'ನಾಯಿಮರಿ' ಹೇಳಿಕೆಗೆ ಸಿದ್ದರಾಮಯ್ಯ ಸಾಫ್ಟ್‌ ಟಚ್: ಸಿಎಂಗೆ ಧೈರ್ಯ ತುಂಬಲು ಪದ ಬಳಕೆ

Published : Jan 05, 2023, 04:46 PM IST
'ನಾಯಿಮರಿ' ಹೇಳಿಕೆಗೆ ಸಿದ್ದರಾಮಯ್ಯ ಸಾಫ್ಟ್‌ ಟಚ್: ಸಿಎಂಗೆ ಧೈರ್ಯ ತುಂಬಲು  ಪದ ಬಳಕೆ

ಸಾರಾಂಶ

ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಯಿಮರಿ ಅಂದಿಲ್ಲ. ರಾಜ್ಯದಕ್ಕೆ ಅನುದಾನ ತರಲು ಮಾತನಾಡದಿರುವುದಕ್ಕೆ ನಾಯಿಮರಿಕೆ ಹೋಲಿಕೆ ಮಾಡಿದ್ದೇನೆ. ಯಡಿಯೂರಪ್ಪಗೆ ರಾಜಾಹುಲಿ, ನನಗೆ ಟಗರು ಅಂತಾರೆ ನಾವು ಕೋಪ ಮಾಡಿಕೊಂಡಿದ್ದೇವೆಯೇ?

ಬೆಂಗಳೂರು (ಜ.05): ನಾನು ಸಿಎಂ ಅವರನ್ನು ನಾಯಿ ಮರಿ ಅಂದಿಲ್ಲ. ಯಾವತ್ತೂ ಧೈರ್ಯ ಇರಬೇಕು. ರಾಜ್ಯದ ಹಿತ ಮುಖ್ಯ. ಕೇಂದ್ರದಿಂದ ಬರುವ ಅನುದಾನ ಕಡಿಮೆಯಾಗಿದ್ದು, ಧೈರ್ಯವಾಗಿ ಮಾತನಾಡಿ ದುಡ್ಡು ತರಬೇಕು. ಆದ್ದರಿಂದ ಸಿಎಂ ಧೈರ್ಯವಾಗಿರಬೇಕು. ನಾಯಿಮರಿಯಂತೆ ಇರಬಾರದೆಂದು ಹೇಳಿದ್ದೆ. ಇದರಲ್ಲಿ ತಪ್ಪೇನಿದೆ? ಇದು ಅಸಾಂವಿಧಾನಿಕವೇ..? ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಾಯಿಮರಿ ಹೇಳಿಕೆಗೆ ಉಂಟಾಗುತ್ತಿರುವ ವಿರೋಧದಿಂದ ತಪ್ಪಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದ್ದಾರೆ.

ಇನ್ನು ರಾಜ್ಯದಲ್ಲಿ ನನಗೆ ಹುಲಿಯಾ' ಅನ್ನುತ್ತಾರೆ.  ಯಡಿಯೂರಪ್ಪನವರನ್ನು ಅವರ ಪಕ್ಷದವರೇ 'ರಾಜಾಹುಲಿ' ಎಂದು ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ 'ಹುಲಿನಾ? ನಾಯಿ ಬಹಳ ನಂಬಿಕಸ್ಥ ಪ್ರಾಣಿ. ಧೈರ್ಯ ಅನ್ನುವ ಅರ್ಥದಲ್ಲಿ ಆ ಪದ ಬಳಕೆ ಮಾಡಿದೆ. ನಳಿನ್ ಕುಮಾರ್ ಪೆದ್ದು ಪೆದ್ದಾಗಿ ಮಾತಾಡ್ತಾರೆ, ಅಂಥವರಿಗೆಲ್ಲ ನಾನು ಉತ್ತರ ಕೊಡಲ್ಲ ಎಂದು ಹೇಳಿದರು. ಆದರೆ, ಎರಡು ದಿನಗಳಿಂದ ನಾಯಿಮರಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಹೇಳಿಕೆ ಮತ್ತಷ್ಟು ತೀವ್ರ ಸ್ವರೂಪ ಪಡೆಯದಂತೆ ತಣ್ಣಗಾಗಿಸುವುದಕ್ಕೆ ಮುಂದಾಗಿದ್ದಾರೆ.

