ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆಗೆ ಸ್ಪೀಕರ್ ಒಪ್ಪಿಗೆ: ಸದನದಲ್ಲಿ ಬಿಜೆಪಿ ಧರಣಿ ಅಂತ್ಯ

Published : Jul 06, 2023, 07:03 AM IST
ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆಗೆ ಸ್ಪೀಕರ್ ಒಪ್ಪಿಗೆ: ಸದನದಲ್ಲಿ ಬಿಜೆಪಿ ಧರಣಿ ಅಂತ್ಯ

ಸಾರಾಂಶ

ಗ್ಯಾರಂಟಿ ಯೋಜನೆಗಳ ಕುರಿತಂತೆ ಅತಿ ಜರೂರಾದ ವಿಷಯವಾಗಿ ನಿಯಮ 60ರ ಅಡಿ ಚರ್ಚೆಗೆ ನಿಲುವಳಿ ಸೂಚನೆ ಮಂಡನೆಗೆ ಪೂರ್ವಭಾವಿ ಪ್ರಸ್ತಾಪ ಮಾಡಲು ಅವಕಾಶ ನೀಡಿಲ್ಲ ಎಂದು ಮಂಗಳವಾರದಿಂದ ಸದನದಲ್ಲಿ ಧರಣಿ ಆರಂಭಿಸಿದ್ದ ಬಿಜೆಪಿ ಸದಸ್ಯರು ಬುಧವಾರ ಧರಣಿ ಹಿಂಪಡೆದರು.  

ವಿಧಾನಸಭೆ (ಜು.06): ಗ್ಯಾರಂಟಿ ಯೋಜನೆಗಳ ಕುರಿತಂತೆ ಅತಿ ಜರೂರಾದ ವಿಷಯವಾಗಿ ನಿಯಮ 60ರ ಅಡಿ ಚರ್ಚೆಗೆ ನಿಲುವಳಿ ಸೂಚನೆ ಮಂಡನೆಗೆ ಪೂರ್ವಭಾವಿ ಪ್ರಸ್ತಾಪ ಮಾಡಲು ಅವಕಾಶ ನೀಡಿಲ್ಲ ಎಂದು ಮಂಗಳವಾರದಿಂದ ಸದನದಲ್ಲಿ ಧರಣಿ ಆರಂಭಿಸಿದ್ದ ಬಿಜೆಪಿ ಸದಸ್ಯರು ಬುಧವಾರ ಧರಣಿ ಹಿಂಪಡೆದರು. ನಿಲುವಳಿ ಸೂಚನೆ ಮಂಡನೆಗೆ ಆಗ್ರಹಿಸಿ ಬುಧವಾರವೂ ಧರಣಿ ಆರಂಭಿಸಿದ ಬಿಜೆಪಿ ಶಾಸಕರ ಬೇಡಿಕೆಗೆ ಸ್ಪೀಕರ್‌ ಅವರು ಪ್ರಶ್ನೋತ್ತರ ನಂತರ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಬಿಜೆಪಿ ಸದಸ್ಯರು ಧರಣಿ ಹಿಂಪಡೆದರು. ಅದೇ ರೀತಿ ಪ್ರಶ್ನೋತ್ತರ ಅವಧಿ ನಂತರ ಅಶೋಕ್‌ ಅವರು ಪೂರ್ವಭಾವಿ ಪ್ರಸ್ತಾಪ ಮಾಡಿ ಸಾಕಷ್ಟುಸುದೀರ್ಘವಾಗಿಯೇ ಮಾತನಾಡಿದರು.

ಇದಕ್ಕೆ ಕಾಂಗ್ರೆಸ್‌ ಸದಸ್ಯರಿಂದ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಲವು ಬಾರಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಅಶೋಕ್‌ ಅವರು ಪ್ರಸ್ತಾಪ ಪೂರ್ಣಗೊಳಿಸಿದ ನಂತರ ಸ್ಪೀಕರ್‌ ಸ್ಪೀಕರ್‌ ಯು.ಟಿ. ಖಾದರ್‌ ಅವರು ನಿಯಮ 60ರ ಬದಲಿಗೆ ನಿಯಮ 69ರ ಸಾರ್ವಜನಿಕ ಮಹತ್ವದ ವಿಷಯ ಎಂದು ಪರಿಗಣಿಸಿ ಚರ್ಚೆಗೆ ಪರಿವರ್ತಿಸುವುದಾಗಿ ತಿಳಿಸಿ ವಿಷಯಕ್ಕೆ ತೆರೆ ಎಳೆದರು. ಇದಕ್ಕೂ ಮುನ್ನ ಮೊದಲಿಗೆ ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದ ಬಿಜೆಪಿ ಶಾಸಕರು ಧರಣಿ ಮುಂದುವರಿಸಿದರು. ಈ ವೇಳೆ ಬಿಜೆಪಿಯ ವಿ. ಸುನೀಲ್‌ಕುಮಾರ್‌ ಅವರು, ಗ್ಯಾರಂಟಿ ಯೋಜನೆಗಳ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಮಂಗಳವಾರದಿಂದಲೂ ಕೋರುತ್ತಿದ್ದೇವೆ.

