ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯಗಳೂ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ, ಆಕ್ಷೇಪ ಕೇಳಿಬಂದಿರುವ ಅಧ್ಯಾಯಗಳನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಂಗಳೂರು (ಜೂ.07): ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯಗಳೂ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ, ಆಕ್ಷೇಪ ಕೇಳಿಬಂದಿರುವ ಅಧ್ಯಾಯಗಳನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, 2023-24ನೇ ಶೈಕ್ಷಣಿಕ ಸಾಲಿಗೆ ಈಗಾಗಲೇ ಬಹುತೇಕ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳು ಮುದ್ರಣವಾಗಿ ಶಾಲೆಗಳನ್ನು ತಲುಪಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯ ಮುದ್ರಿಸುವ ಪ್ರಕ್ರಿಯೆಗೆ ಕೈಹಾಕುವುದಿಲ್ಲ.
ಬದಲಾಗಿ, ವಿತರಿಸಲಾಗಿರುವ ಪಠ್ಯದಲ್ಲಿ ವಿವಾದಿತ ಹಾಗೂ ಆಕ್ಷೇಪಣೆ ಕೇಳಿಬಂದಿರುವ ಪಾಠಗಳನ್ನು ಪಟ್ಟಿಮಾಡಿ, ಅವುಗಳನ್ನು ಮಕ್ಕಳಿಗೆ ಬೋಧನೆ ಮಾಡದಂತೆ ಶಾಲೆಗಳಿಗೆ ಸುತ್ತೋಲೆ ಹೊರಡಿಸಲು ತೀರ್ಮಾನಿಸಿದೆ. ಆದರೆ, ಈ ವಿಚಾರವನ್ನು ಮುಂದಿನ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಚರ್ಚಿಸಿ ಅನಂತರ ಅಧಿಕೃತವಾಗಿ ಪ್ರಕಟಿಸಲಿದೆ.
ಬಾಡಿಗೆ ಮನೆಗಳಿಗೂ ಉಚಿತ ವಿದ್ಯುತ್: ಗೊಂದಲಕ್ಕೆ ತೆರೆ ಎಳೆದ ಸಿದ್ದು, ಇಂಧನ ಸಚಿವ ಜಾರ್ಜ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ನಗರದ ಶಕ್ತಿ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, 2017ನೇ ಸಾಲಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮುಖ್ಯಸ್ಥರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಸೇರಿದಂತೆ ವಿವಿಧ ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳು, ಅಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಈ ಸಾಲಿನ ಮಟ್ಟಿಗೆ ವಿವಾದಿತ ಹಾಗೂ ಆಕ್ಷೇಪಣೆಗಳಿರುವ ಪಠ್ಯಗಳನ್ನು ಬೋಧನೆ, ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈಬಿಡಲು ತೀರ್ಮಾನಿಸಲಾಗಿದೆ. ಮುಂದಿನ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಈ ವಿಷಯ ಚರ್ಚಿಸಿ ಅಧಿಕೃತ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆ, ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯಗಳು ಸೇರಿದಂತೆ ವಿವಿಧ ವಿವಾದಿತ ಪಠ್ಯಗಳ ಜೊತೆಗೆ ಸಮಾಜ ವಿಜ್ಞಾನ ವಿಷಯದಿಂದ ಕೆಲವು ಅವಹೇಳನಕಾರಿ ವಿಷಯಗಳನ್ನು ತೆಗೆದುಹಾಕಲು ಕೂಡ ನಾವು ಮನವಿ ಮಾಡಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೊಸ ಪಠ್ಯಪುಸ್ತಕಗಳನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆಯೂ ಚರ್ಚಿಸಲಾಯಿತು ಮತ್ತು ಸಮಿತಿಯನ್ನು ರಚಿಸುವ ಮೊದಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆಯೂ ಸಲಹೆ ನೀಡಿದ್ದೇವೆ ಎಂದು ತಜ್ಞರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಹೋಟೆಲ್, ಕ್ಲಬ್‌ಗಳಲ್ಲಿ ರಾಜಕೀಯ ಮಾಡಿದರೆ ಮತ ಬರಲ್ಲ: ಸಂಸದ ಡಿ.ಕೆ.ಸುರೇಶ್
ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಿಸಿ ಸೇರಿಸಿದ್ದ ವಿಷಯಗಳನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹಲವು ಶಿಕ್ಷಣ ತಜ್ಞರು ಸಭೆ ನಡೆಸಿ ಪಠ್ಯಪುಸ್ತಕ ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದರು.