ಬಡವರ ಪಾಲಿಗೆ ನಂದಾದೀಪವಾದ ಗೃಹಲಕ್ಷ್ಮೀ ಯೋಜನೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಶೇಷ ಲೇಖನ

By Kannadaprabha News  |  First Published Aug 31, 2024, 6:28 AM IST

ಗೃಹಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿಯರು ಆರ್ಥಿಕವಾಗಿ ಸಬಲರಾಗಿದ್ದು ಮಾತ್ರವಲ್ಲದೇ ಕುಟಂಬ ನಿರ್ವಹಣೆಗೂ ಸಹಕಾರಿಯಾಗಿದೆ. ಕಳೆದ ವರ್ಷ ರಾಜ್ಯವನ್ನು ಕಾಡಿದ ಭೀಕರ ಬರಗಾಲದಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ಸಂಸಾರ ನಡೆಸಿದ್ದಾರೆ.


ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು

ಮಹಿಳೆಯರ ಸುರಕ್ಷತೆ, ಸಬಲೀಕರಣ, ಸಮಾನತೆಗೆ ಕಾಂಗ್ರೆಸ್ ಪಕ್ಷ ಈ ಮುಂಚಿನಿಂದಲೂ ಪ್ರಾತಿನಿಧ್ಯ ನೀಡುತ್ತಾ ಬಂದಿದೆ. ಮಹಿಳಾ ಕೇಂದ್ರಿತ ಯೋಜನೆಗಳು ಕೇವಲ ಚುನಾವಣೆ ಘೋಷಣೆಗಳಲ್ಲ. ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಮಹಿಳಾ ಸಬಲೀಕರಣದ ಅತಿದೊಡ್ಡ ಪ್ರತಿಪಾದಕ. ಮಹಿಳಾ ಸಬಲೀಕರಣಕ್ಕಾಗಿ ಕಾಂಗ್ರೆಸ್ ಹಲವಾರು ಯೋಜನೆಗಳನ್ನು ಘೋಷಿಸಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಮಹಿಳೆಯರಿಗೆ ಶಕ್ತಿ ತುಂಬಲು 5 ಗ್ಯಾರಂಟಿಗಳನ್ನು ನೀಡಿತ್ತು. ಚುನಾವಣೆಗಳಲ್ಲಿ ಇತರೆ ರಾಜಕೀಯ ಪಕ್ಷಗಳು ವಾಗ್ದಾನ ನೀಡುತ್ತವೆ. ಅಧಿಕಾರಕ್ಕೆ ಬರುತ್ತಿದ್ದಂತೆ ಅವುಗಳನ್ನು ಮರೆತುಬಿಡುತ್ತವೆ. ಆದರೆ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಮಾತ್ರವಲ್ಲದೆ ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ ಎಂಬುದಕ್ಕೆ ಪಂಚ ಗ್ಯಾರಂಟಿಗಳೇ ಸಾಕ್ಷಿ.

Tap to resize

Latest Videos

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆ ವೇಳೆ ಈ ಘೋಷಣೆಗಳು ಕೇವಲ ಘೋಷಣೆಗಳಾಗಲಿವೆ ಎಂದು ವಿರೋಧ ಪಕ್ಷಗಳು ಗೇಲಿ ಮಾಡಿದವು. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸಿದವು. ಆದರೆ ರಾಜ್ಯದ ಜನತೆಗೆ ಗೊತ್ತಿತ್ತು, ಕಾಂಗ್ರೆಸ್ ಪಕ್ಷ ಎಂದಿಗೂ ಕೊಟ್ಟ ಮಾತನ್ನು ತಪ್ಪುವುದಿಲ್ಲ. ನುಡಿದಂತೆ ನಡೆದ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ ಎಂದು ನಂಬಿ ನಮ್ಮ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಜನಾಶೀರ್ವಾದ ಮಾಡಿದರು. ಅಧಿಕಾರಕ್ಕೆ ಬಂದ ತಕ್ಷಣವೇ ನಮ್ಮ ಸರ್ಕಾರ ಜನರಿಗೆ ನೀಡಿದ್ದ ವಾಗ್ದಾನದಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿತು. ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಕೂಡ ಒಂದಾಗಿದ್ದು, ಇದೀಗ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು (ಆ.30ಕ್ಕೆ) ಒಂದು ವರ್ಷ ಸಂದಿದೆ. ಈ ಒಂದು ವರ್ಷದಲ್ಲಿ 25 ಸಾವಿರ ಕೋಟಿ ರು. ಹಣ ಮಹಿಳೆಯರ ಖಾತೆಗೆ ಜಮೆಯಾಗಿದೆ.

