ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಲಾಯಿತು.
ಬೆಂಗಳೂರು (ಜೂ.12): ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಲಾಯಿತು. ಭಾನುವಾರ ವಿಧಾನಸೌಧದ ಪೂರ್ವದ್ವಾರ ಮುಂಭಾಗದ ಮೆಟ್ಟಿಲುಗಳ (ಗ್ರಾಂಡ್ ಸ್ಟೆಫ್ಸ್) ಮೇಲೆ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಕ್ತಿ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಇದೇ ವೇಳೆ ಸಾಂಕೇತಿಕವಾಗಿ ಐದು ಮಹಿಳೆಯರಿಗೆ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್‌ಗಳು, ಲಾಂಛನ ಮತ್ತು ಯೋಜನೆಗೆ ಸಂಬಂಧಿಸಿದ ಸ್ಟಿಕ್ಕರ್‌ಗಳನ್ನು ಅನಾವರಣಗೊಳಿಸಲಾಯಿತು.
ರಾಜ್ಯದ 31 ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಸ್ಸಿನಲ್ಲಿ ಸಾಂಕೇತಿಕ ಟಿಕೆಟ್ ವಿತರಿಸಿದರು. ಜಿಲ್ಲಾ ಕೇಂದ್ರದಲ್ಲಿ ಬಸ್‌ಗಳನ್ನು ಹೂವಿನಿಂದ ಅಲಂಕರಿಸಿ, ಹಸಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ವಿಜೃಂಭಣೆಯಿಂದ ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು. ನಂತರ ಭಾನುವಾರ ಮಧ್ಯಾಹ್ನ 1 ಗಂಟೆಯಿಂದಲೇ ರಾಜ್ಯಾದ್ಯಂತ ಸರ್ಕಾರಿ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು. ಬಸ್‌ಗಳಲ್ಲಿ ಸಾಂಕೇತಿಕವಾಗಿ ಮಹಿಳಾ ಪ್ರಯಾಣಿಕರಿಗೆ ಹೂವು ಕೊಟ್ಟು, ಸಿಹಿ ವಿತರಿಸಲಾಯಿತು. ಅಲ್ಲದೇ ಶೂನ್ಯದರ ಟಿಕೆಟ್‌ಗಳನ್ನು ನಿರ್ವಾಹಕರು ಕೊಟ್ಟರು. ಮಹಿಳೆಯರು ರಾಜ್ಯ ಸರ್ಕಾರದ ಉಚಿತ ಶಕ್ತಿ ಯೋಜನೆಗೆ ಸಂಭ್ರಮ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 20 ಸ್ಥಾನ: ಸಿಎಂ ಸಿದ್ದರಾಮಯ್ಯ
18609 ಬಸ್‌ಗಳಲ್ಲಿ ಉಚಿತ ಪ್ರಯಾಣ: ಪ್ರತಿ ದಿನ ಅಂದಾಜು 41 ಲಕ್ಷ ಮಹಿಳೆಯರು ಬಸ್ಸಿನಲ್ಲಿ ಸಂಚರಿಸುತ್ತಾರೆ ಎಂಬುದು ಸರ್ಕಾರದ ಲೆಕ್ಕಾಚಾರ. ಅವರು ಸೇರಿದಂತೆ ರಾಜ್ಯದ ಸುಮಾರು 2.5 ಕೋಟಿ ಮಹಿಳೆಯರಿಗೆ ಯೋಜನೆಯ ಲಾಭ ಆಗಲಿದೆ. ರಾಜ್ಯದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಂದ 6308 ನಗರ, 5948 ಸಾಮಾನ್ಯ ಹಾಗೂ 6343 ವೇಗದೂತ ಬಸ್ಸುಗಳಲ್ಲಿ ಮಹಿಳೆಯರು ಪ್ರಯಾಣಿಸಬಹುದಾಗಿದೆ. ಮುಂದಿನ ಮೂರು ತಿಂಗಳಲ್ಲಿ ಸ್ಮಾರ್ಟ್‌ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಉಚಿತವಿದೆ. ಸ್ಮಾರ್ಟ್ ಕಾರ್ಡ್‌ಗಾಗಿ ಜೂನ್ 15ರಿಂದ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದು.
ಪಿಂಕ್ ಟಿಕೆಟ್ ವಿತರಣೆ: ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯ ಆಗಲಿದೆ. ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಆದರೂ ಅಂತರ ರಾಜ್ಯ ಮಾರ್ಗಗಳಲ್ಲಿ ಆಚರಣೆಯಾಗುತ್ತಿರುವ ಮಾರ್ಗಗಳ (6ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ) ಸಾರಿಗೆಗಳಲ್ಲಿ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ. ಇಟಿಎಂ ತಂತ್ರಾಂಶದಲ್ಲಿ ಉಚಿತ ಟಿಕೆಟ್ ವಿತರಣೆಗೆ ಅಗತ್ಯ ಮಾರ್ಪಾಡುಗಳನ್ನು ಮಾಡಿದ್ದು, ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಇಟಿಎಂ ತಂತ್ರಾಂಶದ ಟಿಕೆಟ್ ಲಭ್ಯವಿಲ್ಲದಿದ್ದರೆ ಪಿಂಕ್ ಬಣ್ಣದ ಶೂನ್ಯದರದ ಟಿಕೆಟ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ವಿತರಿಸಲಾಗುತ್ತದೆ.
ಕೊಪ್ಪಳದಲ್ಲಿ ವಾಂತಿ ಭೇದಿಗೆ 3 ಜನ ಬಲಿ: ವರದಿ ಕೇಳಿದ ಸಿಎಂ ಸಿದ್ದರಾಮಯ್ಯ
ಮುಂಗಡ ಬುಕಿಂಗ್ ಸೌಲಭ್ಯ: ಮುಂಗಡ ಬುಕಿಂಗ್ ಸೌಲಭ್ಯವಿರುವ ಬಸ್ಸುಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಯೋಜನೆಯ ವೆಚ್ಚವನ್ನು ಇಟಿಎಂಗಳಿಂದ ವಿತರಿಸಲಾದ ಶೂನ್ಯ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ ನಿಗಮಗಳಿಗೆ ರಾಜ್ಯ ಸರ್ಕಾರ ವಿತರಿಸಲಿದೆ. ಪ್ರಸ್ತುತ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಇಲ್ಲವೇ ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿದ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಯನ್ನು ಶೂನ್ಯ ಟಿಕೆಟ್ ವಿತರಣೆ ಸಂದರ್ಭದಲ್ಲಿ ಪರಿಗಣಿಸಲಾಗುವುದು.