Mekedatu Padayatre ಪಾದಯಾತ್ರೆಯಲ್ಲಿದ್ದ ಸಿದ್ದರಾಮಯ್ಯಗೆ ಜ್ವರ, ಕಳವಳ ವ್ಯಕ್ತಪಡಿಸಿದ ಸಚಿವ

By Suvarna NewsFirst Published Jan 9, 2022, 4:58 PM IST
Highlights

* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಚಾಲನೆ
* ಪಾದಯಾತ್ರೆಯಲ್ಲಿ ತೊಡಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜ್ವರ
* ಸಂಗಮದಿಂದ ನಾಲ್ಕೈದು ಕಿಲೋ ಮೀಟರ್ ಬರುತ್ತಿದ್ದಂತೆಯೇ ಸುಸ್ತಾದ ಸಿದ್ದು
* ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡಿರುವುದರಿಂದ ಕಳವಳ ವ್ಯಕ್ತಪಡಿಸಿದ ಸಚಿವ

ಬೆಂಗಳೂರು, (ಜ.09): ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಪಾದಯಾತ್ರೆಯಲ್ಲಿ (Mekedatu Padayatre) ತೊಡಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಇದೀಗ ಜ್ವರದಿಂದ(Fever) ಬಳಲುತ್ತಿದ್ದು, ಪಾದಯಾತ್ರೆ ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ (Congress Padayatra) ಆರಂಭಿಸಿದ್ದು, ಇಂದು(ಭಾನುವಾರ) ಸಂಗಮ ಕ್ಷೇತ್ರದಿಂದ ಪಾದಯಾತ್ರೆಗೆ ಚಾಲನೆ ದೊರೆತಿದೆ.

Mekedatu Padaytre: ಪಾದಯಾತ್ರೆ ವೇಳೆ ಸುಸ್ತು, ಕಾರನ್ನೇರಿದ ಸಿದ್ದರಾಮಯ್ಯ

ಪಾದಯಾತ್ರೆಯಲ್ಲಿ ಭಾಗವಹಿಸಿ ಕೆಲ ದೂರ ಸಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸುಸ್ತಾಗಿದ್ದು, ಕೂಡಲೇ ಅವರು ಕಾರಿನಲ್ಲಿ ಹೆಗ್ಗನೂರು ಗ್ರಾಮಕ್ಕೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ.

ಬಳಿಕ ಸಿದ್ದರಾಮಯ್ಯನವರಿಗೆ ಜ್ವರ ತೀವ್ರವಾಗಿರುವುದರಿಂದ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸಿದ್ದರಾಮಯ್ಯ ಕೋವಿಡ್ ಬೂಸ್ಟರ್ ಡೋಸ್ ಹಾಕಿಸಿಕೊಂಡಿದ್ದರು. ಬೂಸ್ಟರ್ ಡೋಸ್ ಪಡೆದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಮಾಜಿ ಸಿಎಂ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಕಾರಜೋಳ ಕಳವಳ
ಇನ್ನು ಈ ಬಗ್ಗೆ ಸಚಿವ ಗೋವಿಂದ್ ಕಾರಜೋಳ ಅವರು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದ್ದು ನನಗೆ ಕಳವಳ ಆಗಿದೆ. ಸಿದ್ಧರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ.ತಮ್ಮ ಆರೋಗ್ಯ ರಕ್ಷಣೆ ಮಹತ್ವದ್ದು ಎಂದಿದ್ದಾರೆ.

ವೀಕೆಂಡ್‌ ಕರ್ಫ್ಯೂ ನಡುವೆಯೂ ಕಾಂಗ್ರೆಸ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡಿದೆ. ನಮ್ಮ ನೀರು, ನಮ್ಮ ಹಕ್ಕು ಎಂದು ಹತ್ತು ದಿನ ಪಾದಯಾತ್ರೆ ಮಾಡಲಿದ್ದಾರೆ.

