
ಬೆಂಗಳೂರು, (ಸೆ.08): ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರು ಕಾಳಿಗೆ 7,196 ರೂಪಾತಿಗಳನ್ನು ಕನಿಷ್ಠ ಬೆಂಬಲ ಬೆಲೆಯಾಗಿ ನಿಗಧಿಪಡಿಸಿರುವುದರಿಂದ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಏನೆಲ್ಲಾ ಬರೆದಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.
ಇತ್ತ ಸಿಎಂ ಸಚಿವರ ಸಭೆ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಸಿದ್ದರಾಮಯ್ಯ
ಸಿದ್ದರಾಮಯ್ಯನವರ ಪತ್ರ
ರಾಜ್ಯದಲ್ಲಿ ಮುಂಗಾರಿನ ಮಳೆಗಳು ಚೆನ್ನಾಗಿದ್ದರಿಂದ ಹೆಸರು, ಉದ್ದು ಮುಂತಾದ ದ್ವಿದಳ ಧಾನ್ಯಗಳ ಬೆಳೆ ಉತ್ತಮವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಕೊಯಿಲು ನಡೆಯುತ್ತಿದೆ. ರೈತರ ಶ್ರಮಕ್ಕೆ ಈ ಬೆಲೆ ಕಡಿಮೆಯೆ. ಆದರೆ ಅಷ್ಟಾದರೂ ಸಿಗಲಿ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.
ಹೆಸರು ಮತ್ತು ಉದ್ದು ಬೆಳೆಯನ್ನು ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಪ್ರಸ್ತುತ ವಿವಿಧ ಎ.ಪಿ.ಎಂ.ಸಿ.ಗಳಲ್ಲಿ ಹೆಸರು ಕಾಳು ಕ್ವಿಂಟಾಲ್‍ಗೆ 2,105 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಎಲ್ಲಾ ಮಾರುಕಟ್ಟೆಗಳ ಇಂದಿನ ಸರಾಸರಿ ಬೆಲೆ 5,000 ರೂಪಾಯೊಗಳ ಆಸುಪಾಸಿನಲ್ಲಿದೆ.
ಹೆಸರನ್ನು ಕೊಯಿಲು ಮಾಡಿ ಬಹಳ ದಿನಗಳ ಕಾಲ ರೈತರು ಮನೆಗಳಲ್ಲಿ ದಾಸ್ತಾನು ಮಾಡಲಾಗುವುದಿಲ್ಲ. ಹುಳದ ಕಾಟ ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ರೈತರು ಅಡ್ಡಾದಿಡ್ಡಿ ಬೆಲೆಗಳಿಗೆ ಮಾರಿ ಕೊಳ್ಳುತ್ತಿದ್ದಾರೆ.
ಸರ್ಕಾರ ಈ ವರೆಗೂ ಸಹ ಖರೀದಿ ಕೇಂದ್ರಗಳನ್ನು ತೆರೆಯದೇ ನಿರ್ಲಕ್ಷ್ಯ ಮಾಡುತ್ತಿರುವುದು ರೈತ ವಿರೋಧಿ ನಿಲುವಾಗಿದೆ. ಇಂತಹ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಕಾಯ್ದೆಯನ್ನು ತಿದ್ದುಪಡಿ ಮಾಡಿ ಎ.ಪಿ.ಎಂ.ಸಿ.ಗಳನ್ನೇ ಬರ್ಖಾಸ್ತು ಮಾಡಲು ಹೊರಟಿದೆ. ಕಳೆದ ಬಾರಿ ಸಹ ತೊಗರಿ ಖರೀದಿಯಲ್ಲೂ ಸರ್ಕಾರ ರೈತರಿಗೆ ಮೋಸ ಮಾಡಿತು.
ಕೇಂದ್ರ ರಾಜ್ಯ ಎರಡೂ ಕಡೆ ಒಂದೇ ಪಕ್ಷದ ಆಡಳಿತವಿದೆ. ರಾಜ್ಯದ ಜನರು 25 ಜನ ಬಿ.ಜೆ.ಪಿ. ಪಕ್ಷದ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಒಬ್ಬರೂ ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ.
ಈ ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟು ಸರ್ಕಾರ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಹೆಸರು ಕಾಳನ್ನು ನಿಗಧಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಖರೀದಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.