
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆರಂಭವಾಗಿರುವ ನಾಯಕತ್ವ ಚರ್ಚೆ ಮತ್ತೆ ತೀವ್ರಗೊಂಡಿರುವ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಮತ್ತು ಅಹಿಂದ ಸಚಿವರ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕರೆದರೆ ಹೋಗ್ತೀನಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಅನೇಕ ಬಾರಿ ಒಂದೇ ಉತ್ತರ ನೀಡಿ ಸ್ಪಷ್ಟಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಕರೆ ಮಾಡಿದ್ದಾರೆಯಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಸಿಎಂ ಸಿದ್ದರಾಮಯ್ಯ ಲೆಟ್ ಹಿಮ್ ಕಾಲ್… ಹೈಕಮಾಂಡ್ ಕರೆದರೆ ಹೋಗ್ತೀನಿ ಎಂದರು. ಪತ್ರಕರ್ತರು ಮತ್ತೆ ಖರ್ಗೆ ಕರೆದರೆ ಹೋಗ್ತೀರಾ ಅಂತ ಕೇಳಿದರೂ, ಸಿಎಂ ಅದೇ ಉತ್ತರ ನೀಡಿ “ಕರೆದರೆ ಹೋಗ್ತೀನಿ… ಕರೆದರೆ ಹೋಗ್ತೀನಿ… ಕರೆದರೆ ಹೋಗ್ತೀನಿ. “ನೀವ್ ಕೇಳಿದ್ದು, ಹೈಕಮಾಂಡ್ ಕರೆದರೆ ಹೋಗ್ತೀರಾ ಅಂತ. ನಾನು ಕರೆದರೆ ಹೋಗ್ತೀನಿ ಅಂತ ಹೇಳಿದ್ದೀನಿ. ಅದನ್ನೇ ಪದೇಪದೇ ಕೇಳಿದ್ರೆ ಹೇಗೆ? ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.
ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಮಂಗಳವಾರ ಅಹಿಂದ ಸಚಿವರ ದಿಢೀರ್ ಭೇಟಿ ರಾಜಕೀಯ ವಲಯದಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಹೆಚ್.ಸಿ. ಮಹದೇವಪ್ಪ, ಡಾ. ಜಿ. ಪರಮೇಶ್ವರ್, ಮಾಜಿ ಸಚಿವ ಕೆ.ಎನ್. ರಾಜಣ್ಣ, ಇವರ ಜೊತೆಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಹಲವಾರು ಶಾಸಕರೂ ಉಪಸ್ಥಿತರಿದ್ದರು. ನಿನ್ನೆ ಕೂಡ ಸಿಎಂ ಪರವಾಗಿ ನಿಲ್ಲುವ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿ ಇಂದು ಕಾವೇರಿ ನಿವಾಸಕ್ಕೆ ಭೇಟಿ ನೀಡಿರುವುದು ಮತ್ತಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ನಿವಾಸದಲ್ಲಿ ನಡೆದ ಈ ಸಭೆ, ಮುಂದಿನ ದೆಹಲಿ ಭೇಟಿ ಮತ್ತು ಸಾಧ್ಯವಿರುವ ನಾಯಕತ್ವ ಚರ್ಚೆ ಹಿನ್ನೆಲೆಯಲ್ಲಿ ನಡೆದ ಮಹತ್ವದ ಮಾತುಕತೆ ಎಂದು ಪಕ್ಷದೊಳಗೆ ಚರ್ಚೆ ಆರಂಭವಾಗಿದೆ. ಸಭೆಯಲ್ಲಿ ಮುಖ್ಯವಾಗಿ, ಹಿಂದುಳಿದ ವರ್ಗದ ಸಚಿವರು, ದಲಿತ ಸಮುದಾಯದ ಸಚಿವರು, ಅಹಿಂದ ಗುಂಪಿನ ನಾಯಕರರೊಂದಿಗೆ ಸಿಎಂ ಚರ್ಚೆ ನಡೆಸಿದರು. ಸಭೆ ನಂತರ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾಗೆ ತೆರಳಿದರು. ಈ ಸಭೆಯಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗಿದೆ ಎನ್ನಲಾಗುತ್ತಿದೆ. ಅಧಿಕಾರ ಬಿಟ್ಟುಕೊಡಬೇಡಿ ಎಂದು ಸಿಎಂಗೆ ಸಚಿವರು ಸಲಹೆ ನೀಡಿದ್ದಾರೆನ್ನಲಾಗಿದೆ.
ಸಭೆಯಲ್ಲಿ ಸಚಿವರು ಸಿಎಂಗೆ ಹಲವು ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆಂದು ಮೂಲಗಳು ಹೇಳಿವೆ, ಸಚಿವರ ಈ ನೇರ ಮತ್ತು ಸ್ಪಷ್ಟ ಮಾತುಗಳು, ರಾಜ್ಯ ಕಾಂಗ್ರೆಸ್‌ನಲ್ಲಿ ಅಂತರಂಗದಲ್ಲಿ ತೀವ್ರ ಚಟುವಟಿಕೆ ನಡೆಯುತ್ತಿರುವುದಕ್ಕೆ ಸೂಚನೆ ನೀಡುತ್ತಿವೆ.
ಮುಂದಿನ ದಿನಗಳಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.