ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೆಲ ಸಚಿವರುಗಳು ಕೋರ್ಟ್ ಮೊರೆ ಹೋಗಿರುವ ಬಗ್ಗೆ ಶ್ರೀರಾಮುಲು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಧಾರವಾಡ, (ಮಾ.07): ಹಲವು ಸಚಿವರು ತಮ್ಮ ವಿರುದ್ಧ ಸುದ್ದಿಗಳನ್ನ ಪ್ರಕಟಿಸದಂತೆ ಕೋರ್ಟ್ ಮೊರೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ರಾಜಕಾರಣಿಗಳಿಗೆ ಯಾರಿಗೂ ತೇಜೋವಧೆ ಮಾಡುವ ಹಕ್ಕಿಲ್ಲ. ಸಚಿವರು ಕೋರ್ಟ್ ಮೋರೆ ಹೋಗಿದ್ದಾರೆ ಎಂದರೆ ಎಲ್ಲೋ ಒಂದು ಕಡೆ ಅವರಿಗೆ ಅನುಮಾನ ಬಂದಿದೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬಂದ ನಂತರ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ತೇಜೋವಧೆ ಮಾಡುವ ಸಂದರ್ಭದಲ್ಲಿ ಅವರು ಕೋರ್ಟ್‌ಗೆ ಹೋಗಿದ್ದು ತಪ್ಪಲ್ಲ. ಸಿಡಿ ವಿಚಾರದಲ್ಲಿ ಮಾತ್ರ ಅವರು ಕೋರ್ಟ್ ಗೆ ಹೋಗಿಲ್ಲ. ಬೇರೆ ಬೇರೆ ಕಾರಣಗಳಿಂದ ಹೋಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಸಲೀಲೆ ಸಿ.ಡಿ.ರಿಲೀಸ್: ಕೋರ್ಟ್‌ಗೆ ಹೋಗಿದ್ದ 6 ಸಚಿವರಿಗೆ ಬಿಗ್ ರಿಲೀಫ್
ಬೇರೆ ಪಕ್ಷದಿಂದ ಬಂದವರು, ಬಿಜೆಪಿ ಪಕ್ಷದ ಚಿನ್ಹೆ ಮೇಲೆ ಗೆದ್ದವರು.. ತೇಜೋವಧೆ ಮಾಡುವ ಸಂದರ್ಭದಲ್ಲಿ ತಾಳ್ಮೆಯಿಂದ ಇರಬೇಕಾಗಿದ್ದರಿಂದ ಕೋರ್ಟ್‌ಗೆ ಹೋಗಿದ್ದಾರೆ. ಕೆಲವು ಸಚಿವರು ಕೋರ್ಟ್‌ಗೆ ಹೋಗುವ ಬಗ್ಗೆ ನಾನು ಹೇಗೆ ಭವಿಷ್ಯ ಹೇಳೋಕೆ ಆಗುತ್ತೆ..? ಎಂದು ಪ್ರಶ್ನೆ ಮಾಡಿದರು.
ನಾನು ಒಂದು ಸಿಡಿ ಬಂದಿದ್ದಕ್ಕೆ ಉಲ್ಲೇಖ ಮಾಡಲು ಇಷ್ಟ ಪಡಲ್ಲ. ಸದ್ಯ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ತನಿಖೆ ನಂತರ ಸತ್ಯ, ಸುಳ್ಳು ಗೊತ್ತಾಗುತ್ತೆ. ಯಡಿಯೂರಪ್ಪ ಸಿಎಂ ಇದ್ದಾಗ ಈ ರೀತಿ ಘಟನೆ ನಡೆಯುತ್ತಿವೆ. ಯಾವ ರೀತಿ ಅದನ್ನ ಸರಿಪಡಿಸಬೇಕು ಎನ್ನುವುದು ವಿಚಾರ ಮಾಡಬೇಕಾಗುತ್ತೆ ಎಂದರು.
ಸಿಡಿಯಿಂದ ಸರ್ಕಾರ ನಡೆಯುತ್ತಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರು ಚರ್ಚೆಗೆ ಬರಬೇಕು. ಚರ್ಚೆಗೆ ಬಂದ ನಂತರ ಅದರ ಸಾಧಕ- ಬಾಧಕ ನೋಡೋಣ. ನಮ್ಮ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ರಾಮುಲು ಅಂತಾ ವ್ಯಕ್ತಿ ಹೋರಾಟ ಮಾಡುತ್ತ ಮುಂದೆ ಬಂದಿದ್ದೇನೆ. ನನ್ನ ಪಕ್ಷದ ಮೇಲೆ ನನಗೆ ವಿಶ್ವಾಸ ಇದೆ ಎಂದು ಹೇಳಿದರು.