ರಾಹುಲ್‌, ಪ್ರಿಯಾಂಕಾ ಕ್ಷೇತ್ರದಲ್ಲೂ ಮತಗಳ್ಳತನ: ಬಿಜೆಪಿ ತಿರುಗೇಟು

Kannadaprabha News   | Kannada Prabha
Published : Aug 14, 2025, 05:46 AM IST
rahul priyanka

ಸಾರಾಂಶ

ಸ್ವತಃ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರತಿಪಕ್ಷಗಳ ಹಲವು ಮುಖಂಡರು ಗೆದ್ದಿರುವ ಕ್ಷೇತ್ರದಲ್ಲೂ ಇಂಥದ್ದೇ ಪ್ರಕರಣಗಳು ಪತ್ತೆಯಾಗಿವೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ನವದೆಹಲಿ: ಒಂದೆಡೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿನ ನಕಲಿ ಮತದಾರರ ಐಡಿ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ‘ಮತಗಳ್ಳತನ’ ವಿರುದ್ಧ ಸಮರ ಸಾರಿದ್ದರೆ, ಮತ್ತೊಂದೆಡೆ ಸ್ವತಃ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರತಿಪಕ್ಷಗಳ ಹಲವು ಮುಖಂಡರು ಗೆದ್ದಿರುವ ಕ್ಷೇತ್ರದಲ್ಲೂ ಇಂಥದ್ದೇ ಪ್ರಕರಣಗಳು ಪತ್ತೆಯಾಗಿವೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಜೊತೆಗೆ ಮತಗಳವು ಹೋರಾಟದಲ್ಲಿ ಭಾಗಿಯಾಗಿರುವ ಸೋನಿಯಾ ಗಾಂಧಿ ಭಾರತೀಯ ಪೌರತ್ವ ಪಡೆಯುವುದಕ್ಕೂ ಮೊದಲೇ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿತ್ತು ಎಂಬ ಸ್ಫೋಟಕ ದಾಖಲೆಗಳನ್ನು ಮುಂದಿಟ್ಟಿದ್ದಾರೆ.

ಈ ಮೂಲಕ ಬಿಜೆಪಿ ಮತ್ತು ಚುನಾವಣಾ ಆಯೋಗಗಳನ್ನು ಗುರಿಯಾಗಿಸಿಕೊಂಡು ಲೋಕಸಭೆಯ ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಪ್ರಯೋಗಿಸಿದ್ದ ಮತಗಳ್ಳತನದ ‘ಬ್ರಹ್ಮಾಸ್ತ್ರ’ ಇದೀಗ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿದೆ.ಈ ನಡುವೆ ‘2024ರ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೆ, ಇಡೀ ಚುನಾವಣೆಯನ್ನು ಅಸಿಂಧುಗೊಳಿಸಬೇಕೆಂದು’ ಕಾಂಗ್ರೆಸ್‌ ಆಗ್ರಹಿಸಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸಿದ ‘ವಾರಾಣಸಿಯ ವಿದ್ಯುನ್ಮಾನ ಮತಪಟ್ಟಿಯನ್ನು ಬಿಡುಗಡೆ ಮಾಡಬೇಕು’ ಎಂದು ಬೇಡಿಕೆ ಇಟ್ಟಿದೆ.

ತಿರುಗೇಟು:

ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ರಾಯ್‌ಬರೇಲಿ, ವಯನಾಡ್‌, ಡೈಮಂಡ್‌ ಹಾರ್ಬರ್‌, ಕನೌಜ್‌, ಮಣಿಪುರಿ ಮತ್ತು ಕೊಲ್ತಾಪುರ್‌ ಹೀಗೆ ಆರು ಕ್ಷೇತ್ರಗಳ ಮತದಾರರ ಪಟ್ಟಿ ವಿಶ್ಲೇಷಣೆ ಮಾಡಿ ಅಕ್ರಮ ಮತದಾನದ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಆರು ಕ್ಷೇತ್ರಗಳನ್ನು ಕ್ರಮವಾಗಿ ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಟಿಎಂಸಿಯ ಅಭಿಷೇಕ್‌ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಡಿಂಪಲ್‌ ಯಾದವ್‌ ಮತ್ತು ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪ್ರತಿನಿಧಿಸುತ್ತಿದ್ದಾರೆ.

