ಸಿದ್ದು ಕಾಲದಲ್ಲೂ ನೇಮಕಾತಿ ಹಗರಣ, ಮುಚ್ಚಿ ಹಾಕಿದ್ದೇ ಸಾಧನೆ: ಬೊಮ್ಮಾಯಿ

By Kannadaprabha News  |  First Published Jul 7, 2022, 1:00 AM IST

*  ಪೊಲೀಸ್‌ ನೇಮಕಾತಿ, ಪಿಯು ಪರೀಕ್ಷೆ ಅಕ್ರಮ
*  ಸಿಐಡಿಗೆ ವಹಿಸಿ ಮುಚ್ಚಿ ಹಾಕಿದ್ದ ಸಿದ್ದರಾಮಯ್ಯ
*  ದಾಖಲೆ ಇದ್ದರೆ ತನಿಖೆ ನಡೆಸಿ: ಸಿದ್ದು ಸವಾಲು
 


ಬೆಂಗಳೂರು/ಮೈಸೂರು(ಜು.07):  ಸಿದ್ದರಾಮಯ್ಯನವರ ಸರ್ಕಾರ ಹಲವು ನೇಮಕಾತಿ ಹಾಗೂ ಪಿಯುಸಿ ಪರೀಕ್ಷಾ ಹಗರಣಗಳಿಗೆ ಸ್ಪಂದನೆ ತೋರದ ಹಾಗೂ ಪ್ರಕರಣಗಳನ್ನು ಮುಚ್ಚಿಹಾಕುವ ಸರ್ಕಾರವಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರಿಹಾಯ್ದಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ನೇಮಕಾತಿಗೆ ಸಂಬಂಧಿಸಿದ ನೇಮಕಾತಿ ಸಮಿತಿಯ ಮುಖ್ಯಸ್ಥರೇ ಆರೋಪಿಯಾಗಿದ್ದರು. ದಕ್ಷ ಆಡಳಿತ ನೀಡಿದ್ದೇವೆ ಎಂದು ಹೇಳಿಕೊಂಡ ಸಿದ್ದರಾಮಯ್ಯನವರ ಸರ್ಕಾರ ಎಫ್‌ಐಆರ್‌ನಲ್ಲಿ ಹೆಸರು ಬಂದ ನಂತರ ಸಿಐಡಿಗೆ ತನಿಖೆಯನ್ನು ಒಪ್ಪಿಸಿ ಪ್ರಕರಣವನ್ನು ಮುಚ್ಚಿಹಾಕಿದರು ಎಂದು ಆಪಾದಿಸಿದರು.

Tap to resize

Latest Videos

ತಮ್ಮ ಮಟ್ಟ ತಾವೇ ಇಳಿಸಿಕೊಳ್ಳುತ್ತಿದ್ದಾರೆ, ಸಿದ್ದರಾಮಯ್ಯಗೆ ಅಶ್ವತ್ಥನಾರಾಯಣ ತಿರುಗೇಟು

ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಪಾಸು ಮಾಡಿಕೊಡುವುದಾಗಿ ಹೇಳಿ 18 ಕೋಟಿ ರೂ.ಗಳನ್ನು ವಸೂಲು ಮಾಡಿದ ಪ್ರಕರಣವೂ ಎಫ್‌ಐಆರ್‌ ನಂತರ ಸಿಐಡಿ ತನಿಖೆಗೆ ವಹಿಸಿ ಪ್ರಕರಣವನ್ನು ಮುಚ್ಚಿಹಾಕಿದರು. ತಮ್ಮ ತಪ್ಪನ್ನು ಮರೆಮಾಚಲು ಇಂತಹ ಹೇಳಿಕೆಗಳನ್ನು ಅವರು ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ನಾವು ಈ ಬಗ್ಗೆ ಸದನದಲ್ಲಿ ಪ್ರಶ್ನಿಸಿದರೂ ಯಾವುದೇ ಸ್ಪಂದನೆ ತೋರದ ಹಾಗೂ ಮುಚ್ಚಿಹಾಕುವ ಸರ್ಕಾರವಾಗಿತ್ತು ಎಂದು ತಿಳಿಸಿದರು.

