Power Point : ಭಾರತೀಯ ಪೌರತ್ವಕ್ಕೂ ಮೊದಲೇ ಸೋನಿಯಾಗೆ ಮತಹಕ್ಕು

Kannadaprabha News   | Kannada Prabha
Published : Aug 14, 2025, 06:38 AM IST
Sonia Gandhi

ಸಾರಾಂಶ

 ನಕಲಿ ವಿವರ/ದಾಖಲೆಗಳನ್ನು ತೋರಿಸಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು. ವಿಪರ್ಯಾಸವೆಂದರೆ, 1980ರಲ್ಲಿ ಮೊದಲ ಬಾರಿ ಮತಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರ ತಾಯಿ ಸೋನಿಯಾ ಗಾಂಧಿ ಆಗ, ಮತದಾರರೆನಿಸಿಕೊಳ್ಳಲು ಇರುವ ಕನಿಷ್ಠ ಅರ್ಹತೆಯಾದ ಪೌರತ್ವವನ್ನೇ ಪಡೆದಿರಲಿಲ್ಲ!

ಅಮಿತ್‌ ಮಾಳವೀಯ, ಬಿಜೆಪಿ ಐಟಿ ವಿಭಾಗ ಮುಖ್ಯಸ್ಥ

 2024ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೇ ಪ್ರಶ್ನಿಸಿ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್‌ ಮತ್ತೊಂದೆಡೆ ಸ್ವತಃ ತಾನೇ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದೆ. ಒಂದೆಡೆ ವಿವಿಧ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿನ ಅಕ್ರಮವನ್ನು ಎತ್ತಿತೋರಿಸುತ್ತಿರುವ ಕಾಂಗ್ರೆಸ್‌, ಇನ್ನೊಂದೆಡೆ ಸ್ವತಃ ತಾನೇ ಮತದಾರರ ಪಟ್ಟಿಯಲ್ಲಿ ತನ್ನ ನಾಯಕರ ಹೆಸರನ್ನು ಸೇರಿಸಿಕೊಂಡ ಉದಾಹರಣೆ ಮೂಲಕ ತನ್ನ ನಿಜಬಣ್ಣವನ್ನು ಬಯಲು ಮಾಡಿದೆ. ಅಚ್ಚರಿಯ ವಿಷಯವೆಂದರೆ ಸ್ವತಃ ಸೋನಿಯಾ ಗಾಂಧಿ ಅವರ ಹೆಸರನ್ನೇ ಭಾರತದ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರಿಸಲಾಗಿತ್ತು. ಬಹುಷಃ ಇದೆ ಕಾರಣಕ್ಕೇ, ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಅಕ್ರಮ ಮತದಾರರನ್ನು ಹೊರಹಾಕುವ ಆಯೋಗದ ಕೆಲಸಕ್ಕೆ ರಾಹುಲ್‌ ಗಾಂಧಿ ಅಡ್ಡಿ ಮಾಡುತ್ತಿದ್ದಾರೆ ಅನ್ನಿಸುತ್ತಿದೆ.

ಕಾಂಗ್ರೆಸ್‌ನ ಇಂಥ ವಿರೋಧದ ಹಿಂದಿನ ಅಸಲಿಯತ್ತು ಏನು ಗೊತ್ತೇ? ಚುನಾವಣಾ ಆಯೋಗದಲ್ಲಿ ಹುಳುಕಿದೆ ಎಂದು ತೋರಿಸುತ್ತಿರುವ ಕಾಂಗ್ರೆಸ್‌ ಪಕ್ಷದಲ್ಲೇ ದೊಡ್ಡ ಹುಳುಕಿದೆ. ಸುದೀರ್ಘ ಕಾಲ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ ಸೋನಿಯಾ ಗಾಂಧಿ ಅವರು ಭಾರತದ ಪೌರತ್ವ ಪಡೆಯುವುದಕ್ಕೂ ಮೊದಲೇ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇದೇ ಕಾರಣಕ್ಕೆಂದು ಕಾಣುತ್ತದೆ, ರಾಹುಲ್ ಗಾಂಧಿಯವರು ಅನರ್ಹ ಮತ್ತು ಅಕ್ರಮ ಮತದಾರರನ್ನು ಅಧಿಕೃತಗೊಳಿಸುವತ್ತ ಒಲವು ತೋರುತ್ತಿದ್ದಾರೆ. ಇದಕ್ಕಾಗಿ ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸೋನಿಯಾಗೆ ತಿರುಗುಬಾಣ