ನಾನು ಲಕ್ಷ್ಮೀ, ನಿಮ್ಮ ಮನೆಗೆ ಗೃಹ ಲಕ್ಷ್ಮೀ: ಗೃಹಜ್ಯೋತಿ ಕಲಿಸಿದ ಪಾಠದಿಂದಾಗಿ ಗೃಹಲಕ್ಷ್ಮೀ ವಿಳಂಬ

ಈ ಕುರಿತಂತೆ ಇಡೀ ದಿನ ಧರಣಿ ನಡೆಸಿದ್ದೇವೆ. ಆದರೂ ನೀವು ಅವಕಾಶ ನೀಡಿಲ್ಲ. ಈಗ ಹೊಸದಾಗಿ ಮತ್ತೊಮ್ಮೆ ನಿಲುವಳಿ ಸೂಚನೆ ನೀಡಿದ್ದೇವೆ. ಈಗಲಾದರೂ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು ಎಂದು ಸ್ಪೀಕರ್‌ ಅವರನ್ನು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ಯು.ಟಿ. ಖಾದರ್‌, ಮಂಗಳವಾರ ನೀಡಲಾಗಿದ್ದ ನಿಲುವಳಿ ಸೂಚನೆ ನಿಯಮದಂತೆ ಇರಲಿಲ್ಲ. ಈಗ ಮತ್ತೊಮ್ಮೆ ನಿಲುವಳಿ ಸೂಚನೆ ನೀಡಿದ್ದು, ಪ್ರಶ್ನೋತ್ತರ ಅವಧಿ ನಂತರ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಬಿಜೆಪಿ ಸದಸ್ಯರು ಧರಣಿ ಕೈಬಿಟ್ಟರು.

ಗ್ಯಾರಂಟಿ ಚರ್ಚೆಗೆ ಆಗ್ರಹಿಸಿ ಮತ್ತೆ ಬಿಜೆಪಿ ಧರಣಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಪರಿಷತ್ತಿನಲ್ಲಿ ಬುಧವಾರ ಬಿಜೆಪಿ ಸದಸ್ಯರು ಪುನಃ ಧರಣಿ ಆರಂಭಿಸಿದರಾದರೂ ಹೊಸ ನಿಲುವಳಿ ಪ್ರಸ್ತಾವನೆ ಮಂಡಿಸಿದರೆ ಅದನ್ನು ಪರಿಶೀಲಿಸಿ ನಿರ್ಧರಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಧರಣಿ ಹಿಂಪಡೆದುಕೊಂಡರು. ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪೀಠದ ಮುಂದೆ ಧರಣಿ ಆರಂಭಿಸಿದರು. ಕೋಟ ಶ್ರೀನಿವಾಸ ಪೂಜಾರಿ ಅವರು, ಸಾರ್ವಜನಿಕ ಮಹತ್ವದ ವಿಷಯವನ್ನು ತುರ್ತಾಗಿ ಚರ್ಚಿಸಬೇಕಾಗಿರುವುದರಿಂದ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.

ವಿಪಕ್ಷ ನಾಯಕನ ಆಯ್ಕೆ ಮಾಡದೆ ಬುರುಡೆ ಬಿಡ್ತೀರಾ?: ಸಿಎಂ ಸಿದ್ದರಾಮಯ್ಯ ತರಾಟೆ

ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ನಿಮ್ಮಿಂದ ಆಗಿಲ್ಲ. ಇಲ್ಲಿ ಧರಣಿ ಮಾಡುತ್ತಿದ್ದೀರಿ. ಪ್ರತಿಪಕ್ಷ ನಾಯಕರಿಲ್ಲದೇ ಕಲಾಪ ನಡೆದಿರುವುದು ಇದೇ ಮೊದಲು ಎಂದು ವ್ಯಂಗ್ಯವಾಡಿದರು. ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಸಚಿವರಾದವರು ಈ ರೀತಿ ಬೇಜವಾಬ್ದಾರಿಯಿಂದ ಮಾತನಾಡುವುದು ಸರಿಯಲ್ಲ. ಜನರಿಗೆ ಮೋಸ, ವಂಚನೆ ಮಾಡಿ ಮತ ಪಡೆದು ಅಧಿಕಾರಕ್ಕೆ ಬಂದಿದ್ದಿರಿ ಎಂದು ತಿರುಗೇಟು ನೀಡಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಅನೇಕ ಸದಸ್ಯರು ಏಕ ಕಾಲದಲ್ಲಿ ಮಾತನಾಡಲು ಆರಂಭಿಸಿದ್ದರಿಂದ ಗದ್ದಲದ ವಾತಾವರಣ ಉಂಟಾಯಿತು. ಕೊನೆಗೆ ಸಭಾಪತಿಗಳು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್