ಕನಕಪುರ ತಾಲ್ಲೂಕಿನ ಕಾವೇರಿ ತಟ, ಸಂಗಮದಲ್ಲಿ ಚಾಲನೆ ದೊರೆತ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸುಮಾರು ನಾಲ್ಕು ಕಿಲೋ ಮೀಟರ್‌ ದೂರ ಕ್ರಮಿಸಿದ್ದರು. ಆದರೆ ನಾಲ್ಕೈದು ಕಿಲೋ ಮೀಟರ್‌ ನಡೆಯುತ್ತಲೇ 73 ವರ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಸ್ತಾಗಿದ್ದಾರೆ.  ಪಾದಯಾತ್ರೆಗೆಂದು ಸಿದ್ದರಾಮಯ್ಯನವರು ಹೊಸ ಶೂ ಖರೀದಿಸಿದ್ದರು.

ಪಾದಯಾತ್ರೆಯ ವಿವರ 
* ಜನವರಿ 9ರ ಭಾನುವಾರ ಬೆಳಿಗ್ಗೆ 8.30ಕ್ಕೆ ಮೇಕೆದಾಟು ಬಳಿಯ ಅರ್ಕಾವತಿ ಮತ್ತು ಕಾವೇರಿ ನದಿಗಳು ಸಂಧಿಸುವ ಸಂಗಮ ಸ್ಥಳದಿಂದ ಪ್ರಾರಂಭವಾಗುವ ಪಾದಯಾತ್ರೆ 6.5 ಕಿ. ಮೀ. ದೂರ ಸಾಗಿ ಹೆಗ್ಗನೂರು ಬಳಿ ಮಧ್ಯಾಹ್ನದ ಭೋಜನ ಮುಗಿಸಿ ಮತ್ತೆ 8.5 ಕಿ. ಮೀ. ಸಾಗಿ ಡಿ. ಕೆ. ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮ ತಲುಪಲಿದೆ. ಸಭೆಯ ಬಳಿಕ ಅಲ್ಲೇ ರಾತ್ರಿ ವಾಸ್ತವ್ಯ. 

* 2ನೇ ದಿನ ದೊಡ್ಡಾಲಹಳ್ಳಿ ಗ್ರಾಮದಿಂದ 8 ಕಿ. ಮೀ. ಸಾಗಿ ಮಾದಪ್ಪನದೊಡ್ಡಿ ಬಳಿ ವಿಶ್ರಾಂತಿ, ಊಟ ಮುಗಿಸಿ ಮತ್ತೆ 8 ಕಿ. ಮೀ. ಸಾಗಿ ಕನಕಪುರ ತಾಲ್ಲೂಕು ಕೇಂದ್ರ ತಲುಪಲಿದೆ. ರಾತ್ರಿ ಕನಕಪುರದಲ್ಲಿ ನಾಯಕರ ವಾಸ್ತವ್ಯ. 

* 3ನೇ ದಿನ ಕನಕಪುರದಿಂದ 7.3 ಕಿ. ಮೀ. ನೆಡದು ಗಾಣಳು ಗ್ರಾಮದ ವೀರಭದ್ರ ಸ್ವಾಮಿ ದೇವಾಲಯದ ಬಳಿ ಊಟ ಹಾಗೂ ವಿಶ್ರಾಂತಿ. ನಂತರ ಮತ್ತೆ 7 ಕಿ. ಮೀ. ಸಾಗುವ ಪಾದಯಾತ್ರೆ ಚಿಕ್ಕೇನಹಳ್ಳಿ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಲಿದೆ.

 * 4ನೇ ದಿನದ ಪಾದಯಾತ್ರೆ ಚುಕ್ಕೇನಹಳ್ಳಿ ಗ್ರಾಮದಿಂದ ಪ್ರಾರಂಭವಾಗಿ 15 ಕಿ. ಮೀ. ಸಾಗಿ ಜಿಲ್ಲಾ ಕೇಂದ್ರ ರಾಮನಗರ ತಲುಪಲಿದೆ. ರಾತ್ರಿ ಅಲ್ಲಿಯೇ ಸಭೆ ನಡೆಸಿ, ನಾಯಕರು ವಾಸ್ತವ್ಯ ಹೂಡಲಿದ್ದಾರೆ.