ಮೊದಲ ಬಾರಿಗೆ ತಪ್ಪು ಮಾಡಿದ ದೊಡ್ಡ ಅಧಿಕಾರಿಯನ್ನು ನಮ್ಮ ಸರ್ಕಾರ ಪ್ರಶ್ನಿಸಿ, ಕೇವಲ ಇಲಾಖಾ ವಿಚಾರಣೆ ಅಮಾನತ್ತು ಮಾತ್ರವಲ್ಲ, ಬಂಧಿಸಿ ತನಿಖೆಯನ್ನೂ ಮಾಡಲಾಗುತ್ತಿದೆ ಎಂದರು.

ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪೊಲೀಸ್‌ ನೇಮಕಾತಿ ಪ್ರಕರಣದಲ್ಲಿ ಕಲಬುರಗಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗ ಪ್ರಶ್ನೆ ಪತ್ರಿಕೆ ತಯಾರಿಸಿದ್ದ ಡಿಐಜಿ ಅವರ ಮನೆಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅದು ವಿಚಾರಣೆಯಾಗಿ ಆರೋಪಿಯೆಂದು ಗುರುತಿಸಿದರು. ಅಧಿಕಾರಿಯನ್ನು ಅಮಾನತ್ತಾಗಲಿ, ವಜಾ ಆಗಲಿ ಮಾಡಲಿಲ್ಲ ಎಂದು ಕಿಡಿಕಾರಿದರು.

ಏನಿದು ಸಿದ್ದು ಅವಧಿಯ ಪ್ರಕರಣಗಳು?

1.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 2013ರಿಂದ 2017ರವರೆಗಿನ ಅವಧಿಯಲ್ಲಿ ನಡೆದ ಡಿವೈಎಸ್‌ಪಿ, ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳನ್ನು ಕೊಡಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ಅವರಿಂದ 18 ಕೋಟಿ ರು. ಹಣ ಪಡೆದು ಮೋಸ ಮಾಡಿರುವ ಬಗ್ಗೆ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅದರಲ್ಲಿ ಐವರು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರೇ ಆರೋಪಿಗಳಾಗಿರುತ್ತಾರೆ. ಈ ಬಗ್ಗೆ ಸಿಸಿಬಿ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸುತ್ತಾರೆ. ಬಳಿಕ 2018ರಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಯಿತು ಎಂಬುದು ಸಿಎಂ ಆಪ್ತರ ಆರೋಪ

ಸಿದ್ದರಾಮಯ್ಯ 75ನೇ ವರ್ಷಕ್ಕೆ ಪಾದಾರ್ಪಣೆ: ಆ.3ರಂದು ಅದ್ಧೂರಿ ಸಿದ್ದರಾಮೋತ್ಸವ!

2. 2014ನೇ ಸಾಲಿನಲ್ಲಿ ಸಿವಿಲ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಕಲಬುರ್ಗಿಯಲ್ಲಿ ಪ್ರಕರಣ ದಾಖಲಾಗುತ್ತದೆ. ತನಿಖಾ ವೇಳೆಯಲ್ಲಿನ ಸಾಕ್ಷ್ಯಾಧಾರಗಳ ಪ್ರಕಾರ ಅಂದಿನ ಪೊಲೀಸ್‌ ನೇಮಕಾತಿ ವಿಭಾಗದ ಅಧ್ಯಕ್ಷರಾದ ಕೆ.ವಿ.ಶ್ರೀಧರ್‌ ಮತ್ತು ಅವರ ಮನೆಯ ಕಾವಲುಗಾರ ಹರ್ಷಕುಮಾರ್‌ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿರುತ್ತದೆ. ತನಿಖೆ ನಡೆಸಿದ ಸಿಐಡಿಯು ಶ್ರೀಧರ್‌ ಅವರನ್ನು ಬಂಧಿಸಲಿಲ್ಲ. ಕೇವಲ ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಕಳುಹಿಸಿತ್ತು. ಮುಂದೆ ಶ್ರೀಧರ್‌ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡರು ಎನ್ನುತ್ತಾರೆ ಸಿಎಂ ಪಾಳಯದವರು.

