ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಉಳಿದಿರುವಂತೆ ಕಾಂಗ್ರೆಸ್ ನಲ್ಲಿನ ಉಭಯ ಬಣಗಳ ನಾಯಕರು ಭಿನ್ನಮತ ಮರೆತು ಒಗ್ಗಟ್ಟಿನ ಮಂತ್ರ ಜಪಿಸಲು ಪ್ರಾರಂಭಿಸಿದ್ದಾರೆ.
ಎಂ.ಅಫ್ರೋಜ್ ಖಾನ್
ರಾಮನಗರ(ನ.15): ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬಣಗಳ ಬಡಿದಾಟದಲ್ಲಿ ಮುಳುಗಿದ್ದ ಕೈ ಪಾಳಯದ ನಾಯಕರು ವೈಮನಸ್ಸು ಮರೆತು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ರಾಮನಗರ ಕ್ಷೇತ್ರದಿಂದ ಆಕಾಂಕ್ಷಿತ ಅಭ್ಯರ್ಥಿಯಾಗಿ ಇಕ್ಬಾಲ್ ಹುಸೇನ್ ಕೆಪಿಸಿಸಿಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೆ, ಇಕ್ಬಾಲ್ ಅವರೊಂದಿಗೆ ಪಕ್ಷದೊಳಗೆಯೇ ವಿರೋಧಿ ಬಣದವರಂತೆ ವರ್ತಿಸುತ್ತಿದ್ದ ನಾಯಕರು ಸಾಥ್ ನೀಡಿರುವುದು ಅಚ್ಚರಿ ಮೂಡಿಸಿದೆ. ಕಳೆದೊಂದು ವರ್ಷದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬೇಕು ಎಂಬುದರ ಕುರಿತು ಪಕ್ಷದ ವೇದಿಕೆಗಳಲ್ಲಿ ಚರ್ಚೆಗಳು ನಡೆಯುತ್ತಿತ್ತು.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ಅಭ್ಯರ್ಥಿ ವಿಚಾರವಾಗಿ ಟಾಕ್ ವಾರ್ ನಡೆದಿತ್ತು. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತೆಂದರೆ ಕಾಂಗ್ರೆಸ್ ನಲ್ಲಿನ ಒಳಬೇಗುದಿ ಬೀದಿಗೆ ಬಂದಿತ್ತು. ಪಕ್ಷದೊಳಗೆ ಎರಡು ಬಣಗಳು ಸೃಷ್ಟಿಯಾಗಿ ವರಿಷ್ಠರ ಮಾತನ್ನು ಧಿಕ್ಕರಿಸಿ ನಡೆಯುವ ಹಂತಕ್ಕೆ ತಲುಪಿದ್ದವು. ಬಣಗಳ ನಡುವಿನ ತಿಕ್ಕಾಟ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಜೆಡಿಎಸ್ - ಬಿಜೆಪಿ ನಡುವೆ ಮತ್ತೊಂದು ಕ್ರೆಡಿಟ್ ಕದನ!
ಸಾಮೂಹಿಕ ನಾಯಕತ್ವದ ಮಂತ್ರ:
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಖುದ್ಧಾಗಿ ಉಭಯ ಬಣಗಳ ನಾಯಕರೊಂದಿಗೆ ಚರ್ಚೆ ನಡೆಸಿದ್ದರು. ಅಭ್ಯರ್ಥಿ ಯಾರೆಂಬುದರ ಗುಟ್ಟು ಬಿಟ್ಟು ಕೊಡದೆ ‘ಸಾಮೂಹಿಕ ನಾಯಕತ್ವ‘ದ ಮಂತ್ರ ಜಪಿಸುವಂತೆ ಸಲಹೆ ನೀಡಿದ್ದರು. ಆ ಮೂಲಕ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸೃಷ್ಟಿಯಾಗಿದ್ದ ಬಣ ರಾಜಕೀಯ ನಿಯಂತ್ರಿಸಿ ಒಗ್ಗಟ್ಟು ಪ್ರದರ್ಶನಕ್ಕೆ ಸೂಚನೆ ನೀಡಿದ್ದರು. ಆನಂತರವೂ ರಾಮನಗರ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಬಣಗಳ ಮೇಲಾಟಕ್ಕೆ ಕಾರಣವಾಯಿತು. ಇದೆಲ್ಲವನ್ನು ಗಮನಿಸಿದ ವರಿಷ್ಠರು ಬಣಗಳ ಬಡಿದಾಟಕ್ಕೆ ಕಡಿವಾಣ ಹಾಕುವುದು ಕಷ್ಟಸಾಧ್ಯವೆಂದು ಕೈಚೆಲ್ಲಿದ್ದರು.
ಆದರೀಗ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಉಳಿದಿರುವಂತೆ ಕಾಂಗ್ರೆಸ್ ನಲ್ಲಿನ ಉಭಯ ಬಣಗಳ ನಾಯಕರು ಭಿನ್ನಮತ ಮರೆತು ಒಗ್ಗಟ್ಟಿನ ಮಂತ್ರ ಜಪಿಸಲು ಪ್ರಾರಂಭಿಸಿದ್ದಾರೆ. ನಗರಸಭೆ ಅಧ್ಯಕ್ಷರಾಗಿ ಪವಿತ್ರರವರ ಆಯ್ಕೆಗೆ ಅವಕಾಶ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಎರಡು ದಿನಗಳ ಹಿಂದಷ್ಟೆಸಂಭವನೀಯ ಅಭ್ಯರ್ಥಿ ಇಕ್ಬಾಲ್ ಹುಸೇನ್ ಹಾಗೂ ನಗರಸಭೆ ಸದಸ್ಯ ಕೆ.ಶೇಷಾದ್ರಿ ಕಾರ್ಯಕರ್ತರ ಜತೆಗೂಡಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ನಿಮ್ಮ ಕೈ ಬಲ ಪಡಿಸುವುದಾಗಿ ನಾಯಕರು ಪ್ರಮಾಣ ಮಾಡಿ ಬಂದಿದ್ದಾರೆ.
ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಕೆ:
ಈಗ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿರುವ ಇಕ್ಬಾಲ್ ಹುಸೇನ್ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ, ನಗರಸಭಾ ಸದಸ್ಯ ಕೆ.ಶೇಷಾದ್ರಿ ಸೇರಿದಂತೆ ಅನೇಕ ನಾಯಕರು ಕಾಣಿಸಿಕೊಳ್ಳುವ ಮೂಲಕ ಭಿನ್ನಮತಕ್ಕೆ ತೆರೆ ಎಳೆದಿದ್ದಾರೆ.
ಸಣ್ಣಪುಟ್ಟ ಅಸಮಾಧಾನಗಳನ್ನು ಬಗೆಹರಿಸಿಕೊಂಡು ಹಿರಿಯ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ಧರಾಗುತ್ತಿದ್ದಾರೆ. ಅಲ್ಲದೆ, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಮೂಡದಂತೆ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಈ ಒಗ್ಗಟ್ಟು ಪ್ರದರ್ಶನ ಭವಿಷ್ಯದಲ್ಲಿ ಕಾಂಗ್ರೆಸ್ ನಲ್ಲಿ ಆಂತರಿಕವಾಗಿ ಏನೆಲ್ಲಾ ಪರಿಣಾಮಗಳನ್ನು ಬೀರಲಿದೆ ಎಂಬುದು ಕೂಡಾ ಮಹತ್ವದ್ದಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ದೃತಿಗೆಡದ ಇಕ್ಬಾಲ್ ಹುಸೇನ್ ರವರು ‘ರಾಮನಗರದ ಜನ ಸೇವಕ‘ ಎಂಬ ಹೆಸರಿನಲ್ಲಿ ಸಾಕಷ್ಟುಬಂಡವಾಳ ಹೂಡಿ ಜನಪರ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅಲ್ಲದೆ, ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ಮೂಲಕ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗುವ ಜತೆಗೆ ಮುಂಬರುವ ವಿಧಾನಸಭೆ ಚುನಾವಣೆಗೂ ಸಾಕಷ್ಟುತಯಾರಿಗಳನ್ನು ಮಾಡಿಕೊಂಡಿದ್ದಾರೆ.
ಆಕಾಂಕ್ಷಿತ ಅಭ್ಯರ್ಥಿಯಾಗಿರುವ ಇಕ್ಬಾಲ್ ಅವರೊಂದಿಗೆ ಹಿರಿಯ ನಾಯಕರು ಕೈ ಎತ್ತಿ ಒಗ್ಗಟ್ಟು ಪ್ರದರ್ಶನ ಮಾಡಿ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ. ಆದರೆ, ಈ ಒಗ್ಗಟ್ಟಿನ ಸಂದೇಶ ಕೇವಲ ಅರ್ಜಿ ಸಲ್ಲಿಕೆಗೆ ಮಾತ್ರ ಸೀಮಿತವಾಗುತ್ತಾ ಅಥವಾ ವಾಸ್ತವದಲ್ಲಿ ಜಾರಿಗೊಳ್ಳುತ್ತಾ ಎಂಬುದು ಕೂಡಾ ಮುಖ್ಯವಾಗಿದೆ. ಇದಕ್ಕೆ ಕಾಲವೇ ಉತ್ತರಿಸಬೇಕು.
Channapatna: ಮುನಿದ ಮುಖಂಡರ ಮನೆಯ ಕದ ತಟ್ಟಿದ ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ನಲ್ಲಿ ಯಾವುದೇ ಬಣಗಳಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಾಯಕರ ನಡುವಿನ ಸಣ್ಣಪುಟ್ಟವ್ಯತ್ಯಾಸಗಳು ಬಗೆಹರಿದಿವೆ. ನಮ್ಮ ಜಿಲ್ಲೆಯ ಮಗ ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಬೇಕಾಗಿದೆ. ಹಾಗಾಗಿ 2023ರ ವಿಧಾನಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ರವರ ಗೆಲುವಿಗೆ ಶ್ರಮಿಸುತ್ತೇವೆ ಅಂತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ ಹೇಳಿದ್ದಾರೆ.
ನಮ್ಮ ಮಣ್ಣಿನ ಮಗನಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಇದಕ್ಕಾಗಿ ಪಕ್ಷದ ಹಿರಿಯ - ಕಿರಿಯ ನಾಯಕರು ಹಾಗೂ ಕಾರ್ಯಕರ್ತರು ಶ್ರಮಿಸಲು ಸನ್ನದ್ಧರಾಗಿದ್ದಾರೆ. ನಮ್ಮಲ್ಲಿ ಭಿನ್ನಮತವಾಗಲಿ, ಬಣಗಳಾಗಲಿ ಇಲ್ಲ. ನಮ್ಮದು ಕಾಂಗ್ರೆಸ್ ಬಣ. ರಾಮನಗರ ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸುವ ವಿಶ್ವಾಸವಿದೆ ಅಂತ ಮಾಜಿ ಜಿಪಂ ಅಧ್ಯಕ್ಷ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.