ಬಾಗಲಕೋಟೆ ಜಿಲ್ಲೆಯಲ್ಲಿನ ಏಳು ವಿಧಾನಸಣೆ ಕ್ಷೇತ್ರಗಳಲ್ಲಿ ಹುನಗುಂದ, ಜಮಖಂಡಿ, ತೇರದಾಳ ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗಳು ಗೆಲವು ಕಂಡಿದ್ದರೆ, ಬೀಳಗಿಯಲ್ಲಿ ಲಿಂಗಾಯತ ರೆಡ್ಡಿ ಸಮುದಾಯದ ಅಭ್ಯರ್ಥಿ ಗೆದ್ದಿದ್ದಾರೆ. ಬಾಗಲಕೋಟೆ ಬಾದಾಮಿಯಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳು ಗೆಲವು ಕಂಡಿದ್ದರೆ, ಮುಧೋಳ ಮೀಸಲು ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿ ಗೆಲವಿನ ನಗೆ ಬೀರಿದ್ದಾರೆ.
ಬಾಗಲಕೋಟೆ(ಮೇ.14): ಕಳೆದ ಬಾರಿ ಬಾದಾಮಿಯ ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಅವರು ಶಾಸಕರಾಗಿದ್ದಾಗಲೇ ಅವರ ಬದಲು ತಾವೇ ಕಾಂಗ್ರೆಸ್ ಟಿಕೆಟ್ ಪಡೆದು ಗೆಲವು ಕಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಚಿಮ್ಮನಕಟ್ಟಿ ಮಗನಿಗೆ ಪಕ್ಷದ ಟಿಕೆಟ್ ನೀಡಿ ಗೆಲವು ಕಾಣಲು ಕಾರಣವಾಗುವ ಮೂಲಕ ಋುಣ ತೀರಿಸಿದ್ದಾರೆ. ಶಾಸಕರಾಗಿ ಆಯ್ಕೆಯಾದ ನಂತರ ನಾಲ್ಕು ಸಾವಿರ ಕೋಟಿ ರುಪಾಯಿಗಳ ವಿವಿಧ ಕಾಮಗಾರಿಗಳನ್ನು ಬಾದಾಮಿ ಕ್ಷೇತ್ರದಲ್ಲಿ ಕೈಗೊಂಡು ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಲು ನೆರವಾಗಿದ್ದ ಸಿದ್ದರಾಮಯ್ಯ ಇದೀಗ ತಾವೇ ಚಿಮ್ಮನಕಟ್ಟಿ ಅವರ ಮಗ ಭೀಮಸೇನಗೆ ಟಿಕೆಟ್ ನೀಡಿ ವಿರೋಧಿಸುತ್ತಿದ್ದ ಎಲ್ಲರನ್ನು ಸಮಾಧಾನ ಪಡಿಸಿ ಸಂಘಟಿತ ಪ್ರಯತ್ನ ನಡೆಸಲು ಸೂಚಿಸಿದ ಕಾರಣಕ್ಕೆ ಕಾಂಗ್ರೆಸ್ ಗೆಲವು ಕಾಣಲು ಸಾಧ್ಯವಾಗಿದೆ. ಆ ಮೂಲಕ ಚಿಮ್ಮನಕಟ್ಟಿ ಕುಟುಂಬದ ಋುಣವನ್ನು ಸಿದ್ದರಾಮಯ್ಯ ತೀರಿಸಿದಂತಾಗಿದೆ.
