
ಬಳ್ಳಾರಿ(ನ.12): ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಆತಂಕ ಎದುರಿಸುತ್ತಿದ್ದು, ಶೀಘ್ರವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪುನರುಚ್ಚರಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಸಮರ್ಥ ಸರ್ಕಾರ, ಅಸಮರ್ಥ ಮುಖ್ಯಮಂತ್ರಿ ಇದ್ದಾರೆ. ಬರೀ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಜನಪ್ರಿಯತೆ ಕಳೆದುಕೊಂಡಿದೆ. ಸಿದ್ದರಾಮಯ್ಯ ಅವರನ್ನು ಅಸಮರ್ಥ ಮುಖ್ಯಮಂತ್ರಿ ಎಂದು ನಾವಷ್ಟೇ ಹೇಳುತ್ತಿಲ್ಲ, ಕಾಂಗ್ರೆಸ್ ಸರ್ಕಾರದ ಶಾಸಕರೇ ಹೇಳುತ್ತಿದ್ದಾರೆ. ಈಗಾಗಲೇ ಸಿಎಂಗೆ ರಾಜೀನಾಮೆ ನೀಡುವ ಆತಂಕ ಶುರುಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡುತ್ತಾರೆ ಎಂದರು.
ಯಡಿಯೂರಪ್ಪ ಶಾಸ್ತ್ರ ಹೇಳ್ತಾರಾ?: ಸಿದ್ದರಾಮಯ್ಯ ಪ್ರಶ್ನೆ
ಸಿದ್ದರಾಮಯ್ಯ ಅವರ ಆಡಳಿತ ವೈಖರಿಯಿಂದ ಕಾಂಗ್ರೆಸ್ ಸರ್ಕಾರ ಬರೀ ಒಂದೂವರೆ ವರ್ಷದಲ್ಲಿ ಜನಪ್ರಿಯತೆ ಕಳೆದುಕೊಂಡಿದೆ. ಮುಖ್ಯಮಂತ್ರಿಗಳ ಕಾರ್ಯವೈಖರಿಗೆ ಬೇಸತ್ತು ಒಂದೆಡೆ ಆಡಳಿತ ಶಾಸಕರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರೆ, ಮತ್ತೊಂದೆಡೆ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂ.1 ಆರೋಪಿ ಎಂದು ರಾಜ್ಯ ಉಚ್ಚ ನ್ಯಾಯಾಲಯವೇ ಹೇಳಿದೆ. ಅಲ್ಲದೆ, ತನಿಖೆ ಮಾಡಿ ಎಂದು ತಿಳಿಸಿದೆ. ಸಿಎಂ ತನಿಖೆ ಎದುರಿಸಿದ ನಾಟಕವಾಡಿ ಬಂದಿದ್ದಾರೆ ಎಂದರು.
ಯಡಿಯೂರಪ್ಪ, ಶ್ರೀರಾಮುಲು ಅವರನ್ನು ಬೆದರಿಸಲು ಕೋವಿಡ್ ವೇಳೆಯ ಉಪಕರಣ ಖರೀದಿ ಹಗರಣ ವಿಚಾರ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಸಾಮರ್ಥ ಗೊತ್ತಿರುವ ಸಿದ್ದರಾಮಯ್ಯ ಕೋವಿಡ್ ಹಗರಣ ಮುಂದಿಟ್ಟಿದ್ದಾರೆ. ತಮ್ಮ ಹಗರಣವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಬಂದ್ ಮಾಡಿದ ಇವರು, ಪ್ರಜಾಸತ್ತೆಯ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಶಾಸಕ ಜನಾರ್ದನ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್‌ಮೋಕಾ, ಮಾಜಿ ಸಚಿವ ಆರಗ ಜ್ಞಾನೇಂದ್ರ, ರೇಣುಕಾಚಾರ್ಯ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.