ಅನಗತ್ಯವಾಗಿ ವಿವಾದ ಮಾಡಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೆದುರು ಮಾತನಾಡುವ ಧೈರ್ಯ ಇಲ್ಲ. ಬೇರೆಯವರ ಧಮ್, ತಾಕತ್ ಪ್ರಶ್ನಿಸುವ ಬೊಮ್ಮಾಯಿಯೇ ಸ್ವತಃ ಮೋದಿಯವರನ್ನು ಕಂಡ್ರೆ ಹೆದರುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದೇನೆ. ಇದನ್ನು ಅನವಶ್ಯಕವಾಗಿ ವಿವಾದ ಮಾಡಲಾಗಿದೆ. ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿಮರಿ ಎಂದಿದ್ದೇ ಹೊರತು ರಾಜ್ಯದ ಮುಖ್ಯಮಂತ್ರಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತಾ ಇರಲಿಲ್ಲ ಎಂದು ತಿಳಿಸಿದ್ದಾರೆ.

ನಾನು ನಿಯತ್ತಿನ ನಾಯಿ ಎಂದ ಬೊಮ್ಮಾಯಿ: ಸಿದ್ದುಗೆ ಸಿಎಂ ಟಾಂಗ್‌..!

ನನಗೆ ಟಗರು ಅಂತಾರೆ? ನಾನು ಯಾರಿಗೆ ಗುಮ್ಮಿದ್ದೇನೆ?: ಪ್ರಾಣಿ-ಪಕ್ಷಿ-ಹೂ-ಹಣ್ಣುಗಳನ್ನು ಅವುಗಳ ಸ್ವಭಾವಗಳ ಸಾಮ್ಯತೆಗೆ ಅನುಗುಣವಾಗಿ ಮನುಷ್ಯರಿಗೆ ಹೋಲಿಸುವುದು ಜನಪದ ಸಂಸ್ಕೃತಿ. ಯಾವ ಪ್ರಾಣಿ-ಪಕ್ಷಿಯೂ ಕೀಳೂ ಅಲ್ಲ, ಮೇಲೂ ಅಲ್ಲ. ಹುಲಿ ಮನುಷ್ಯರನ್ನು ಕೊಂದು ತಿನ್ನುವ ಪ್ರಾಣಿ. ಬಿಜೆಪಿ ನಾಯಕರೇ ಯಡಿಯೂರಪ್ಪ ಅವರನ್ನು "ರಾಜಾ ಹುಲಿ" ಎಂದು ಬಣ್ಣಿಸುತ್ತಾರೆ. ಇದನ್ನೂ ಅವಮಾನ ಎಂದು ತಿಳಿದುಕೊಳ್ಳಬಹುದಲ್ಲಾ? ಟಿವಿ ಚಾನೆಲ್‌ನವರು ಪ್ರತಿದಿನ ನನ್ನನ್ನು 'ಟಗರು' 'ಟಗರು' ಎಂದು ಹಾಡು ಕಟ್ಟಿ ತೋರಿಸುತ್ತಾರೆ. ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ?  ನಾನೂ ಅವಮಾನ ಮಾಡಿದ್ದಾರೆ ಎಂದು ಕೋಪ ಮಾಡಿಕೊಳ್ಳಬಹುದಲ್ಲಾ? ಎಂದು ಪ್ರಶ್ನಿಸಿದ್ದಾರೆ.

