ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಪಿತಾಮಹ. ಅವರು ‘ಪೇಮೆಂಟ್ ಸಿಎಂ’ ಎಂದು ಆರೋಪಿಸಿದ ಕಟೀಲ್
ಬೆಳಗಾವಿ(ಸೆ.29): ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಪಿತಾಮಹ. ಅವರು ‘ಪೇಮೆಂಟ್ ಸಿಎಂ’ ಎಂದು ಆರೋಪಿಸಿದರು.
ಕಾಗವಾಡ ವಿಧಾನಸಭಾ ಕ್ಷೇತ್ರದ ಮದಭಾವಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿಯಾಗಿದ್ದರೆ ಅದು ಸಿದ್ದರಾಮಯ್ಯ. ಸೋನಿಯಾ ಗಾಂಧಿ ಅವರಿಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯನವರಿಗಿಂತ ಹಿರಿಯರು ಅನುಭವಿಗಳಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರರಂಥ ಹಲವು ಮುಖಂಡರಿದ್ದರೂ ಸಿದ್ದರಾಮಯ್ಯ ಸೋನಿಯಾ ಮೇಡಂಗೆ ಪೇಮೆಂಟ್ ಮಾಡಿ ಮುಖ್ಯಮಂತ್ರಿ ಆಗಿದ್ದರು ಎಂದು ದೂರಿದರು.
Belagavi: ಮಕ್ಕಳ ಭವಿಷ್ಯದ ಚಿಂತನೆ ಆಗಬೇಕು: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ಸಿದ್ದರಾಮಯ್ಯ ಅವರಿಗೆ ಕಣ್ಣೀರು ಬರಲಿಲ್ಲ. ಬೆಳಗಾವಿಯ ಅಧಿವೇಶನ ನಡೆಯುವಾಗ ವಿಠ್ಠಲ ಅರಭಾವಿ ವಿಧಾನಸೌಧದ ಎದುರು ಆತ್ಮ ಹತ್ಯೆ ಮಾಡಿಕೊಂಡಾಗ ಅವರ ಮನೆಗೆ ಹೋಗಿ ಕನಿಷ್ಠ ಪರಿಹಾರ ಕೊಡುವ ಸೌಜನ್ಯವೂ ತೋರಲಿಲ್ಲ. ಅವರ ಸರ್ಕಾರಾವಧಿಯಲ್ಲಿ 24 ಹಿಂದೂ ಕಾರ್ಯ ಕಾರ್ಯಕರ್ತರ ಹತ್ಯೆಯಾಯಿತು. ಒಬ್ಬರ ಮನೆಗೂ ಹೋಗಲಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್‌ನಿಂದ ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಸೃಷ್ಟಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ತುಂಬೆಲ್ಲ ಭ್ರಷ್ಟಾಚಾರ, ಭಯೋತ್ಪಾದನೆ ಹೆಚ್ಚಾಗಿ ದೇಶವನ್ನು ದಿವಾಳಿ ಮಾಡಿದ್ದರು. ಸದ್ಯ ಕಾಂಗ್ರೆಸ್ ಪಕ್ಷ ಮುಳುಗುವ ಹಡಗಾಗಿದೆ ಎಂದರು.