ಯತ್ನಾಳ ವಿರುದ್ಧ ಕ್ರಮ: ಸಿಡಿದ ಸಚಿವರಿಂದ ಈ ಸುಳಿವು

By Kannadaprabha NewsFirst Published Oct 21, 2020, 7:58 AM IST
Highlights

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆಗೆ ಸಚಿವರು ಹಾಗೂ ಸ್ವಪಕ್ಷೀಯ ಮುಖಂಡರು  ತಿರುಗೇಟು ನೀಡಿದ್ದಾರೆ. ಅಲ್ಲದೆ, ಯತ್ನಾಳ ವಿರುದ್ಧ ಶಿಸ್ತುಕ್ರಮದ ಸುಳಿವು ನೀಡಿದ್ದಾರೆ.

ಬೆಂಗಳೂರು (ಅ.21):  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವ ಹೆಚ್ಚು ದಿನ ಮುಂದುವರೆಯುವುದಿಲ್ಲ ಎಂಬ ಆಡಳಿತಾರೂಢ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆಗೆ ಸಚಿವರು ಹಾಗೂ ಸ್ವಪಕ್ಷೀಯ ಮುಖಂಡರು  ತಿರುಗೇಟು ನೀಡಿದ್ದಾರೆ. ಅಲ್ಲದೆ, ಯತ್ನಾಳ ವಿರುದ್ಧ ಶಿಸ್ತುಕ್ರಮದ ಸುಳಿವು ನೀಡಿದ್ದಾರೆ.

ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್‌.ಅಶೋಕ್‌, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಬಲವಾಗಿ ಹೇಳಿದ್ದಾರೆ.

ಯತ್ನಾಳ್‌ ವಿರುದ್ಧ ಕ್ರಮ- ಅಶ್ವತ್ಥ ಸುಳಿವು:

ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ, ‘ಯಡಿಯೂರಪ್ಪ ಅವರೇ ನಮ್ಮ ನಾಯಕ. ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಯತ್ನಾಳ್‌ ಅವರು ಯಾಕೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಇದನ್ನು ಅವರೇ ಹೇಳಬೇಕು. ಯತ್ನಾಳ್‌ ಇಂತಹ ಹೇಳಿಕೆ ಕೊಡುತ್ತಲೇ ಇರುತ್ತಾರೆ. ಇದಕ್ಕೆ ಉತ್ತರ ಕೊಡುತ್ತಿರಲು ಸಾಧ್ಯವಿಲ್ಲ’ ಎಂದರು.

'ಉತ್ತರ ಕರ್ನಾಟಕದವರಿಂದಲೇ ಬಿಜೆಪಿಯವ್ರು ಸಿಎಂ ಆಗ್ತಾರೆ, ಬೇರೆ ಕಡೆ ಓಟು ಬೀಳಂಗಿಲ್ಲ' ...

ಬದಲಾವಣೆ ಇಲ್ಲ- ರವಿ:

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ಅವರು, ‘ಹಲವು ಕಾರಣಕ್ಕೆ ಯತ್ನಾಳ ಹೇಳಿಕೆಗಳನ್ನು ಕೊಡುತ್ತಾರೆ. ಅವರ ಹೇಳಿಕೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಯಡಿಯೂರಪ್ಪ ನಮ್ಮ ಸರ್ವಾನುಮತದ ಮುಖ್ಯಮಂತ್ರಿಗಳು. ಹಾಗಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸಲ್ಲ. ನಾಯಕತ್ವ ಬದಲಾವಣೆ ಎಂಬುದು ಈಗ ಅಪ್ರಸ್ತುತ ವಿಷಯ ಎಂದರು.

‘ಯತ್ನಾಳ ಹೇಳಿಕೆಗಳಿಗೆ ಸಂಬಂಧಿಸಿ ಯಾವ ಸಂದರ್ಭದಲ್ಲಿ ಏನೇನು ಶಿಸ್ತು ಕ್ರಮ ಕೈಗೊಳ್ಳಬೇಕೋ ಅದನ್ನು ಪಕ್ಷ ತೆಗೆದುಕೊಳ್ಳುತ್ತದೆ. ನನ್ನ ಜವಾಬ್ದಾರಿಯ ಅರಿವು ನನಗಿದೆ. ಸೂಕ್ತ ಸಂದರ್ಭ ಬಂದರೆ, ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪಕ್ಷ ಚಿಂತನೆ ನಡೆಸಲಿದೆ’ ಎಂದೂ ತಿಳಿಸಿದರು.

ಬೊಮ್ಮಾಯಿ-ಸೋಮಣ್ಣ ಬ್ಯಾಟಿಂಗ್‌:  ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿದ್ದು, ಅವರ ನಾಯಕತ್ವದಲ್ಲೇ 2018ರ ವಿಧಾನಸಭಾ ಚುನಾವಣೆ ಎದುರಿಸಿ ಸರ್ಕಾರವನ್ನೂ ರಚಿಸಲಾಗಿದೆ. ಅವರು ಸರ್ಕಾರಕ ಉಳಿದ ಅವಧಿಯನ್ನು ಪೂರ್ಣಗೊಳಿಸಿ ಮುಂದಿನ ಚುನಾವಣೆಯನ್ನು ಕೂಡ ಅವರ ನೇತೃತ್ವದಲ್ಲಿಯೇ ಎದುರಿಸಲಾಗುವುದು. ಕೆಲವರು ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳಿಗೆ ಯಾವುದೇ ಅರ್ಥವಿಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

‘ಯಡಿಯೂರಪ್ಪ ಅವರ ಬಗ್ಗೆ ಶಾಸಕ ಯತ್ನಾಳ್‌ ಅವರು ಮುಜುಗರ ತರುವಂಥ ಹೇಳಿಕೆ ನೀಡಬಾರದು. ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು. ಇನ್ನು ಮುಂದೆಯಾದರೂ ಯತ್ನಾಳ್‌ ಈ ರೀತಿ ಹೇಳಿಕೆ ನೀಡುವುದಿಲ್ಲ ಎಂಬುದಾಗಿ ನಂಬಿದ್ದೇನೆ’ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.

‘ಸದ್ಯ ಇನ್ನೂ ಮೂರು ವರ್ಷ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಖಾಲಿ ಇಲ್ಲ ಎಂದ ಮೇಲೆ ಟವೆಲ್‌ ಎಲ್ಲಿ ಹಾಕುತ್ತಾರೆ? ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ ಗೆದ್ದಿದ್ದೇವೆ. ಅವರ ನೇತೃತ್ವದಲ್ಲೇ ಸರ್ಕಾರ ಮುಂದಿನ ಮೂರು ವರ್ಷ ಮುಂದುವರೆಯಲಿದೆ’ ಎಂದು ಸಚಿವ ಅಶೋಕ್‌ ಹೇಳಿದ್ದಾರೆ.

click me!