ಏಳರಲ್ಲಿ ಮೂವರು ಲಿಂಗಾಯತರ ಆಯ್ಕೆ
undefined
ಬಾಗಲಕೋಟೆ ಜಿಲ್ಲೆಯಲ್ಲಿನ ಏಳು ವಿಧಾನಸಣೆ ಕ್ಷೇತ್ರಗಳಲ್ಲಿ ಹುನಗುಂದ, ಜಮಖಂಡಿ, ತೇರದಾಳ ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗಳು ಗೆಲವು ಕಂಡಿದ್ದರೆ, ಬೀಳಗಿಯಲ್ಲಿ ಲಿಂಗಾಯತ ರೆಡ್ಡಿ ಸಮುದಾಯದ ಅಭ್ಯರ್ಥಿ ಗೆದ್ದಿದ್ದಾರೆ. ಬಾಗಲಕೋಟೆ ಬಾದಾಮಿಯಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳು ಗೆಲವು ಕಂಡಿದ್ದರೆ, ಮುಧೋಳ ಮೀಸಲು ಕ್ಷೇತ್ರದಲ್ಲಿ ದಲಿತ ಅಭ್ಯರ್ಥಿ ಗೆಲವಿನ ನಗೆ ಬೀರಿದ್ದಾರೆ. ಪಕ್ಷವಾರು ವಿಶ್ಲೇಷಿಸುವುದಾದರೆ ಕಾಂಗ್ರೆಸ್‌ನಿಂದ ಬಾದಾಮಿ ಹಾಗೂ ಬಾಗಲಕೋಟೆಯಿಂದ ಇಬ್ಬರು ಕುರುಬ ಸಮುದಾಯದವರು, ಹುನಗುಂದದಲ್ಲಿ ಲಿಂಗಾಯತ ಪಂಚಮಸಾಲಿ, ಬೀಳಗಿಯಲ್ಲಿ ಲಿಂಗಾಯತ ರೆಡ್ಡಿ ಅಭ್ಯರ್ಥಿಗಳು ಆಯ್ಕೆಯಾದರೆ, ಬಿಜೆಪಿಯಲ್ಲಿ ಇಬ್ಬರು ಲಿಂಗಾಯತರೆ ಆಯ್ಕೆಯಾಗಿದ್ದಾರೆ. ಅದರಲ್ಲಿ ಜಮಖಂಡಿಯಿಂದ ಜಗದೀಶ ಗುಡಗುಂಟಿ ಲಿಂಗಾಯತ ಸಮುದಾಯದ ಜಂಗಮ ಸಮುದಾಯಕ್ಕೆ ಸೇರಿದ್ದರೆ, ತೇರದಾಳದಿಂದ ಆಯ್ಕೆಯಾದ ಸಿದ್ದು ಸವದಿ ಲಿಂಗಾಯತ ಪಂಚಮಸಾಲಿ ಸಮುದಾಯದವರು.
ಮತ ಎಣಿಕೆ ಕೇಂದ್ರದತ್ತ ಪರ ಸಚಿವರು
ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಾದ ಬೀಳಗಿಯ ಶಾಸಕರು ಆಗಿದ್ದ ಸಚಿವ ಮುರಗೇಶ ನಿರಾಣಿ ಹಾಗೂ ಮುಧೋಳ ಮೀಸಲು ಕ್ಷೇತ್ರದ ಪ್ರಭಾವಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಮತ ಎಣಿಕೆಯ ಕೇಂದ್ರದತ್ತ ಬರಲೇ ಇಲ್ಲ. ಆರಂಭದಿಂದಲೂ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸುತ್ತಿರುವುದನ್ನು ಗಮನಿಸಿದ ಸಚಿವರು ಮತ ಎಣಿಕೆ ಕೇಂದ್ರಕ್ಕೆ ಬರಲಿಲ್ಲ.ಬಾಗಲಕೋಟೆ ಕ್ಷೇತ್ರದ ಶಾಸಕರಾದ ವೀರಣ್ಣ ಚರಂತಿಮಠ ಸಹ ಮತ ಎಣಿಕೆ ಕೇಂದ್ರಗಳತ್ತ ಬರಲಿಲ್ಲ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಕಂಡಿದೆ.
ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಗಲಾಟೆ
ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ, ಗಲಾಟೆ ನಡೆದ ಘಟನೆ ಬಾಗಲಕೋಟೆ ಸಮೀಪದ ಸಿಮಿಕೇರಿ ಬೈಪಾಸ್‌ನಲ್ಲಿ ನಡೆದಿದೆ. ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲು ಕುಂಬಾರ ಎಂಬುವವರ ಅಂಗಡಿಯಲ್ಲಿನ ವಸ್ತುಗಳೂ ಧ್ವಂಸವಾಗಿದ್ದು, ಇದು ಬಿಜೆಪಿಗರಿಂದಲೇ ಆಗಿದೆ ಎಂದು ಆರೋಪ ಕೇಳಿ ಬಂದಿದೆ. ರಸ್ತೆ ಬದಿಯಲ್ಲಿ ನಿಂತ ವಾಹನಗಳ ಮೇಲು ಸಹ ಕಲ್ಲು ಬಿಸಾಡಿದ ಕಿಡಗೇಡಿಗಳ ಕೃತ್ಯದಿಂದ ರಸ್ತೆ ಬದಿಯಲ್ಲಿನ ಬೈಕುಗಳು ಸಹ ಚಿಲ್ಲಾಪಿಲ್ಲಿಯಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.