
ಚಿತ್ರದುರ್ಗ (ಜ.07): ರಾಜ್ಯದಲ್ಲಿ ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಈಗ ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಚುನಾವಣೆ ವೇಳೆ ಅತೃಪ್ತ ನಾಯಕರಿಂದ ಪಕ್ಷಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ಸರಿದೂಗಿಸಲು ಹೈ ಕಮಾಂಡ್ ಸಚಿವ ಸಂಪುಟ ವಿಸ್ತರಣೆ ಕೈಗೊಂಡಿದೆ ಎಂದು ತಿಳಿದುಬಂದಿದೆ.
ರಾಜ್ಯ ರಾಜಕಾರಣದಲ್ಲಿ ಸಚಿವ ಸ್ಥಾನಕ್ಕಾಗಿ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಸಿ.ಪಿ. ಯೋಗೀಶ್ವರ್ ಸೇರಿ ಹಲವರು ಪಟ್ಟು ಹಿಡಿದು ಕುಳಿತಿದ್ದಾರೆ. ನಾಲ್ಕೈದು ತಿಂಗಳಿಂದ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಹಿರಂಗವಾಗಿಯೇ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೆ, ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆಗೆ ೧೦೦ ದಿನಗಳು ಬಾಕಿ ಇದೆ ಎನ್ನುತ್ತಿರುವಾಗ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ಮಗ್ಗಲ ಮುಳ್ಳಾಗಬಹುದು ಎಂದು ನಿರೀಕ್ಷಿಸಲಾಗಿದ್ದವರನ್ನು ತಣಿಸಲು ಮುಂದಾಗಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ಈಶ್ವರಪ್ಪಗೆ ಇನ್ನೂ ಮುಗಿದಿಲ್ಲ ಸಂಕಷ್ಟ?
ಹೈಕಮಾಂಡ್‌ನಿಂದ ಸಚಿವರ ಪಟ್ಟಿ ಬಿಡುಗಡೆ: ಈ ಕುರಿತು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಠರೊಂದಿಗೆ ವಿಸ್ತೃತವಾದ ಚರ್ಚೆ ಆಗಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಆದಷ್ಟೂ ಬೇಗನೆ ಒಂದು ಸಭೆ ನಡೆಸಿ ಈ ಬಗ್ಗೆ ತೀರ್ಮಾನವಾಗಲಿದೆ. ಶೀಘ್ರದಲ್ಲಿ ಆಗುವ ನಿರೀಕ್ಷೆ ಇದೆ. ಸಚಿವ ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಯಾಗುತ್ತಾರೆ ಎನ್ನುವುದು ಹೈಕಮಾಂಡ್ ತೀರ್ಮಾನ ಮಾಡಲಿದೆ. ವಿಚಾರಗಳನ್ನು ವರಿಷ್ಠರಿಗೆ ಮನವರಿಕೆ ಮಾಡಲಾಗಿದೆ. ಸಾಮಾಜಿಕ, ಪ್ರಾದೇಶಿಕ ಪ್ರಾತಿನಿಧ್ಯ ಎಲ್ಲಾ ವಿಚಾರಗಳು ಇವುಗಳ ಬಗ್ಗೆ ಚರ್ಚೆಯಾಗಿದ್ದು ಶೀಘ್ರದಲ್ಲಿ ವಿಸ್ತರಣೆ ಆಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.
ಕೇಸ್ ಕ್ಲೀನ್‌ಚಿಟ್ ದೊರೆತರೂ ಸಚಿವ ಸ್ಥಾನ ಸಿಗಲಿಲ್ಲ: ಶಿವಮೊಗ್ಗದಲ್ಲಿ ಇತ್ತೀಚೆಗೆ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟ್‌ನಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೆಸರನ್ನು ಬರೆದಿಟ್ಟಿದ್ದನು. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಈಶ್ವರಪ್ಪ ರಾಜಿನಾಮೆ ನೀಡಿದ್ದರು. ಇದಕ್ಕಿಂತ ಮೊದಲು ರಮೇಶ್ ಜಾರಕಿಹೊಳಿ ಅವರ ಮೇಲೆ ಯುವತಿಯೊಬ್ಬಳು ರೇಪ್ ಕೇಸ್ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ, ಈ ಇಬ್ಬರೂ ಸಚಿವರು ತಮ್ಮ ತಪ್ಪು ಇಲ್ಲದಿದ್ದರೂ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಿದ್ದು, ಈ ಕೇಸ್‌ಗಳಿಂದ ಕ್ಲೀನ್‌ಚಿಟ್ ಪಡೆದ ನಂತರ ಸಚಿವ ಸ್ಥಾನ ನೀಡಬೇಕು ಎಂದು ತಿಳಿಸಿದ್ದರು. ಅದರಂತೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿದ್ದರು.
ದಿಲ್ಲಿಗೆ ಬನ್ನಿ: ರಮೇಶ್ ಜಾರಕಿಹೊಳಿಗೆ ಅಮಿತ್ ಶಾ ಸೂಚನೆ
ಅಧಿವೇಶನದಿಂದ ಹೊರಗುಳಿದು ಆಕ್ರೋಶ: ಇನ್ನು ಇಬ್ಬರೂ ಸಚಿವರು ತಮ್ಮ ಮೇಲಿದ್ದ ಕೇಸ್‌ಗಳಿಂದ ಕ್ಲೀನ್‌ಚಿಟ್ ಪಡೆದಿದ್ದರೂ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯನ್ನೂ ಮಾಡಿದ್ದರು. ಇದಾದ ನಂತರ ಅತೃಪ್ತ ಸಚಿವರನ್ನು ಕರೆಸಿ ಸಮಾಧಾನ ಮಾಡಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುವಂತೆ ತಿಳಿಸಿದ್ದರು. ಇದಾದ ನಂತರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಬಂದು ಹೋಗಿದ್ದು, ಈಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ವತಃ ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.