ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ತಮಗೆ ಸಿಎಂ ಸೀಟು ಬಿಟ್ಟುಕೊಡಿ ಎಂದು ಹೇಳಿ ಸವಾಲು ಹಾಕಿದರು
ವಿಧಾನಸಭೆ (ಮಾ.16): ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್, ಕೃಷಿ ಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ, ಪಶು ಭಾಗ್ಯ ಯೋಜನೆಗಳಿಗೆ ಅನುದಾನ ಸ್ಥಗಿತಗೊಳಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಡವರ ವಿರೋಧಿ ಬಜೆಟ್ ಮಂಡಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಜೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಸೋಮವಾರ ಸುದೀರ್ಘವಾಗಿ ಮಾತನಾಡಿದ ಅವರು, ಬಡವರು ಮೂರು ಹೊತ್ತು ಹೊಟ್ಟೆತುಂಬಾ ಊಟ ಮಾಡುವಂತಾಗಲಿ ಎಂದು ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯಾದ್ಯಂತ ತೆರೆದಿದ್ದೆವು. ಆದರೆ, ಬಡವರ ವಿರೋಧಿ ಯಡಿಯೂರಪ್ಪ ಅವರು ಕುಂಟು ನೆಪ ಇಟ್ಟುಕೊಂಡು ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದ್ದಾರೆ.
ಇಂದಿರಾ ಕ್ಯಾಂಟೀನ್‌ಗೆ ವರ್ಷಕ್ಕೆ 200 ಕೋಟಿ ರು. ವೆಚ್ಚವಾಗಬಹುದು. 2.46 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡಿಸುವ ಸರ್ಕಾರಕ್ಕೆ ಬಡವರಿಗಾಗಿ 200 ಕೋಟಿ ರು. ಖರ್ಚು ಮಾಡಲು ಆಗುವುದಿಲ್ಲವೇ? ಬಡವರ ಊಟ ಕಿತ್ತುಕೊಂಡರೆ ಬಡವರ ಶಾಪ ತಟ್ಟುತ್ತದೆ ಎಂದು ತರಾಟೆ ತೆಗೆದುಕೊಂಡರು.
ಮುಂದಿನ ಚುನಾವಣೆ ಸ್ಪರ್ಧೆ ಕ್ಷೇತ್ರದ ಬಗ್ಗೆ ಈಗಲೇ ಸಿದ್ದರಾಮಯ್ಯ ಮಾಹಿತಿ ..
ಸಿಎಂ ಸೀಟು ಬಿಟ್ಟು ಕೊಡಿ
ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಟೀಕಿಸುವ ವೇಳೆ ಮಧ್ಯಪ್ರವೇಶಿಸಿದ ಬಿ.ಎಸ್.ಯಡಿಯೂರಪ್ಪ, ಕೊರೋನಾ ವೇಳೆಯಲ್ಲಿ ನನ್ನ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ನಿಮ್ಮ ಸ್ಥಾನದಲ್ಲಿದ್ದರೆ ಮಾಡಿ ತೋರಿಸುತ್ತಿದ್ದೆ. ನನಗೆ ಆ ಸೀಟು ಬಿಟ್ಟುಕೊಡಿ, ಅಲ್ಲಿದ್ದು ಏನು ಮಾಡಬಹುದಾಗಿತ್ತು ಎಂಬುದನ್ನು ನಾನು ಹೇಳುತ್ತೇನೆ. ಆಡಳಿತ ಪಕ್ಷದ ಸ್ಥಾನದಲ್ಲಿ ನಾವು ಬಂದು ಕೂರುವ ದಿನಗಳು ದೂರ ಇಲ್ಲ ಎಂದು ಹೇಳಿದರು.