ಸಿದ್ದರಾಮಯ್ಯಗೆ ಸಾಧು ಸಂತರ ಶಾಪ ತಟ್ಟಲಿದೆ. ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಮೈಸೂರು (ನ.05): ಸಿದ್ದರಾಮಯ್ಯಗೆ ಸಾಧು ಸಂತರ ಶಾಪ ತಟ್ಟಲಿದೆ. ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಐದು ವರ್ಷ ಸಿಎಂ ಅಂದರು. ವಿರೋಧ ವ್ಯಕ್ತವಾದಾಗ ಉಲ್ಟಾ ಹೊಡೆದರು. ಅವರು ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ ಎಂದು ಕುಟುಕಿದರು.
ಜಾತಿಗಣತಿ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆ. ಹಿಂದೆ ವರದಿ ನೀಡಿದ್ದಾಗ ಸಿಎಂ ಆಗಿದ್ದಾಗಲೇ ಜಾರಿಗೆ ತರುವುದಾಗಿ ಹೇಳಿದ್ದರು. ಸ್ವಲ್ಪ ದಿನಗಳ ಹಿಂದೆ ಸಾಧು ಸಂತರು ಭೇಟಿಯಾದಾಗ ನವೆಂಬರ್ ನಲ್ಲಿ ಜಾರಿಗೆ ತರುವುದಾಗಿ ಹೇಳಿದ್ದರು. ಈಗ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಸಾಧು ಸಂತರ ಶಾಪ ಸಿದ್ದರಾಮಯ್ಯಗೆ ತಟ್ಟುತ್ತೆ. ದಲಿತರು ಹಿಂದುಳಿದ ವರ್ಗದವರ ಶಾಪವು ತಟ್ಟುತ್ತದೆ. ಅವರನ್ನು ಬಳಸಿಕೊಂಡು ಸಿಎಂ ಆದವರು ಸಿದ್ದರಾಮಯ್ಯ ಎಂದು ಅವರು ದೂರಿದರು.
ತಿಂಗಳು, ವರ್ಷ ಅಲ್ಲ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಈಶ್ವರಪ್ಪ ಭವಿಷ್ಯ
ಯಾವತ್ತೂ ಸಿದ್ದರಾಮಯ್ಯ ಯಾವ ಪಕ್ಷವನ್ನು ಕಟ್ಟುವುದಿಲ್ಲ. ಯಾರೋ ಕಟ್ಟಿದ ಪಕ್ಷಕ್ಕೆ ಬಂದು ಅಧಿಕಾರ ಮಾಡುವುದು ಸಿದ್ದರಾಮಯ್ಯ ಅವರ ಚಾಳಿ. ಜೆಡಿಎಸ್ ನಿಂದ ಅವತ್ತು ಹೊರಗಡೆ ಬಂದಾಗ ನಾಯಿ ಹಸದಿತ್ತು, ಅನ್ನ ಹಳಸಿತ್ತು ಅನ್ನೊ ರೀತಿ ಕಾಂಗ್ರೆಸ್ ಸೇರಿದರು. ಈಗಲೂ ಸಿಎಂ ಸ್ಥಾನದಿಂದ ಅವರನ್ನ ಇಳಿಸಲಿ. ಅವರು ಅಪ್ಪಿತಪ್ಪಿಯೂ ಪಕ್ಷ ಕಟ್ಟುತ್ತೇನೆ ಎಂದು ಹೇಳುವುದಿಲ್ಲ. ಸಿದ್ದರಾಮಯ್ಯ ಚಾಳಿಯೇ ಅದು ಎಂದು ವಾಗ್ದಾಳಿ ನಡೆಸಿದರು.
ವಿಶ್ವನಾಥ್ ಸತ್ಯಹರಿಶ್ಚಂದ್ರ ಅಂದುಕೊಂಡಿದ್ದಾರೆ: ಆಪರೇಷನ್ ಕಮಲ ವೇಳೆ ದುಡ್ಡು ಪಡೆದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಚ್. ವಿಶ್ವನಾಥ್ ತಾವೊಬ್ಬರೇ ಸತ್ಯ ಹರಿಶ್ಚಂದ್ರ ಅಂದುಕೊಂಡಿದ್ದಾರೆ. ಸುಮ್ಮನೆ ಆಪಾದನೆ ಮಾಡಬಾರದು. ವಿಶ್ವನಾಥ್ ನನ್ನ ಆತ್ಮೀಯ ಸ್ನೇಹಿತ. ಅವರು ಹಣ ತೆಗೆದುಕೊಂಡಿರುವುದಕ್ಕೆ ನನ್ನ ಬಳಿ ಸಾಕ್ಷಿ ಇಲ್ಲ. ಹಣ ಪಡೆಯದೇ ಇರುವುದಕ್ಕೆ ಅವರ ಬಳಿ ಸಾಕ್ಷಿ ಏನಿದೆ? ಅವರು ಸುಖಾ ಸುಮ್ಮನೆ ಆರೋಪಮಾಡಬಾರದು, ಹಣ ಪಡೆದವರು ಎಷ್ಟು? ಎಲ್ಲಿ ಅಂತ ಹೇಳಲಿ ಎಂದು ಆಗ್ರಹಿಸಿದರು.
ಬಿಜೆಪಿ ಅಪರೇಷನ್ ಕಮಲ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಬ್ಬೇ ಒಬ್ಬ ಕಾಂಗ್ರೆಸ್ ಶಾಸಕ ನನಗೆ 50 ಕೋಟಿ ರೂ. ಆಫರ್ ಬಿಜೆಪಿಯಿಂದ ಯಾರು ಕೊಟ್ಟರು ಎಂದು ಹೇಳಿ ಬಿಡಲಿ ಆಗ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸುಳ್ಳು ಹೇಳಿ ಇಂತಹ ವಿಚಾರ ಹಬ್ಬಿಸುವುದು ಬೇಡ ಎಂದರು.
ಜಾತಿ ಗಣತಿ ವರದಿ ಬಿಡುಗಡೆ ಮಾಡ್ತೀರಾ ಇಲ್ವಾ?: ಕೆ.ಎಸ್.ಈಶ್ವರಪ್ಪ
ದಕ್ಷಿಣ ಶಿಕ್ಷಕರ ಸೇರಿದಂತೆ ಯಾವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ- ಜೆಡಿಎಸ್ ಮೈತ್ರಿ ಇಲ್ಲ. ನನಗೆ ಗೊತ್ತಿರುವ ಪ್ರಕಾರ ಲೋಕಸಭಾ ಚುನಾವಣೆ ಬಿಟ್ಟು ಉಳಿದ ಯಾವ ಚುನಾವಣೆಯಲ್ಲೂ ಮೈತ್ರಿ ಮಾತು ಆಡಿಲ್ಲ. ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕಲಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಸೇರಿ ನಾವು ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ.
- ಕೆ.ಎಸ್. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