ಶೀಘ್ರ ದೇವೇಗೌಡರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ?

By Kannadaprabha NewsFirst Published Aug 22, 2021, 6:53 AM IST
Highlights
  • ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತ
  • ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರನ್ನು ಭೇಟಿಯಾಗಲು ನಿರಾಕರಿಸಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ

ಮೈಸೂರು (ಆ.22): ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವೆನಿಸಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರನ್ನು ಭೇಟಿಯಾಗಲು ನಿರಾಕರಿಸಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. 

ಶನಿವಾರ ಭೇಟಿ ಮಾಡಿ, ಮಾತುಕತೆ ನಡೆಸಲು ಮೈಸೂರಿಗೆ ಬರುವುದಾಗಿ ಎಚ್‌.ಡಿ.ದೇವೇಗೌಡ ಹೇಳಿದಾಗ ‘ನಾನು ಉಡುಪಿಯಲ್ಲಿದ್ದೇನೆ. ನೀವು ಬರಬೇಡಿ’ ಎಂದು ಜಿಟಿಡಿ ಹೇಳಿದಲ್ಲದೆ, ‘ಪಕ್ಷದಲ್ಲಿ ನನಗೆ ತೊಂದರೆಯಾಗಿರುವುದರಿಂದ ಕಾಂಗ್ರೆಸ್‌ ಸೇರುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾತು ಕೊಟ್ಟಿದ್ದು, ಪಕ್ಷ ಬಿಡುವ ಮುನ್ನ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ತಿಳಿಸಿದರು ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ಚುನಾವಣೆ ಸ್ಪರ್ಧೆ ಮಾಡ್ತಾರಾ ಜಿಟಿಡಿ ಪುತ್ರ : ಬೆಂಬಲಿತರ ಸ್ಪರ್ಧೆಗೆ ಯಾವ ಪಕ್ಷ ..?

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್‌ ಜತೆಗಿನ ವಿರಸ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.  ಜಿ.ಟಿ.ದೇವೇಗೌಡರು ಚಾಮುಂಡೇಶ್ವರಿಯಿಂದ ತಮಗೆ ಹಾಗೂ ಹುಣಸೂರಿನಿಂದ ತಮ್ಮ ಪುತ್ರ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್‌ ಆಧ್ಯಕ್ಷರೂ ಆದ ಜಿ.ಡಿ. ಹರೀಶ್‌ಗೌಡರಿಗೆ ಟಿಕೆಟ್‌ ಬಯಸಿದ್ದಾರೆ. ಆದರೆ ಒಬ್ಬರು ವಿಧಾನಸಭೆ, ಮತ್ತೊಬ್ಬರು ಲೋಕಸಭೆಗೆ ಸ್ಪರ್ಧಿಸಿ ಎಂಬ ಸಲಹೆ ಕಾಂಗ್ರೆಸ್‌ ಕಡೆಯಿಂದ ಬಂದಿತ್ತು. ಆದರೆ ಜಿ.ಟಿ. ದೇವೇಗೌಡರು ಒಪ್ಪಿಲ್ಲ. ಹೀಗಾಗಿ ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡರಿಗೆ, ಹುಣಸೂರು ಅಥವಾ ಮೈಸೂರು ನಗರದ ಚಾಮರಾಜ ಕ್ಷೇತ್ರದಿಂದ ಹರೀಶ್‌ಗೌಡರಿಗೆ ಟಿಕೆಟ್‌ ಕೊಡುವುದನ್ನು ಪರಿಶೀಲಿಸುವ ಭರವಸೆ ಸಿಕ್ಕಿದೆ ಎನ್ನಲಾಗಿದೆ.

click me!