ರಾಜೀನಾಮೆ ಕೊಡ್ತಾರಾ?:

ಪ್ರತಿಪಕ್ಷಗಳು ಆರೋಪಿಸಿದ ರೀತಿಯಲ್ಲೇ ಇಲ್ಲೂ ಅಕ್ರಮದ ಶಂಕೆ ಇದೆ. ಹೀಗಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸುವ ನಾಯಕರು ರಾಜೀನಾಮೆ ನೀಡುತ್ತಾರಾ ಎಂದು ಠಾಕೂರ್‌ ಪ್ರಶ್ನಿಸಿದ್ದಾರೆ. ಜತೆಗೆ ತಮ್ಮ ರಾಜಕೀಯ ಅಸ್ವಿತ್ವಕ್ಕಾಗಿ ಪ್ರತಿಪಕ್ಷಗಳು ‘ನುಸುಳುಕೋರರ ವೋಟ್‌ ಬ್ಯಾಂಕ್‌ ’ಬಳಸಿಕೊಳ್ಳಲು ಹೊರಟಿದೆ. ಈ ಆರು ಕ್ಷೇತ್ರಗಳ ವಿಶ್ಲೇಷಣೆ ಮಾಡಿದಾಗ ಭಾರೀ ಪ್ರಮಾಣದಲ್ಲಿ ‘ನುಸುಳುಕೋರರ ವೋಟ್‌ ಬ್ಯಾಂಕ್‌’ ಬಯಲಾಗಿದೆ. ಇದೇ ಕಾರಣಕ್ಕೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಅವರು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಜತೆಗೆ, ರಾಹುಲ್‌ ಗಾಂಧಿ ಅವರೊಬ್ಬ ‘ಪ್ರಚಾರ ರಾಜ’ ಎಂದೂ ಆರೋಪಿಸಿದ್ದಾರೆ.

ಬಿಜೆಪಿ ಆರೋಪ ಏನು?:

ವಯನಾಡು:  ವಯನಾಡಿನಲ್ಲಿ 93,499 ಶಂಕಿತನಕಲಿ ಮತದಾರರನ್ನು ಗುರುತಿಸಲಾಗಿದ್ದು, ಇದರಲ್ಲಿ 20,438 ಮಂದಿ 2 ವೋಟರ್‌ ಐಡಿ ಹೊಂದಿರುವವರು, 17,450 ಮಂದಿ ಸುಳ್ಳು ವಿಳಾಸ ನೀಡಿದವರು, 51,365 ಮಂದಿ ಸಾಮೂಹಿಕವಾಗಿ ಸೇರ್ಪಡೆ ಮಾಡಲ್ಪಟ್ಟವರೂ ಸೇರಿದ್ದಾರೆ.

ರಾಯ್‌ಬರೇಲಿ: ರಾಹುಲ್ ಗಾಂಧಿ ಅವರ ರಾಯ್‌ಬರೇಲಿ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಹೆಚ್ಚು ಶಂಕಿತ ಮತದಾರರಿದ್ದಾರೆ. ಇದರಲ್ಲಿ 19,512 ಮಂದಿ ನಕಲಿ ಮತದಾರರು, 71,977 ಮಂದಿ ಸುಳ್ಳು ವಿಳಾಸ ನೀಡಿದವರು ಮತ್ತು 92,747 ಮಂದಿ ಸಾಮೂಹಿಕವಾಗಿ ಸೇರ್ಪಡೆಯಾದವರಿದ್ದಾರೆ.

ಬ್ಯಾನರ್ಜಿ, ಯಾದವ್‌:

ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್‌ ಹಾರ್ಬರ್‌ನಲ್ಲಿ 2.6 ಲಕ್ಷ ಶಂಕಿತ ಮತದಾರರಿದ್ದರೆ, ಅಖಿಲೇಶ್‌ ಯಾದವ್‌ ಪ್ರತಿನಿಧಿಸುವ ಕನೌಜ್‌ನಲ್ಲಿ 2,91,798 ಮತ್ತು ಪತ್ನಿ ಡಿಂಪಲ್‌ ಯಾದವ್‌ ಪ್ರತಿನಿಧಿಸುವ ಮಣಿಪುರಿಯಲ್ಲಿ 2,55,914 ಶಂಕಿತ ಮತದಾರರಿದ್ದಾರೆ.