ಎತ್ತಿನಹೊಳೆಯಿಂದ ನೀರೆತ್ತುವ ಕಾರ್‍ಯಕ್ಕೆ ಡಿ.ಕೆ.ಶಿವಕುಮಾರ್‌ ಪ್ರಾಯೋಗಿಕ ಚಾಲನೆ

ಬರದಲ್ಲಿ ನೆರವಿಗೆ ಬಂದ ಹಣ
ಗೃಹಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿಯರು ಆರ್ಥಿಕವಾಗಿ ಸಬಲರಾಗಿದ್ದು ಮಾತ್ರವಲ್ಲದೇ ಕುಟಂಬ ನಿರ್ವಹಣೆಗೂ ಸಹಕಾರಿಯಾಗಿದೆ. ಕಳೆದ ವರ್ಷ ರಾಜ್ಯವನ್ನು ಕಾಡಿದ ಭೀಕರ ಬರಗಾಲದಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ಸಂಸಾರ ನಡೆಸಿದ್ದಾರೆ ಎಂದರೆ ಅದಕ್ಕೆ ಗೃಹಲಕ್ಷ್ಮಿಯೇ ಸಾಕ್ಷಿ. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಕುಟುಂಬವೇ ಆರ್ಥಿಕವಾಗಿ ಗಟ್ಟಿಯಾಗುತ್ತದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ ಎಂಬ ದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಲಾಯಿತು. 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2023ರ ಜು.19ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭಿಸಲಾಯಿತು. ಇಲ್ಲಿಯರವರೆಗೂ ರಾಜ್ಯದಲ್ಲಿ 1 ಕೋಟಿ 23 ಲಕ್ಷ ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು 2000 ರು.ನಂತೆ ತಿಂಗಳಿಗೆ 2280 ಕೋಟಿ ರು. ಹಣವನ್ನು ವರ್ಗಾವಣೆ ಮಾಡುವ ಮೂಲಕ ಕಳೆದ 1 ವರ್ಷದಲ್ಲಿ 25 ಸಾವಿರದ 248 ಕೋಟಿ ರು. ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮುಖಾಂತರ ವರ್ಗಾಯಿಸಲಾಗಿದೆ. ಮನೆಯ ಯಜಮಾನಿಯರ ಖಾತೆಗೇ ನೇರವಾಗಿ ಹಣ ಸಂದಾಯವಾಗುವುದರಿಂದ ಇದರಲ್ಲಿ ಭ್ರಷ್ಟಾಚಾರದ ಅನುಮಾನಕ್ಕೂ ಅವಕಾಶವಿಲ್ಲ.

ನಮ್ಮ ಮನದಲ್ಲಿ ಸಾರ್ಥಕ ಭಾವ
ಗೃಹಲಕ್ಷ್ಮಿ ಯೋಜನೆಯ ಹಣ ಅನೇಕರಿಗೆ ನಾನಾ ರೀತಿಯಲ್ಲಿ ನೆರವಿಗೆ ಬಂದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣ ಕೂಡಿಟ್ಟು ಫ್ರೀಡ್ಜ್ ಖರೀದಿಸಿದ್ದಾರೆ. ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿಜಯಪುರದ ಹುಡುಗ ತನ್ನ ವ್ಯಾಸಂಗಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಯಿತು ಎಂದು ಹೇಳಿದ್ದಾನೆ. ಇದನ್ನೆಲ್ಲ ಕೇಳಿ ಸಾರ್ಥಕತೆಯ ಭಾವನೆ ಮನದಲ್ಲಿ ಮೂಡಿತು. ಬಾಗಲಕೋಟದಲ್ಲಿ ಮಹಿಳೆ ತನಗೆ ಬಂದ ಗೃಹಲಕ್ಷ್ಮಿ ಹಣದಲ್ಲಿ ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಡುವ ಮುಖಾಂತರ ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟು ನೆರವಾಗಿದ್ದರೆ, ಬೆಳಗಾವಿಯಲ್ಲಿ ಅಜ್ಜಿಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ಊರಿನವರಿಗೆಲ್ಲಾ ಹೊಳಿಗೆ ಊಟ ಹಾಕಿಸಿ ಸಂತೃಪ್ತಿಪಡಿಸಿದ್ದನ್ನು ನೋಡಿದರೆ ನಮ್ಮ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ, ಅವುಗಳು ಬಡವರ ಪಾಲಿನ ನಂದಾದೀಪ, ಗೃಹಿಣಿಯರ ಪಾಲಿನ ಆಶಾಕಿರಣ ಎಂಬುದು ಮನವರಿಕೆಯಾಗುತ್ತಿದೆ.

ಇಡೀ ದೇಶಕ್ಕೆ ದಿಕ್ಸೂಚಿ ಗ್ಯಾರಂಟಿ
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ದಿಕ್ಸೂಚಿಯಾಗಿವೆ. ಗೃಹಲಕ್ಷ್ಮಿ ಯೋಜನೆ ವಿಶ್ವದಲ್ಲೇ ಅತ್ಯಂತ ದೊಡ್ಡ ಯೋಜನೆ. ಮನೆಯ ಯಜಮಾನಿಯರಿಗೆ ನಮ್ಮ ಸರ್ಕಾರ ಪ್ರತಿ ತಿಂಗಳು ನೀಡುತ್ತಿರುವ 2 ಸಾವಿರ ರು. ಹಣ ದಿನಸಿ, ತರಕಾರಿ, ಹಾಲು ಖರೀದಿ, ಔಷಧೋಪಚಾರಗಳಿಗೆ, ಮಕ್ಕಳ ಶಾಲಾ ಶುಲ್ಕ ಪಾವತಿ ಸೇರಿದಂತೆ ವಿವಿಧ ರೀತಿಯಲ್ಲಿ ಸದುಪಯೋಗವಾಗುತ್ತಿದ್ದು, ಬಡವರ ಬಾಳಿನಲ್ಲಿ ಹೊಸಬೆಳಕನ್ನು ಮೂಡಿಸಿದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಹಾಗೂ ಆರ್ಥಿಕ ಚಟುವಟಿಕೆ ಗರಿಗೆದರಲು ಈ ಯೋಜನೆ ಉಪಯುಕ್ತವಾಗಿದೆ.

ಇವು ಮತ ಗಳಿಕೆಗೋಸ್ಕರ ಘೋಷಣೆ ಮಾಡಿದಂತಹ ಯೋಜನೆಗಳಲ್ಲ. ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡರಾದ ಕೆ.ಸಿ.ವೇಣುಗೋಪಾಲ್, ಕರ್ನಾಟಕ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ನಾನು ಒಟ್ಟುಗೂಡಿ ಇಂತಹ ಒಂದು ಐತಿಹಾಸಿಕ ಘೋಷಣೆ ಮಾಡಿ ಅದನ್ನು ಜಾರಿಗೊಳಿಸುವ ಮುಖಾಂತರ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ರಾಷ್ಟ್ರದ ಇನ್ಯಾವುದೇ ರಾಜ್ಯಗಳಲ್ಲಿ ಇಂತಹ ಯೋಜನೆ ಜಾರಿಯಲ್ಲಿ ಇಲ್ಲ. ದೇಶಕ್ಕೆ ಕರ್ನಾಟಕ ಸರ್ಕಾರ ಒಂದು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಎದೆತಟ್ಟಿ ಹೇಳುತ್ತೇನೆ.

