
ಬೆಂಗಳೂರು(ಜು.07): ‘ಕಾಂಗ್ರೆಸ್ ಅವಧಿಯಲ್ಲಿ ನೇಮಕಾತಿ ಅಕ್ರಮ ನಡೆದಿದ್ದರೆ ವಿರೋಧ ಪಕ್ಷದಲ್ಲಿದ್ದು ಏನು ಮಾಡುತ್ತಿದ್ದೆ? ಕಡ್ಲೆಪುರಿ ತಿಂತಾ ಇದ್ಯಾ? ದಾಖಲೆ ಇದ್ದರೆ ಆಗ ಏಕೆ ಸುಮ್ಮನಿದ್ದೆ ನನ್ನ (ಸಿಎಂ ಹುದ್ದೆ) ಉಳಿಸೋಕಾ?’
- ಇದು ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಅಕ್ರಮಗಳ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ ಪರಿ.
ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸ್ಪಂದಿಸಿದ್ದ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್ ಅವಧಿಯಲ್ಲಿನ ಅಕ್ರಮಗಳ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ಈ ವಿಚಾರವಾಗಿ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ದಾಖಲೆಗಳಿದ್ದರೆ ನಿಮ್ಮದೇ ಸರ್ಕಾರ ಇದೆ. ನೀವೇ ಮುಖ್ಯಮಂತ್ರಿಗಳಾಗಿದ್ದಿರಿ. ದಾಖಲೆ ಬಿಡುಗಡೆ ಮಾಡಿ ತನಿಖೆ ನಡೆಸಿ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಬೇರೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಏಕ ವಚನದಲ್ಲೇ ಕಿಡಿ ಕಾರಿದರು.
ತಮ್ಮ ಮಟ್ಟ ತಾವೇ ಇಳಿಸಿಕೊಳ್ಳುತ್ತಿದ್ದಾರೆ, ಸಿದ್ದರಾಮಯ್ಯಗೆ ಅಶ್ವತ್ಥನಾರಾಯಣ ತಿರುಗೇಟು
ಆರಗ ಜ್ಞಾನೇಂದ್ರ ವಜಾಗೊಳಿಸಿ:
ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉಭಯ ಸದನಗಳಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಸದನಲ್ಲಿ ಅಕ್ರಮವೇ ನಡೆದಿಲ್ಲ ಎಂದು ಹೇಳಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿದ್ದು ಸುಳ್ಳು ಉತ್ತರ ಕೊಟ್ಟಿರುವವರು ಹೇಗೆ ಸಚಿವ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ? ಬಿಜೆಪಿ ಕೂಡ ಅವರನ್ನು ಮುಂದುವರೆಸಬಾರದು. ಕೂಡಲೇ ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.