 * 5 ನೇ ದಿನದ ಪಾದಯಾತ್ರೆ ರಾಮನಗರದಿಂದ ಆರಂಭಗೊಂಡು 15 ಕಿ. ಮೀ. ಸಾಗಿ ಬಿಡದಿ ತಲುಪಲಿದೆ. ರಾತ್ರಿ ಬಿಡದಿಯಲ್ಲಿ ವಾಸ್ತವ್ಯ. 

* 6ನೇ ದಿನದ ಪಾದಯಾತ್ರೆ ಬಿಡದಿಯಿಂದ ಪ್ರಾರಂಭಗೊಂಡು ಮಂಚನಾಯಕನಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ 18 ಕಿ. ಮೀ. ಸಾಗಿ ಕೆಂಗೇರಿ ತಲುಪಲಿದೆ. ರಾತ್ರಿ ಪೂರ್ಣಿಮಾ ಕನ್ವೆನ್ಷನ್ ಹಾಲ್ ನಲ್ಲಿ ವಾಸ್ತವ್ಯ.

 * 7ನೇ ದಿನದ ಪಾದಯಾತ್ರೆ ಕೆಂಗೇರಿಯಿಂದ ಪ್ರಾರಂಭ, ಬೆಂಗಳೂರು ನಗರ ಪ್ರವೇಶ. 12 ಕಿ. ಮೀ. ನಡೆದು ಬೆಂಗಳೂರಿನ ಬನಶಂಕರಿಯಲ್ಲಿ ಮೂಲಕ ಸಾಗಿ ಸಾರಕ್ಕಿ ಸಿಗ್ನಲ್ ಬಳಿಯ ಸಿಂಧೂರ ಕನ್ವೆನ್ಷನ್ ಹಾಲ್ ನಲ್ಲಿ ರಾತ್ರಿ ವಾಸ್ತವ್ಯ. 

* 8ನೇ ದಿನದ ಪಾದಯಾತ್ರೆ ಸಾರಕ್ಕಿಯಿಂದ ಪ್ರಾರಂಭ. ಕೋರಮಂಗಲ ಮಾರ್ಗವಾಗಿ ಸಾಗುವ ಪಾದಯಾತ್ರೆ 17.2 ಕಿ. ಮೀ. ಸಾಗಿ ರಾತ್ರಿ ಲಕ್ಷ್ಮಿಪುರಂ ಸುಬ್ರಹ್ಮಣ್ಯ ಛತ್ರದಲ್ಲಿ ವಾಸ್ತವ್ಯ. 

* 9ನೇ ದಿನದ ಪಾದಯಾತ್ರೆ ಲಕ್ಷ್ಮಿಪುರಂನಿಂದ ಪ್ರಾರಂಭ. ಬಾಣಸವಾಡಿ ಮಾರ್ಗವಾಗಿ 12 ಕಿ. ಮೀ. ಸಾಗಿ ರಾತ್ರಿ ನಾಗವಾರದ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ. 

* 10ನೇ ದಿನದ ಪಾದಯಾತ್ರೆ ನಾಗವಾರದಿಂದ ಪ್ರಾರಂಭವಾಗುವ ಕಾಂಗ್ರೆಸ್ ನಾಯಕರ ಪಾದಯಾತ್ರೆ 12 ಕಿ. ಮೀ. ಸಂಚಾರ ಮಾಡಿ ಗಾಯಿತ್ರಿ ವಿಹಾರ್, ಪ್ಯಾಲೇಸ್ ಗ್ರೌಂಡ್ ತಪುಪಲಿದೆ. 

* ಪಾದಯಾತ್ರೆ ಕೊನೆಯ ದಿನವಾದ 11ನೇ ದಿನ ಪ್ಯಾಲೇಸ್ ಗ್ರೌಂಡ್‌ನಿಂದ ಹೊರಟು 8 ಕಿ. ಮೀ. ಸಂಚಾರ ಮಾಡಿ ರೇಸ್ ಕೋರ್ಸ್ ರೋಡ್ ಮೂಲಕ ಸಾಗಿ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಮುಕ್ತಾಯ.

click me!