* ಸಿಎಂರನ್ನು ಜನ ಮಾಡಬೇಕು, ನಾವೇ ಹೋಗಿ ಕುಳಿತುಕೊಳ್ಳಲು ಆಗುತ್ತಾ: ಮಾಜಿ ಸಿಎಂ ಪ್ರಶ್ನೆ
* ಯಡಿಯೂರಪ್ಪ ಬಳಿಕ ಕಾರಜೋಳರನ್ನು ಯಾಕೆ ಸಿಎಂ ಮಾಡಲಿಲ್ಲ
* ಚುನಾವಣೆಯಲ್ಲಿ ಗೆಲ್ಲುವುದು ನಾವೇ. ಬಿಜೆಪಿ ಕುರಿತು ಜನರು ಭ್ರಮನಿರಸನಗೊಂಡಿದ್ದಾರೆ
ಕೊಪ್ಪಳ(ಜೂ.28): ಆರ್‌ಎಸ್‌ಎಸ್ ನಾಯಕರಿಗೆ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ನನ್ನ ಕಂಡರೆ ಭಯವಾಗುತ್ತದೆ. ಅದಕ್ಕೆ ಪದೇ ಪದೇ ನನ್ನ ವಿರುದ್ಧ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಸೋಮವಾರ ತಾಲೂಕಿನ ಬಸಾಪುರ ಬಳಿ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ನನ್ನ ವಿರುದ್ಧವೇ ಆರೋಪಿಸುತ್ತಾರೆ ಎಂದರೆ ಅವರಿಬ್ಬರಿಗೂ ನನ್ನ ಕಂಡರೆ ಭಯವಿದೆ ಎಂದೇ ಅರ್ಥ ಎಂದರು.
ಹುಷಾರ್! ಬ್ರಾಹ್ಮಣರ ಬಗ್ಗೆ ಹೇಳಿಕೆಗೆ ಸಿದ್ದರಾಮಯ್ಯಗೆ ಬ್ರಾಹ್ಮಣರಿಂದ ಎಚ್ಚರಿಕೆ
ಸಿಎಂ ಜನರ ತೀರ್ಮಾನ:
ಯಾರು ಸಿಎಂ ಆಗಬೇಕು ಎಂದು ಜನರು ತೀರ್ಮಾನ ಮಾಡುತ್ತಾರೆ. ನಾನೇ ಸಿಎಂ ಆಗುತ್ತೇನೆ ಎಂದು ಹೇಳಿ ಕುಳಿತುಕೊಳ್ಳಲು ಆಗುತ್ತಾ? ಎಂದು ಕುಮಾರಸ್ವಾಮಿ ಅವರು ಸಿಎಂ ಆಗುವುದಾಗಿ ಹೇಳಿರುವ ಹೇಳಿಕೆನ್ನು ಲೇವಡಿ ಮಾಡಿದರು. ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಏನು? ಇಂಥ ಪಾರ್ಟಿ ಅಧಿಕಾರಕ್ಕೆ ಬರುವುದಾದರು ಹೇಗೆ? ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ಸರ್ಕಾರ ಪತನ ಮಾಡಲು ಬಿಜೆಪಿಯೇ ಆಟವಾಡುತ್ತಿದೆ. ಅದೆಲ್ಲರಿಗೂ ಗೊತ್ತಿರುವ ಸಂಗತಿ. ಆಪರೇಷನ್ ಕಮಲ ಮಾಡಿ ಸರ್ಕಾರ ಕೆಡವಲಾಗುತ್ತದೆ. ಶಾಸಕರು ಸುಮ್ಮನೆ ಬರ್ತಾರಾ? ಅವರಿಗೆ ಕೋಟಿ ಕೋಟಿ ಕೊಟ್ಟಿರುವುದರಿಂದಲೆ ಅವರು ಬರುತ್ತಿರುವುದು ಎಂದರು.