ಯೋಜನೆಗಳ ಬಗ್ಗೆ ಅಪಪ್ರಚಾರ
ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಬೊಬ್ಬೆಯಿಟ್ಟರು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆಂದೇ 58 ಸಾವಿರ ಕೋಟಿ ರು. ಮೀಸಲಿರಸಲಾಗಿದೆ. ಗೃಹಲಕ್ಷ್ಮಿ ಯೋಜನೆಗೆಂದೇ 28,608 ಕೋಟಿ ರು. ಮೀಸಲಿಡುವ ಮೂಲಕ ಯಾವುದೇ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಜೂನ್ ತಿಂಗಳಿನಲ್ಲಿ 1.21 ಕೋಟಿ ಫಲಾನುಭವಿಗಳಿಗೆ ತಲಾ 2000 ರು. ಹಣ ಸಂದಾಯ ಮಾಡಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿನ ಹಣವನ್ನು ಕೂಡ ಶೀಘ್ರ ಬಿಡುಗಡೆಗೊಳಿಸಲಾಗುತ್ತದೆ. ಬೆಲೆಏರಿಕೆ ಬಿಸಿ ತಟ್ಟದಂತೆ ಗೃಹಲಕ್ಷ್ಮಿ ಕಾಪಾಡಿದ್ದಾಳೆ. ಲಕ್ಷಾಂತರ ತಾಯಂದಿರು, ಅಕ್ಕತಂಗಿಯರು, ಅಜ್ಜಿಯಂದಿರಿಗೆ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಹಣ ಅಕ್ಷರಶಃ ವರದಾನವಾಗಿದೆ. ಬರಗಾಲದಲ್ಲಿ ಬಡವರ ಕೈಹಿಡಿದಿದೆ. ಲಿಂಗತ್ವ ಅಲ್ಪಸಂಖ್ಯಾತರು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಬಹುದು. ಜನಹಿತವೇ ನಮ್ಮ ಧ್ಯೇಯ.

ಮಹಿಳೆಯರ ಹಿತ ರಕ್ಷಿಸುವ ಪಕ್ಷ
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮಹಿಳಾ ಕೇಂದ್ರಿತ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ, ಮಹಿಳೆಯರ ರಕ್ಷಣೆಗಾಗಿ ಕೌಟುಂಬಿಕ ದೌರ್ಜನ್ಯ ಕಾಯ್ದೆ, ಮಹಿಳಾ ಸಮೃದ್ಧಿ ಯೋಜನೆ, ನಿರ್ಭಯಾ ಕಾಯ್ದೆ…ಹೀಗೆ ಹತ್ತಾರು ಕಾಯಿದೆ ಮತ್ತು ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಹಿತ ಕಾಪಾಡುತ್ತಾ ಬಂದಿದೆ. ಕರ್ನಾಟದಲ್ಲಿ ಗೃಹಲಕ್ಷ್ಮಿ ಜಾರಿಗೆ ತಂದು ಆರ್ಥಿಕವಾಗಿ ಕೂಡ ಅವರನ್ನು ಶಕ್ತಿವಂತರನ್ನಾಗಿ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ.

ಸಿಬಿಐ ತನಿಖೆ: ಡಿ.ಕೆ.ಶಿವಕುಮಾರ್‌ ಕೇಸ್ ತೀರ್ಪು ಇಂದು: ಸರ್ಕಾರದ ವಿರುದ್ಧ ಶಾಸಕ ಯತ್ನಾಳ ಕೋರ್ಟ್‌ಗೆ!

ಅಂತಃಕರಣದ ಆಡಳಿತ
ಆಡಳಿತ ನಡೆಸುವವರಿಗೆ ಅಂತಃಕರಣವಿರಬೇಕು. ತಾಯಿ ಹೃದಯವಿರಬೇಕು. ಬಡವರಿಗೆ ಮಿಡಿಯುವಂತಿರಬೇಕು. ಬಾಯಿ ಮಾತಿನಲ್ಲಿ ಬಡವರ ಬದುಕನ್ನು ಹಸನಾಗಿಸಲು ಸಾಧ್ಯವಿಲ್ಲ, ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬಿದರಷ್ಟೇ ಅವರನ್ನು ಬಡತನದಿಂದ ಮೇಲಕ್ಕೆತ್ತಲು ಸಾಧ್ಯ ಎಂಬುದನ್ನು ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿವೆ. ಬಿಟ್ಟಿ ಭಾಗ್ಯಗಳಿಂದ ಆರ್ಥಿಕ ದಿವಾಳಿಯಾಗುತ್ತದೆ ಎಂದು ಬೊಬ್ಬೆಯಿಡುತ್ತಿರುವವರು ಕೂಡ ಒಂದಿಲ್ಲೊಂದು ರೀತಿಯಲ್ಲಿ ಗ್ಯಾರಂಟಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರುತ್ತೇವೆ.

click me!