ಸೋನಿಯಾ ಒಪ್ಪಿದರೆ ಖರ್ಗೆ ಅಖಾಡಕ್ಕೆ, ದಿಗ್ವಿಜಯ ಕೂಡ ಸ್ಪರ್ಧೆ ಸಾಧ್ಯತೆ, ಗೆಹ್ಲೋಟ್ ಸ್ಪರ್ಧೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ
ನವದೆಹಲಿ(ಸೆ.29): ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ಸುಕರಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದೇ ವೇಳೆ, ಮತ್ತೊಬ್ಬ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬುಧವಾರ ರಾತ್ರಿ ದಿಢೀೕರ್ ಆಗಿ ದೆಹಲಿಗೆ ದೌಡಾಯಿಸಿದ್ದು, ಇನ್ನೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ಮೊನ್ನೆಯವರೆಗೆ ಮುಂಚೂಣಿಯಲ್ಲಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ದಿಲ್ಲಿಗೆ ಆಗಮಿಸಿದ್ದಾರೆ. ಆದರೆ ಅವರು ನಾಮಪತ್ರ ಸಲ್ಲಿಸುತ್ತಾರಾ ಅಥವಾ ರಾಜಸ್ಥಾನ ಮುಖ್ಯಮಂತ್ರಿಯಾಗೇ ಉಳಿದುಕೊಂಡು ಅಧ್ಯಕ್ಷ ಹುದ್ದೆಗೆ ಬೇಡ ಎನ್ನುತ್ತಾರಾ ಸ್ಪಷ್ಟವಾಗಿಲ್ಲ.
ರಾಹುಲ್ ಗಾಂಧಿಯೇ AICC ಅಧ್ಯಕ್ಷರಾಗಲಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ
ಖರ್ಗೆ ಸಿದ್ಧ- ಮೂಲಗಳು:
‘ಗಾಂಧಿ ಕುಟುಂಬದ ನಿಷ್ಠರಾಗಿರುವ ಖರ್ಗೆ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಸೂಚಿಸಿದರೆ ಸ್ಪರ್ಧೆಗೆ ಸಿದ್ಧರಾಗಿದ್ದು, ಪಕ್ಷದಲ್ಲಿಯೂ ಅವರ ಬಗ್ಗೆ ಉತ್ತಮ ಅಭಿಪ್ರಾಯಗಳಿದೆ’ ಎಂದು ಮೂಲಗಳು ಹೇಳಿವೆ.
ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಬೇಕೆಂಬ ಕೂಗು ಕೇಳಿ ಬಂದಿದೆ. ಪ್ರಿಯಾಂಕ ಪರ ಬ್ಯಾಟ್ ಬೀಸಿರುವ ಕಾಂಗ್ರೆಸ್ ಸಂಸದ ಅಬ್ದುಲ್ ಖಾಲಿಕ್ ‘ಪ್ರಿಯಾಂಕಾ ಗಾಂಧಿ ಈಗ ವಾದ್ರ ಕುಟುಂಬದ ಸೊಸೆ, ಅವರು ಗಾಂಧಿ ಪರಿವಾರದಲ್ಲಿಲ್ಲ . ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರು ಸ್ಪರ್ಧೆ ಮಾಡಬಹುದು’ ಎಂದು ಟ್ವೀಟ್ ಮಾಡಿದ್ದಾರೆ.