ಬಿಜೆಪಿ ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಕಿತ್ತು ಹಾಕಿದ್ದು ಯಾರು? ಮಧ್ಯಪ್ರದೇಶದಲ್ಲಿ ಸರ್ಕಾರ ಕಿತ್ತು ಹಾಕಿದ್ದು ಯಾರು? ಇದೆಲ್ಲವೂ ಬಿಜೆಪಿ ಆಪರೇಷನ್ ಕಮಲದಿಂದಲೇ ಮಾಡುತ್ತಿರುವುದು. ಇದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಜೆಡಿಎಸ್‌ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿ: ಸಿದ್ದರಾಮಯ್ಯ
ಪಾಪದ ಹಣ, ಲೂಟಿ ಹೊಡೆದ ಹಣ ಇದೆ. ಅದನ್ನು ಬಳಕೆ ಮಾಡಿ ಈ ರೀತಿ ಸರ್ಕಾರ ಬೀಳಿಸುತ್ತಿದ್ದಾರೆ. ಒಬ್ಬೊಬ್ಬ ಶಾಸಕರಿಗೆ .25- .30 ಕೋಟಿ ಕೊಟ್ಟು ಖರೀದಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರು ಬಂಡಾಯ ಎದ್ದಿದ್ದಾರೆ ಎನ್ನುವುದೆಲ್ಲ ಸುಳ್ಳು. ಕೇಂದ್ರದಲ್ಲಿ ಅಧಿಕಾರ ಇರುವುದರಿಂದ, ದುಡ್ಡು ಇರುವುದರಿಂದ ಇದೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಸಿಎಂ:
ಕಾಂಗ್ರೆಸ್ ದಲಿತ ಸಿಎಂ ಮಾಡುವ ಕುರಿತು ಬಿಜೆಪಿ ಟ್ವೀಟ್ ಮಾಡುತ್ತಿದೆ. ಇದನ್ನೇಕೆ ಮಾಡುತ್ತಿದ್ದಾರೆ. ಬೇಕಾದರೆ ತಾವೇ ಮಾಡಿಕೊಳ್ಳಲಿ, ಯಡಿಯೂರಪ್ಪ ಅವರು ಬದಲಾಯಿಸಿದಾಗ ಗೋವಿಂದ ಕಾರಜೋಳ ಅವರನ್ನು ಸಿಎಂ ಮಾಡಬಹುದಿತ್ತಲ್ಲ. ಮಾಡಲಿಲ್ಲ ಯಾಕೆ? ಕಾಂಗ್ರೆಸ್ ಮಾತ್ರ ದಲಿತ ಸಿಎಂ ಮಾಡಲು ಸಾಧ್ಯ. ಇಂದಲ್ಲ, ನಾಳೆ ನಮ್ಮ ಪಕ್ಷವೇ ಮಾಡುತ್ತದೆಯೇ ಹೊರತು ಬಿಜೆಪಿ ಮಾಡುವುದಿಲ್ಲ ಎಂದರು.
ಬೆಂಗಳೂರಲ್ಲಿ ವಾರ್ಡ್‌ಗಳ ವಿಂಗಡಣೆಯನ್ನು ಬಿಜೆಪಿ ಸರ್ಕಾರ ತನಗೆ ಬೇಕಾದಂತೆ ಮಾಡಿದೆ. ಆದರೂ ಚುನಾವಣೆಯಲ್ಲಿ ಗೆಲ್ಲುವುದು ನಾವೇ. ಬಿಜೆಪಿ ಕುರಿತು ಜನರು ಭ್ರಮನಿರಸನಗೊಂಡಿದ್ದಾರೆ ಎಂದರು. ಶಿವಸೇನೆ ಸಂಸದ ಸಂಜಯ ರಾವುತ್ ಅವರಿಗೆ ಇ.ಡಿ. ನೋಟಿಸ್ ಜಾರಿ ಮಾಡಿದ ಕುರಿತು ನನಗೆ ಮಾಹಿತಿ ಇಲ್ಲ. ಆದರೆ, ಕೇಂದ್ರ ಇ.ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮಾತ್ರ ಸುಳ್ಳಲ್ಲ ಎಂದರು.