ಮುಂದಿನ ಚುನಾವಣೆ ಸ್ಪರ್ಧೆ ಕ್ಷೇತ್ರದ ಬಗ್ಗೆ ಈಗಲೇ ಸಿದ್ದರಾಮಯ್ಯ ಮಾಹಿತಿ

By Kannadaprabha NewsFirst Published Mar 16, 2021, 9:08 AM IST
Highlights

ಮುಂದಿನ ಚುನಾವಣೆಗೆ ಯಾವ ಕ್ಷೇತ್ರದಿಂದ ತಾವು ಸ್ಪರ್ಧೆ ಮಾಡುತ್ತೇವೆ ಎಂದು ಈಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. 

ವಿಧಾನಸಭೆ (ಮಾ.16):  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಅದೂ ಕೂಡ ಈಗ ನಾನು ಗೆದ್ದು ಬಂದಿರುವ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬಜೆಟ್‌ ಕುರಿತ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಂದಿನ ಬಾರಿ ನೀವು ಚುನಾವಣೆಗೆ ನಿಲ್ಲುತ್ತೀರೋ ಇಲ್ಲವೋ ಎಂಬ ಬಗ್ಗೆ ಹಲವು ಅನುಮಾನಗಳಿವೆ. ಅಂತಿಮವಾಗಿ ಸ್ಪರ್ಧಿಸುತ್ತಿದ್ದೀರೋ ಇಲ್ಲವೋ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸದಸ್ಯ ಕೆ.ಆರ್‌. ರಮೇಶ್‌ಕುಮಾರ್‌, ಸ್ಪರ್ಧಿಸುವುದಿಲ್ಲ ಎಂದು ಹೇಳುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ. ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಲೇಬೇಕು. ಮುಂದಿನ ಬಾರಿ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಹೇಳಿದರು.

ಈ ವೇಳೆ ಸಿದ್ದರಾಮಯ್ಯ, ನಾನು ಎಲ್ಲಿಗೂ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. 2018ರ ವಿಧಾನಸಭೆ ಚುನಾವಣೆ ವೇಳೆ ಸ್ಪರ್ಧಿಸುವ ಬೇಡ ಎಂದುಕೊಂಡಿದ್ದೆ. ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಎಲ್ಲೂ ಹೇಳಿಲ್ಲ ಎಂದರು.

ಈ ವೇಳೆ ಸಚಿವ ಆರ್‌.ಅಶೋಕ್‌, ಹಾಗೆಯೇ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬುದನ್ನೂ ಹೇಳಿ ಸರ್‌. ಕನಿಷ್ಠ ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕದಲ್ಲಿ ಯಾವುದು ಎಂದಾದರೂ ಹೇಳಿ ಎಂದು ಕೆಣಕಿದರು.

'ಮಿತ್ರ ಮಂಡಳಿಯನ್ನು ಬಿಜೆಪಿಗೆ ಕಳಿಸಿದ್ದೇ ಸಿದ್ದರಾಮಯ್ಯ'

ಸಿದ್ದರಾಮಯ್ಯ, ಪದ್ಮನಾಭನಗರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. 224 ಕ್ಷೇತ್ರಗಳಲ್ಲಿ ಅದೂ ಒಂದಲ್ಲವೇ ಎಂದರು. ಆರ್‌.ಅಶೋಕ್‌, ಅದೊಂದು ಬಿಟ್ಟು ಬೇರೆ ಹೆಸರು ಹೇಳಿ ಎಂದು ಮನವಿ ಮಾಡಿದರು. ಇದಕ್ಕೆ ‘ನಾನು ಪ್ರಸ್ತುತ ಬಾದಾಮಿ ಕ್ಷೇತ್ರದ ಶಾಸಕ. ಹೀಗಾಗಿ ಮುಂದೆಯೂ ಬಾದಾಮಿ ಕ್ಷೇತ್ರದಲ್ಲೇ ನಿಲ್ಲುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಡಿಕೇಶಿ ಕಾಲೆಳೆದ ಬೊಮ್ಮಾಯಿ :  ಸಿದ್ದರಾಮಯ್ಯ ಸ್ಪರ್ಧೆ ಖಚಿತಪಡಿಸಿದ ಬೆನ್ನಲ್ಲೇ ಎದ್ದುನಿಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನೀವು ಕೊಡಬೇಕಾದವರೆಗೆ ಸೂಕ್ತ ಸಂದೇಶ ನೀಡಿದ್ದೀರಿ ಎಂದು ಕಾಲೆಳೆದರು. ಅಲ್ಲಿಯವರೆಗೆ ಸದನದಲ್ಲಿ ಹಾಜರಿರದ ಕಾಂಗ್ರೆಸ್‌ ಸದಸ್ಯ ಹಾಗೂ ಕೆಪಿಸಿಸಿ ಡಿ.ಕೆ.ಶಿವಕುಮಾರ್‌ ಕಲಾಪಕ್ಕೆ ಹಾಜರಾದರು.

ಈ ವೇಳೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನೋಡಿ ಸಿದ್ದರಾಮಯ್ಯ ಅವರೇ, ನೀವು ಸ್ಪರ್ಧೆ ಮಾಡುತ್ತೀನಿ ಎಂದ ತಕ್ಷಣ ಡಿ.ಕೆ.ಶಿವಕುಮಾರ್‌ ಅವರು ಒಳಗೆ ಬಂದು ಕುಳಿತುಕೊಂಡರು’ ಎಂದು ಡಿ.ಕೆ.ಶಿವಕುಮಾರ್‌ ಅವರ ಲೇವಡಿ ಮಾಡಿದರು. ಬಸವರಾಜ ಬೊಮ್ಮಾಯಿ, ಇದೇ ಅರ್ಥದಲ್ಲೇ ನಾನು ಹೇಳಿದ್ದು. ನೀವು ಕೊಡಬೇಕಾದವರಿಗೆ ಸೂಕ್ತ ಸಂದೇಶ ನೀಡಿದ್ದೀರಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಕಾಲೆಳೆದರು.

click me!