
ಬೆಂಗಳೂರು (ಜು.07): ನಾನು ಅಧಿಕಾರದಲ್ಲಿ ಇರುವವರೆಗೆ, ಮುಖ್ಯಮಂತ್ರಿಯಾಗಿ ಇರುವವರೆಗೆ ಹಿಂದುಳಿದ ವರ್ಗಗಳು ಮತ್ತು ಎಲ್ಲಾ ಬಡವರ ಮಠಗಳಿಗೆ ಸಹಾಯ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾಗಿನೆಲೆ ಕನಕ ಗುರುಪೀಠದ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಯವರ 19ನೇ ವರ್ಷದ ಪುಣ್ಯಾರಾಧನೆಯ ಸ್ಮರಣಾರ್ಥ ನಗರ ಹೊರವಲಯದ ಕೇತೋಹಳ್ಳಿಯಲ್ಲಿ ‘ಭಕ್ತರ ಭಂಡಾರದ ಕುಟೀರ’ವನ್ನು ಲೋಕಾರ್ಪಣೆಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಮೈಸೂರಿನ ಯಾಂದಳ್ಳಿಯಲ್ಲಿ 12 ಎಕರೆ ಜಮೀನು ಇರುವ ಮಠದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು, ಅದನ್ನು ಪೂರ್ಣಗೊಳಿಸುತ್ತೇವೆ. ಬನಶಂಕರಿಯಲ್ಲಿರುವ ಮಠದಲ್ಲಿ ಕಾನೂನು ಕಾಲೇಜು ಮತ್ತು ಸ್ಪರ್ಧಾತ್ಮಕ ತರಬೇತಿ ಕೇಂದ್ರ ಕೂಡ ಆರಂಭಿಸಲಾಗಿದೆ. ಅದರ ಜೊತೆಗೆ 150 ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ಸ್ಥಾಪಿಸುತ್ತೇವೆ. ಕುರುಬರ ಸಂಘದ ಕಟ್ಟಡವನ್ನು 34 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತದೆ. ಮೈಸೂರಿನಲ್ಲಿ 300 ಜನ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಮತ್ತು ಸಮುದಾಯ ಭವನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಸೆಂಟರ್ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಲ್ಯ ಆಸ್ಪತ್ರೆ ಪಕ್ಕದಲ್ಲಿರುವ ಸಮುದಾಯದ ಆಸ್ತಿಯನ್ನು ಉಳಿಸಿದ್ದೇವೆ. ನಾವು ಒಂದು ಜಾತಿ ದೃಷ್ಟಿಕೋನದಿಂದ ಮಾತ್ರ ನೋಡಲಾಗದು. ಶೋಷಣೆಗೊಳಗಾದ ಎಲ್ಲಾ ಮಠಗಳಿಗೆ ನೆರವಾಗುತ್ತೇನೆ. ಸಮುದಾಯದ ಮಠಕ್ಕೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುತ್ತೇನೆ. ಹಿಂದುಳಿದ ಮಠಗಳಿಗೆ ಜಮೀನು ಮತ್ತು ಅನುದಾನ ನೀಡುತ್ತೇನೆ. ಕೆಲವರು ನನ್ನನ್ನು ದುರಂಹಂಕಾರಿ ಎನ್ನುತ್ತಾರೆ. ಆದರೆ, ನನ್ನ ಸ್ವಾಭಿಮಾನ ಬೇರೆಯವರಿಗೆ ದುರಂಹಕಾರದಂತೆ ಕಂಡರೆ ಏನು ಮಾಡಲಾಗದು. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ನುಡಿದರು.
ಸಿದ್ದರಾಮಯ್ಯ ಜಾತಿ ಸಮಾವೇಶ ಮಾಡುತ್ತಾರೆ ಎನ್ನುತ್ತಾರೆ. ಆದರೆ, ಮುಂದುವರೆದ ಸಮುದಾಯಗಳು ಜಾತಿ ಸಮಾವೇಶ ಮಾಡಿದರೆ ಜಾತೀಯತೆ ಎನಿಸಿಕೊಳ್ಳುತ್ತದೆ. ಅದೇ ಶೋಷಿತರು, ಹಿಂದುಳಿದವರು ಜಾತಿ ಸಮಾವೇಶ ಮಾಡಿದರೆ ಜಾತೀಯತೆ ಆಗುವುದಿಲ್ಲ ಎಂದು ಸ್ವಾತಂತ್ರ ಹೋರಾಟಗಾರ ರಾಮ ಮನೋಹರ್ ಲೋಹಿಯಾ ಹೇಳಿದ್ದರು. ಶೋಷಿತ ಸಮುದಾಯಗಳು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಮಾಡಬೇಕು. ಬೇರೆ ಬೇರೆ ಜಾತಿಯವರು ಮಠ ಮಾಡಿಕೊಳ್ಳುವುದು ತಪ್ಪಲ್ಲ. ಉತ್ತಮ ಬೆಳವಣಿಗೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಭಕ್ತರ ಕಾಣಿಕೆಯಲ್ಲಿ ಈ ಮಠ ನಿರ್ಮಾಣವಾಗಿದೆ. ಸಚಿವ ಬೈರತಿ ಸುರೇಶ್ ₹50 ಲಕ್ಷ, ಶಾಮನೂರು ಶಿವಶಂಕರಪ್ಪ ₹25 ಲಕ್ಷ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹25 ಲಕ್ಷ ಹಾಗೂ ಶಾಸಕ ಪ್ರಿಯಕೃಷ್ಣ ₹25 ಲಕ್ಷ ನೀಡಿದ್ದಾರೆ. ಒಟ್ಟು ₹4.73 ಕೋಟಿ ನನ್ನ ಖಾತೆಗೆ ತಲುಪಿದೆ. ಇದು ಭಕ್ತರ ಮಠ ಆಗಬೇಕು. ಸರ್ಕಾರದ ಮಠ ಎನಿಸಿಕೊಳ್ಳಬಾರದು. ಹೀಗಾಗಿ, ಸರ್ಕಾರದ ಅನುದಾನ ಪಡೆದಿಲ್ಲ ಎಂದು ಹೇಳಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಸಚಿವ ಭೈರತಿ ಸುರೇಶ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ್ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.