ಇತ್ತೀಚೆಗಷ್ಟೇ ರಾಹುಲ್‌ ಗಾಂಧಿ ಅವರು ಬೆಂಗಳೂರು ಸೆಂಟ್ರಲ್‌ ವ್ಯಾಪ್ತಿಯ ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯನ್ನು ತೋರಿಸುತ್ತಾ, ‘ಅಲ್ಲಿ 1 ಲಕ್ಷಕ್ಕೂ ಅಧಿಕ ಅನರ್ಹರಿದ್ದಾರೆ. ಮತಚೋರಿ ನಡೆದಿದೆ’ ಎಂದು ಆರೋಪಿಸಿದ್ದರು. ‘ಕೆಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಪರಾಭವಕ್ಕೆ ಚುನಾವಣಾ ಆಯೋಗವೇ ಕಾರಣ. ಅದು ಬಿಜೆಪಿ ಜತೆ ಸೇರಿಕೊಂಡು ಅವರ ಪರವಾಗಿ ಕೆಲಸ ಮಾಡುತ್ತಿದೆ’ ಎಂದೆಲ್ಲಾ ಆಪಾದಿಸಿ, ಕರ್ನಾಟಕದವರೆಗೂ ಹೋಗಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ, ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿಯವರೂ ಭಾರೀ ಬೆಂಬಲ ನೀಡಿದ್ದರು. ಆದರೆ ಅಕ್ರಮ ಮತದಾರರ ಪಟ್ಟಿಯಲ್ಲಿ ಸೋನಿಯಾರ ಹೆಸರೂ ಇತ್ತು, ಅದೂ 2 ಬಾರಿ ಎಂಬುದನ್ನು ಅವರು ಮರೆತಂತಿದೆ. ಅದೀಗ ಅವರಿಗೇ ತಿರುಗುಬಾಣವಾಗಿದೆ.

2 ಬಾರಿ ಅಕ್ರಮ ಮತದಾರೆ

ವಿಪರ್ಯಾಸವೆಂದರೆ, ಕಾಂಗ್ರೆಸ್‌ ಪಕ್ಷದ ಚುಕ್ಕಾಣಿಯನ್ನು 2 ದಶಕಗಳ ಕಾಲ ಹಿಡಿದಿದ್ದ ಸೋನಿಯಾ ಗಾಂಧಿ ಅವರೇ ಅಕ್ರಮವಾಗಿ ಮತಪಟ್ಟಿ ಸೇರಿಕೊಂಡಿದ್ದರು. ಹೌದು. ಇಟಲಿಯ ಪ್ರಜೆಯಾಗಿದ್ದ ಆಕೆ ಭಾರತದ ಪೌರತ್ವ ಪಡೆಯುವ ಮೊದಲೇ ಇಲ್ಲಿನ ಮತದಾರೆಯಾಗಿಬಿಟ್ಟಿದ್ದರು.

1968ರಲ್ಲೇ ರಾಜೀವ್‌ ಗಾಂಧಿಯವರ ಅರ್ಧಾಂಗಿಯಾಗಿದ್ದರೂ, 15 ವರ್ಷಗಳ ಕಾಲ ಭಾರತದ ಪ್ರಜೆಯಾಗಲು ಸೋನಿಯಾ ಮುಂದಾಗಿರಲಿಲ್ಲ. ಅದರ ಬಗ್ಗೆ ನಾವು ಪ್ರಶ್ನಿಸುವುದಿಲ್ಲ. 1983ರಲ್ಲಿ ಅವರು ಅಧಿಕೃತವಾಗಿ ಭಾರತೀಯರೆನಿಸಿಕೊಂಡರು. ಆಗ ಗಾಂಧಿ ಪರಿವಾರ, ನವದೆಹಲಿಯಲ್ಲಿದ್ದ ಪ್ರಧಾನಿ ಇಂದಿರಾ ಗಾಂಧಿ ಅವರ ನಿವಾಸದಲ್ಲಿ ನಲೆಸಿತ್ತು. ಇಂದಿರಾ, ರಾಜೀವ್‌, ಸಂಜಯ್‌, ಮನೇಕಾ ಮಾತ್ರ ಮತದಾರರಾಗಿದ್ದರು. ಆದರೆ 1980ರಲ್ಲಿ ನಡೆದ ದೆಹಲಿ ಕ್ಷೇತ್ರದ ಚುನಾವಣೆಯ ಮತಪಟ್ಟಿಯಲ್ಲಿ ಮತಗಟ್ಟೆ ಸಂಖ್ಯೆ 145ರ 388ನೇ ಮತದಾರೆಯಾಗಿ ಸೋನಿಯಾ ಹೆಸರಿತ್ತು.

ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ 1982ರಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಕೆಲವೇ ತಿಂಗಳು. 1983ರ ಜ.1ರಂದು ಬಿಡುಗಡೆಯಾದ ಮತಪಟ್ಟಿಯಲ್ಲಿ 140ನೇ ಮತಗಟ್ಟೆಯ 236ನೇ ಹೆಸರು ಸೋನಿಯಾ ಅವರದ್ದಾಗಿತ್ತು. ಆಗಲೂ ಅವರು ಭಾರತೀಯರಾಗಿರಲಿಲ್ಲ. 1983 ಏ.30ರಂದು ಅವರು ಭಾರತೀಯ ಪೌರತ್ವ ಪಡೆದದ್ದು. ಅಂದರೆ, ಸೋನಿಯಾ ಅವರು 2 ಬಾರಿ ‘ಅಕ್ರಮ ಮತದಾರೆ’ ಆಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!