ಸಿಎಂ ಆಪ್ತರ ಆರೋಪ

1. 2013ರಿಂದ 2017 ನಡುವೆ ಸಿದ್ದು ಸಿಎಂ ಆಗಿದ್ದಾಗ ಡಿವೈಎಸ್‌ಪಿ, ಎಫ್‌ಡಿಎ, ಎಸ್‌ಡಿಎ ನೇಮಕಾತಿ ಹಗರಣ
2. ಹುದ್ದೆ ಕೊಡಿಸುವುದಾಗಿ ನಂಬಿಸಿ 18 ಕೋಟಿ ವಂಚನೆ. 5 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಯೇ ಆರೋಪಿ
3. ಸಿಸಿಬಿ ತನಿಖೆ ನಡೆಸಿ ಕೋರ್ಟಿಗೆ ಚಾಜ್‌ರ್‍ಶೀಟ್‌ ಸಲ್ಲಿಸಿದ ನಂತರ 2018ರಲ್ಲಿ ಸಿಐಡಿಗೆ ಪ್ರಕರಣ ವರ್ಗಾವಣೆ
4. 2014ರ ಕಾನ್‌ಸ್ಟೇಬಲ್‌ ನೇಮಕಾತಿ ಅಕ್ರಮದಲ್ಲಿ ಅಂದಿನ ನೇಮಕಾತಿ ವಿಭಾಗದ ಅಧ್ಯಕ್ಷ ಶ್ರೀಧರ್‌ ಆರೋಪಿ
5. ಆಗ ಪ್ರಕರಣದ ತನಿಖೆ ನಡೆಸಿದ ಸಿಐಡಿ, ಶ್ರೀಧರ್‌ರನ್ನು ಬಂಧಿಸಲಿಲ್ಲ. ಕೇವಲ ಹೇಳಿಕೆ ದಾಖಲಿಸಿ ಕಳಿಸಿತ್ತು

ದಾಖಲೆ ಇದ್ದರೆ ತನಿಖೆ ನಡೆಸಿ: ಸಿದ್ದು ಸವಾಲು

ಬೆಂಗಳೂರು: ‘ಕಾಂಗ್ರೆಸ್‌ ಅವಧಿಯಲ್ಲಿ ನೇಮಕಾತಿ ಅಕ್ರಮ ನಡೆದಿದ್ದರೆ ವಿರೋಧ ಪಕ್ಷದಲ್ಲಿದ್ದು ಏನು ಮಾಡುತ್ತಿದ್ದೆ? ಕಡ್ಲೆಪುರಿ ತಿಂತಾ ಇದ್ಯಾ? ದಾಖಲೆ ಇದ್ದರೆ ಆಗ ಏಕೆ ಸುಮ್ಮನಿದ್ದೆ ನನ್ನ (ಸಿಎಂ ಹುದ್ದೆ) ಉಳಿಸೋಕಾ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಈಗ ನಿಮ್ಮದೇ ಸರ್ಕಾರ ಇದೆ. ನೀವೇ ಮುಖ್ಯಮಂತ್ರಿ ಆಗಿದ್ದೀರಿ. ದಾಖಲೆ ಇದ್ದರೆ ತನಿಖೆ ನಡೆಸಿ ಎಂದು ಸವಾಲು ಹಾಕಿದ್ದಾರೆ.
 

click me!