ಸ್ಟಾಲಿನ್‌:

ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಪ್ರತಿನಿಧಿಸುವ ಕೊಲ್ತಾಪುರ್‌ ಕ್ಷೇತ್ರದಲ್ಲಿ 19,476 ಅನುಮಾನಾಸ್ಪದ ಮತದಾರರಿದ್ದಾರೆ. ಇವರಲ್ಲಿ 4,379 ಎರಡು ವೋಟರ್‌ ಐಡಿ ಹೊಂದಿರುವವರು, 9,133 ಮಂದಿ ನಕಲಿ ವಿಳಾಸ ನೀಡಿದವರು ಸೇರಿದ್ದಾರೆ.

ಪೌರತ್ವಕ್ಕೂ ಮೊದಲು ಸೋನಿಯಾಗೆ ವೋಟರ್‌ ಐಡಿ:

ಇದೇ ವೇಳೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ದೇಶದ ಪೌರತ್ವ ಪಡೆಯುವ ಮೊದಲೇ ಅವರ ಹೆಸರು ಮತದಾರರ ಚೀಟಿಗೆ ಸೇರ್ಪಡೆಯಾಗಿತ್ತು ಎಂದು ಇದೇ ವೇಳೆ ಬಿಜೆಪಿ ಮುಖಂಡ ಅಮಿತ್‌ ಮಾಳವೀಯ ಗಂಭೀರ ಆರೋಪ ಮಾಡಿದ್ದಾರೆ.

ಸೋನಿಯಾರ ಹೆಸರು ಮೊದಲ ಬಾರಿ 1980ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿತ್ತು. ಅಂದರೆ ಅವರು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷ ಮೊದಲು ವೋಟರ್‌ ಐಡಿ ಹೊಂದಿದ್ದರು. 1982ರಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕಿತ್ತುಹಾಕಲಾಯಿತು. ಆ ಬಳಿಕ 1983ರ ಜ.1ರಂದು ಆಕೆ ಹೆಸರು ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಂಡಿತು. ಆದರೆ ಆಕೆಗೆ ಭಾರತೀಯ ನಾಗರಿಕತ್ವ ಸಿಕ್ಕಿದ್ದು ಏ.30, 1983ರಂದು ಎಂದು ಹೇಳಿದ್ದಾರೆ.

- ಸ್ಟಾಲಿನ್‌, ಅಖಿಲೇಶ್‌, ಬ್ಯಾನರ್ಜಿ ಕ್ಷೇತ್ರದಲ್ಲೂ ನಕಲಿ ವೋಟರ್‌ ಐಡಿ ಪತ್ತೆ

- ಪ್ರತಿಪಕ್ಷ ನಾಯಕರು ಗೆದ್ದಿರುವ 6 ಕ್ಷೇತ್ರಗಳ ವಿಶ್ಲೇಷಣೆ ಮಾಡಿದ ಬಿಜೆಪಿ

- ಭಾರತದ ಪೌರತ್ವಕ್ಕೂ ಮೊದಲೇ ವೋಟರ್‌ ಲಿಸ್ಟಲ್ಲಿ ಸೋನಿಯಾ ಹೆಸರು

- ಬಿಜೆಪಿ, ಆಯೋಗ ವಿರುದ್ಧ ಬ್ರಹ್ಮಾಸ್ತ್ರ ಇದೀಗ ರಾಹುಲ್‌ಗೆ ತಿರುಗುಬಾಣ?

ವಯನಾಡು (ಪ್ರಿಯಾಂಕಾ)

93499 ಶಂಕಿತ ಮತದಾರರು

20438 2 ಗುರುತಿನ ಚೀಟಿ ಇರುವವರು

17450 ನಕಲಿ ವಿಳಾಸ ನೀಡಿದವರು

51365 ಸಾಮೂಹಿಕ ಹೆಸರು ಸೇರ್ಪಡೆ

ರಾಯ್‌ಬರೇಲಿ (ರಾಹುಲ್‌ ಗಾಂಧಿ)

200000 ಶಂಕಿತ ಮತದಾರರು

19512 2 ಗುರುತಿನ ಚೀಟಿ ಇರುವವರು

71977 ನಕಲಿ ವಿಳಾಸ ನೀಡಿದವರು

92747 ಸಾಮೂಹಿಕ ಹೆಸರು ಸೇರ್ಪಡೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!