ನಾಯಿ‌ಮರಿ ಪುಕ್ಕಲು ಸ್ವಭಾವಕ್ಕೆ ಕುಖ್ಯಾತಿ‌: ಸಾವಿರಾರು ಮಂದಿ ಹತ್ಯೆಗೀಡಾದ ಗುಜರಾತ್ ಗಲಭೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ "ಕಾರಿಗೆ ಅಡ್ಡ ಬಂದು ನಾಯಿಮರಿ ಸತ್ತರೆ ಏನು ಮಾಡೋಣ?" ಎಂದು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಇದೂ ವಿವಾದವಾಗಿತ್ತಲ್ಲವೇ? ನಾಯಿ ಸ್ವಾಮಿ ನಿಷ್ಠೆಗೆ ಹೆಸರಾದರೆ, ನಾಯಿ‌ಮರಿ ಪುಕ್ಕಲು ಸ್ವಭಾವಕ್ಕೆ ಕುಖ್ಯಾತಿ‌ ಪಡೆದಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನರೇಂದ್ರ ಮೋದಿ ಅವರ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ? ನಾಯಿ ಮರಿ, ಬೆಕ್ಕಿನ ಮರಿಗಳಿಗೆ ಹೋಲಿಸಬೇಕಲ್ಲಾ? ಎಂದು ಸ್ಪಷ್ಟನೆ ನೀಡಿದ್ದಾರೆ.  ಬಸವರಾಜ ಬೊಮ್ಮಾಯಿ ಅವರು ನಮ್ಮ ಒಡನಾಟದವರು, ಅವರೇನು ಬೇಸರ ಮಾಡಿಕೊಂಡಿರಲಾರರು. ಸುತ್ತಲಿನ ವಂದಿ-ಮಾಗದರು ಅವರನ್ನು ಓಲೈಸಲಿಕ್ಕಾಗಿ ಖಂಡಿಸಿ, ಮಂಡಿಸಿ ವಿವಾದ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಬೊಮ್ಮಾಯಿ ಅವರು ಜಾಗರೂಕರಾಗಿರುವುದು ಒಳ್ಳೆಯದು ಎಂದು ವಿವಾದ ತಣಿಸುವ ಸಾಂತ್ವನದ ಮಾತುಗಳನ್ನಾಡಿದ್ದಾರೆ.

ನಾಯಿಮರಿಗೆ ಸಿಎಂ ಬೊಮ್ಮಾಯಿ ಹೋಲಿಕೆ: ಸಿದ್ದರಾಮಯ್ಯ ಮಾತಿಗೆ ಸಾಥ್ ನೀಡಿದ ಕುಮಾರಸ್ವಾಮಿ

5,495 ಕೋಟಿ ವಿಶೇಷ ಅನುದಾನ ಬಂದಿಲ್ಲ: ನಮಗೆ ನಾಡಿನ ಹಿತ ಮುಖ್ಯ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನವನ್ನು ನೀಡಲು ನಿರ್ಮಲಾ ಸೀತಾರಾಮನ್ ಅವರು ನಿರಾಕರಿಸಿದರು.  ಅವರೊಂದಿಗೆ ಮಾತನಾಡಿ ಈ ಅನುದಾನ ತರಲು ಬೊಮ್ಮಾಯಿ ಅವರಿಂದ ಸಾಧ್ಯವಾಗಿಲ್ಲ. ಇದರಿಂದ ನಷ್ಟವಾಗಿದ್ದು ರಾಜ್ಯಕ್ಕಲ್ಲವೇ? ರಾಜ್ಯಕ್ಕೆ ಸಿಗಬೇಕಾದ ಅನುದಾನ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ. ಪೂರ್ಣಪ್ರಮಾಣದ ಜಿಎಸ್‌ಟಿ ಪರಿಹಾರ ಬಂದಿಲ್ಲ. ಬರ, ನೆರೆ ಪರಿಹಾರದ ಹಣ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರೋರು ಇದನ್ನೆಲ್ಲ ಗಟ್ಟಿ ಧ್ವನಿಯಲ್ಲಿ ಕೇಳದೆ ಹೆದರಿ ಸುಮ್ಮನಿದ್ರೆ ನಾಡಿಗೆ ಅನ್ಯಾಯವಾಗಲ್ವ? ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!