
ಬೆಂಗಳೂರು(ಏ.30): ‘ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಕಾಲ, ಬಿಜೆಪಿ ಎಂದರೆ ಅಮೃತ ಕಾಲ ಎಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ಮೊದಲು ನಿಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಿ. ಅಲ್ಲಿರುವ ಅದಾನಿ, ಅಂಬಾನಿಗಳು, ನಿಮ್ಮ ಅಕ್ಕಪಕ್ಕದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಸಚಿವರ ಭ್ರಷ್ಟಮುಖಗಳು ಕಾಣಲಿಲ್ಲವೇ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ನರೇಂದ್ರ ಮೋದಿ ಆರೋಪಗಳಿಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಕಳೆದ ಮೂರೂವರೆ ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ರು. ಹಣ ಲೂಟಿ ಮಾಡಿದ ಬಿಜೆಪಿ ಸಚಿವರಿಗೆ ಖಂಡಿತ ಇದು ಅಮೃತ ಕಾಲ. ಆದರೆ ನಿಮ್ಮಂತಹ ಭ್ರಷ್ಟರ ಸರ್ಕಾರ ಪಡೆದ ರಾಜ್ಯದ ಜನತೆಗೆ ಇದು ವಿಷ ಕಾಲ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 80 ಕೋಮು ಗಲಭೆ: ಜೆ.ಪಿ.ನಡ್ಡಾ
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೊದಲು ನಿಮಗೆ ರಾಜ್ಯದ ಬಿಜೆಪಿ ಸಚಿವರ 40% ಕಮಿಷನ್ ಕಿರುಕಳದ ವಿರುದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ನಿಮಗೆ ಬರೆದ ಪತ್ರವೂ ನೆನಪಾಗಲಿಲ್ಲವೇ? ನಿಮ್ಮದೇ ಸಚಿವರ ಲಂಚ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬ ನೆನಪಾಗಲಿಲ್ಲವೇ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೆ ಅದು ತಲುಪುವಾಗ ಕಡ್ಡಿ ಮಾತ್ರ ಉಳಿಯುತ್ತದೆ ಎಂಬ ಶಿರಹಟ್ಟಿಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಗಳ ಆಕ್ರೋಶವೂ ಕೇಳಿಸಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಷ್ಟೇಕೆ, ನಿಮ್ಮದೇ ಪಕ್ಷ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮತ್ತು ಅವರ ಮಗ ಈಗ ಜೈಲಲ್ಲಿರುವುದು ಯಾವ ದೇಶ ಸೇವೆ ಮಾಡಿದ್ದಕ್ಕಾಗಿ ಮೋದಿಯವರೇ? ಅವರ ಮನೆಯಲ್ಲಿ ದೊರೆತ ಎಂಟೂವರೆ ಕೋಟಿ ರು. ಹಣ ಯಾವ ಹಣ ಎಂಬುದನ್ನು ಉತ್ತರಿಸಿ ಎಂದು ಕಿಡಿ ಕಾರಿದ್ದಾರೆ.
ಕುಸಿದು ಬಿದ್ದ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ! ಬಿಸಿಲಿನ ತಾಪ ಲೆಕ್ಕಕ್ಕೇ ಇಲ್ಲ!
ನರೇಂದ್ರ ಮೋದಿಯವರೇ ನಿಮ್ಮ ಇಡೀ ರಾಜಕೀಯ ಬದುಕೇ ಒಂದು ಸುಳ್ಳಿನ ಕೋಟೆ. ಅದು ಮುರಿದು ಬೀಳುವ ಕಾಲ ಬಂದಿದೆ. ನಿಮ್ಮನ್ನು ಕಾಂಗ್ರೆಸ್ ನಿಂದಿಸಿದೆ ಎನ್ನುವ ನೀವು ಸೋನಿಯಾಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದಿಲ್ಲವೇ? ನಿಮ್ಮ ರಕ್ತದ ಕಣಕಣದಲ್ಲಿಯೂ ಇರುವುದು ದ್ವೇಷಾಸೂಯೆಯ ವಿಷ ಇಲ್ಲವೇ? ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಐಟಿ, ಇಡಿ, ಸಿಬಿಐ ಮೂಲಕ ಹಲವರ ಬಾಯಿಮುಚ್ಚಿಸಿದ್ದೀರಿ
ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ದಿಯನ್ನು ರಾಜ್ಯದ ಲಿಂಗಾಯತರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ನಿಮ್ಮ ಇಡೀ ಭಾಷಣದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿಯೇ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದಿರಿ, ಅವರನ್ನು ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಿರಿ, ಅವರ ಮಗನಿಗೆ ಕನಿಷ್ಠ ಶಾಸಕನನ್ನಾಗಿ ಮಾಡಲಿಲ್ಲ, ಸಚಿವರನ್ನಾಗಿ ಮಾಡಲಿಲ್ಲ. ಈಗ ಐಟಿ, ಇಡಿ, ಸಿಬಿಐ ಮೂಲಕ ಬಾಯಿಮುಚ್ಚಿಸಿ ಕೂರಿಸಿರುವವರು ನೀವೇ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.