರ್ಷ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಪರಿಹಾರಕ್ಕಾಗಿ ನಮ್ಮ ರಾಜ್ಯ ಸರ್ಕಾರ ₹10 ಕೋಟಿ ನೀಡಿದೆ. ಆದರೆ, ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಈವರೆಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ನೆಂಟಸ್ತನ ಮಾತಾಡಲು ಬಂದಿಲ್ಲ: ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರು ಅವರು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ರೇಗಾಡಿ, ‘ಏನ್ರೀ...ನನ್ನ ನೆಂಟಸ್ತನ ಮಾತನಾಡಲು ಬಂದಿದ್ದೀನಾ?’ ಎಂದು ಕಾಗದಗಳನ್ನು ಮೇಜಿಗೆ ಕುಟ್ಟಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ನಡೆಯಿತು. ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಕುರಿತು ಬಿಲ್ ವ್ಯಾಪ್ತಿಯಲ್ಲಿ ಮಾತ್ರ ಮಾತನಾಡುವಂತೆ ಖಾದರ್ ಸಲಹೆ ನೀಡಿದರು. ಇದಕ್ಕೆ ತಕ್ಷಣ ಗರಂ ಆದ ಶರಣಗೌಡ, ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ, ನಾನು ಪ್ರತಿ ಬಾರಿಯೂ ಮಾತನಾಡಲು ಎದ್ದು ನಿಂತಾಗ ಹೀಗೆ ಮಾಡುತ್ತೀರಿ. ಬಿಲ್ ಬಗ್ಗೆ ಮಾತನಾಡದೆ ‘ನನ್ನ ನೆಂಟಸ್ತನ ಮಾತನಾಡುತ್ತೀನಾ?’ ಎಂದು ರೇಗಾಡಿದರು. ಈ ವೇಳೆ ಎಚ್.ಕೆ.ಪಾಟೀಲ್ ಮಧ್ಯಪ್ರವೇಶ ಮಾಡಿ, ನೀವು ಮೊದಲ ಸಲ ಆಯ್ಕೆ ಆಗಿ ಬಂದಿದ್ದೀರಿ. ಈ ರೀತಿಯ ವರ್ತನೆ ಬೇಡ. ಪೀಠಕ್ಕೆ ಗೌರವ ಕೊಡುವುದು ಕಲಿಯಿರಿ ಎಂದು ಬುದ್ದಿವಾದ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.