
ಮೈಸೂರು (ಜೂ.04): ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15568 ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ಆರೋಪ ನಿರಾಧಾರ. ಈ ಯೋಜನೆಯ ಒಟ್ಟು ಅನುದಾನವೇ 1568 ಕೋಟಿ ರೂ., 15568 ಕೋಟಿ ರೂ. ಎಲ್ಲಿಂದ ಬಂತು? ಬಿಜೆಪಿ ನಾಯಕರು ಉತ್ತರಿಸುವಂತೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು. ನಗರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಬಿಜೆಪಿ ಸರ್ಕಾರ ಸ್ಮಾರ್ಟ್ ಮೀಟರ್ ಯೋಜನೆಯನ್ನು ದೇಶಾದ್ಯಂತ ಜಾರಿ ಮಾಡಿತು. ಸ್ಮಾರ್ಟ್ ಮೀಟರ್ ಹಗರಣದ ಕೀರ್ತಿ ಬಿಜೆಪಿ ನಾಯಕರಿಗೆ ಸಲ್ಲುತ್ತದೆ ಎಂದು ತಿರುಗೇಟು ನೀಡಿದರು.
ಸ್ಮಾರ್ಟ್ ಮೀಟರ್ ನಿಂದ ವಿದ್ಯುತ್ ಸೋರಿಕೆ, ವಿದ್ಯುತ್ ಕಳ್ಳತನ, ಅಧಿಕ ಬಿಲ್ ತಡೆಯುವುದು ಉದ್ದೇಶವಾಗಿದೆ. ದೇಶದಲ್ಲಿ 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ನಾಟಕ ಮತ್ತು ತೆಲಂಗಾಣ ಬಿಟ್ಟು ಎಲ್ಲಾ ರಾಜ್ಯಗಳು ಈಗಾಗಲೇ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಿಕೊಂಡಿವೆ ಎಂದರು. ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಗುತ್ತಿಗೆ ಕರೆದು ಮೂರು ಕಂಪನಿಗಳನ್ನು ತಿರಸ್ಕರಿಸಿ ರಾಜಶ್ರೀ ಎಲೆಕ್ಟ್ರಿಕಲ್ಸ್ ಅವರಿಗೆ ನೀಡಲಾಗಿದೆ. ಸಹ್ಯಾದ್ರಿ ಎಲೆಕ್ಟ್ರಿಕಲ್ಸ್ ಕಂಪನಿಗೆ ಗುತ್ತಿಗೆ ತಿರಸ್ಕಾರವಾಗುತ್ತಿದ್ದಂತೆಯೇ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಹ್ಯಾದ್ರಿ ಕಂಪನಿಯೊಂದಿಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸುವಂತೆ ಅವರು ಒತ್ತಾಯಿಸಿದರು. ನಮ್ಮ ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು ಬಹುತೇಕ ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಗುತ್ತಿಗೆ ಪಡೆದು ಬಹುದೊಡ್ಡ ಹಗರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಿಜೆಪಿಗೆ ಕೋಮುವಾದ ಬೇಕು: ಈ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಬೇಕಿರುವುದು ಕೋಮುವಾದ. ಹಿಂದೂ ಮುಸ್ಲಿಂ ಅವರ ನಡುವೆ ಜಗಳ ಸೃಷ್ಟಿಸೋದು ವಿನಹ ಬೇರೇನು ಇಲ್ಲ. ಬಿಜೆಪಿಯ ಎಲ್ಲಾ ಶಾಸಕರು ಮುಸ್ಲಿಂಗಳೊಂದಿ ವ್ಯವಹಾರ ಮಾಡುತ್ತಾರೆ. ಆದರೆ ಮಾಧ್ಯಮ ಮುಂದೆ ಬಂತು ಅವರಿಗೆ ಬೈಯುತ್ತಾರೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ಶಾಂತಿ ಕಾಪಾಡಲು ಕರಾವಳಿ ಭಾಗದಲ್ಲಿರುವ 6 ಬಿಜೆಪಿ ಶಾಸಕರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು ಅಥವಾ ಗಡಿಪಾರು ಮಾಡಬೇಕು. ವಿಪಕ್ಷ ನಾಯಕ ಆರ್. ಅಶೋಕ, ಸಿ.ಟಿ. ರವಿ ಅವರನ್ನು ಬಂಧಿಸಬೇಕು.
ಕಲ್ಲಡ್ಕ ಪ್ರಭಾಕರ್ ಕಲ್ಲು ಹಾಕುವ ಬುದ್ಧಿಯವರು. ಅವರ ವಿರುದ್ಧ ದೂರು ದಾಖಲಿಸಿದರೆ ನ್ಯಾಯಾಲಯದಿಂದ ಸ್ಟೇ ತರುತ್ತಾರೆ. ಶಾಂತಿ ಕಾಪಾಡುವುದು ಹೇಗೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳಿಗೆ ಸಮಸ್ಯೆಯಾಗಿಲ್ಲ. ಬಿಜೆಪಿಯವರಿಗೆ ಸಮಸ್ಯೆಯಾಗಿದೆ ಎಂದು ಅವರು ದೂರಿದರು. ನಟ ಕಮಲ್ ಹಾಸನ್ ಹೇಳಿಕೆ ದುರಂತದ ಸಂಗತಿಯಾಗಿದೆ. ಅವರು ಕನ್ನಡಿಗರಿಗೆ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿದ ಅವರು, ಐಪಿಎಲ್ ಫೈನಲ್ ತಲುಪಿರುವ ಆರ್ ಸಿಬಿ ತಂಡ ವಿಜೇತವಾಗಲಿ ಎಂದು ಶುಭ ಹಾರೈಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮಾಧ್ಯಮ ವಕ್ತಾರ ಕೆ.ಮಹೇಶ್, ಸೇವಾದಳ ಗಿರೀಶ್ ಮೊದಲಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.