ಸಿದ್ದು ಸಿಎಂ ಅಭ್ಯರ್ಥಿ ಎಂದು ಹೈಕಮಾಂಡ್ ಘೋಷಿಸಲಿ, ಸ್ವಯಂ ಘೋಷಿಸಿಕೊಂಡ್ರೆ ಅದಕ್ಕೆ ಮಾನ್ಯತೆ ಇಲ್ಲ: ಸಚಿವ ಸುಧಾಕರ್
ಚಿಕ್ಕಬಳ್ಳಾಪುರ(ನ.16): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಅವರ ಗೆಲುವು ಸುಲಭವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು, ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಆದರೆ ನನಗಿರುವ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಅವರಿಗೆ ಕೋಲಾರ ವಿಧಾನಸಭಾ ಕ್ಷೇತ್ರ ಸುಲಭ ತುತ್ತಲ್ಲ. ಅಲ್ಲಿ ಅವರ ಗೆಲುವು ಕಠಿಣವಾಗಿರಲಿದೆ ಎಂದರು.
ಸಿದ್ದರಾಮಯ್ಯ ಸ್ಪರ್ಧೆಯಿಂದ ಬಿಜೆಪಿಗೆ ರಾಜಕೀಯವಾಗಿ ಏನಾದರೂ ನಷ್ಟಆಗಬಹುದಾ ಎಂಬ ಪ್ರಶ್ನೆಗೆ, ಅವರಾಗಿಯೇ ಕಣಕ್ಕಿಳಿಯುತ್ತಿರುವುದರಿಂದ ಕೋಲಾರದಲ್ಲಿ ಏನಾಗುತ್ತದೆ ಎಂಬುದನ್ನು ನೀವೇ ಕಾದು ನೋಡಿ ಎಂದರು.
ಹೈಕಮಾಂಡ್ ಘೋಷಣೆ ಮಾಡಲಿ: ನಾನು ಮುಖ್ಯಮಂತ್ರಿಯಾಗಬೇಕಿದ್ದರೆ ಕಾಂಗ್ರೆಸ್‌ಗೆ ಮತ ಹಾಕಬೇಕೆಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ಸಿದ್ದರಾಮಯ್ಯ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಆ ಪಕ್ಷದ ಹೈಕಮಾಂಡ್ ಅಥವಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡದಿದ್ರೆ ಸಿದ್ದರಾಮಯ್ಯ ಮನೆ ಮುಂದೆ ಆತ್ಮಹತ್ಯೆ: ಸಿದ್ದು ಅಭಿಮಾನಿಗಳು
ಯಾರೂ ತನ್ನನ್ನು ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಲು ಆಗುವುದಿಲ್ಲ. ಇಂದು ನಮ್ಮ ಪಕ್ಷದಲ್ಲೂ ಹೈಕಮಾಂಡ್ ಘೋಷಿಸಿದವರಷ್ಟೇ ಮುಖ್ಯಮಂತ್ರಿ ಅಭ್ಯರ್ಥಿ ಆಗುತ್ತಾರೆ. ಪಕ್ಷದ ಹೈಕಮಾಂಡ್ ಘೋಷಣೆ ಮಾಡುವವರೆಗೂ ಸ್ವಯಂ ಘೋಷಣೆ ಮಾಡಿಕೊಂಡರೆ ಅದಕ್ಕೆ ಮಾನ್ಯತೆ ಇಲ್ಲ ಎಂದು ಟಾಂಗ್ ನೀಡಿದರು.