ಪಿಎಫ್‌ಐ ನಿಷೇಧ ಗುಜರಾತ್‌ ಚುನಾವಣೆಯ ಗಿಮಿಕ್‌: ಹರಿಪ್ರಸಾದ್‌

By Kannadaprabha News  |  First Published Sep 29, 2022, 12:00 AM IST

ಪಿಎಫ್‌ಐ ನಿಷೇಧ ವಿಚಾರ ಹೊಸದೇನಲ್ಲ. ಯಾವ್ಯಾವಾಗ ಗುಜರಾತ್‌ ಚುನಾವಣೆ ಬರುತ್ತೋ ಬಿಜೆಪಿಯವರಿಗೆ ವಿಧ್ವಂಸಕ ಚಟುವಟಿಕೆಗಳ ಬಗ್ಗೆ ಜ್ಞಾಪಕ ಬರುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ವಿಚಾರ ಸುದ್ದಿಯಾಗುತ್ತೆ. ಇಲ್ಲ ನಕಲಿ ಎನ್‌ಕೌಂಟರ್‌ ಆಗುತ್ತೆ: ಹರಿಪ್ರಸಾದ್‌


ಬೆಂಗಳೂರು(ಸೆ.29): ಪಿಎಫ್‌ಐ ಸಂಘಟನೆ ನಿಷೇಧ ವಿಚಾರ ಗುಜರಾತ್‌ ಚುನಾವಣೆಗಾಗಿ ಮಾಡಿರುವ ಗಿಮಿಕ್‌, ಜನರ ಅನುಕಂಪ ಗಿಟ್ಟಿಸಿಕೊಳ್ಳಲು ನಡೆಸಿರುವ ಪೂರ್ವ ನಿಯೋಜಿತ ಯೋಜನೆ. ಚುನಾವಣೆ ಮುಗಿದ ಬಳಿಕ ಬಿಜೆಪಿಯವರು ಪಿಎಫ್‌ಐ ಮತ್ತು ಎಸ್‌ಡಿಪಿಐನವರೊಂದಿಗೆ ಜುಗಲ್‌ಬಂದಿ ನಡೆಸುತ್ತಾರೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ನಿಷೇಧ ವಿಚಾರ ಹೊಸದೇನಲ್ಲ. ಯಾವ್ಯಾವಾಗ ಗುಜರಾತ್‌ ಚುನಾವಣೆ ಬರುತ್ತೋ ಬಿಜೆಪಿಯವರಿಗೆ ವಿಧ್ವಂಸಕ ಚಟುವಟಿಕೆಗಳ ಬಗ್ಗೆ ಜ್ಞಾಪಕ ಬರುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ವಿಚಾರ ಸುದ್ದಿಯಾಗುತ್ತೆ. ಇಲ್ಲ ನಕಲಿ ಎನ್‌ಕೌಂಟರ್‌ ಆಗುತ್ತೆ. ಆಗೆಲ್ಲಾ ಪಿಎಫ್‌ಐ ಬ್ಯಾನ್‌ ವಿಚಾರ ತರುತ್ತಾರೆ. ಹಿಂದಿನಿಂದಲೂ ಪಿಎಫ್‌ಐ ವಿರುದ್ಧ ಆರೋಪ ಮಾಡಿಕೊಂಡೇ ಬರುತ್ತಿದ್ದವರಿಗೆ ನಿಷೇಧ ಮಾಡುವುದಕ್ಕೆ ಎಂಟು ವರ್ಷ ಬೇಕಿತ್ತಾ? ಎಂದು ಪ್ರಶ್ನಿಸಿದರು.

Tap to resize

Latest Videos

ಸಂಸ್ಥೆಗಳನ್ನು ಬ್ಯಾನ್ ಮಾಡಿದ್ರೆ ಅಂಡರ್ ವರ್ಲ್ಡ್ ಹಾಗೆ ಕೆಲಸ ಮಾಡ್ತಾರೆ; PFI ಬ್ಯಾನ್‌ಗೆ ನಟ ಚೇತನ್ ರಿಯಾಕ್ಷನ್

ಇದುವರೆಗೆ ಕೈಗೆ ಗೋರಂಟಿ ಹಾಕಿಕೊಂಡು ಕುಳಿತಿದ್ದರಾ ಎಂದು ತರಾಟೆಗೆ ತೆಗೆದುಕೊಂಡರು. ಗುಜರಾತ್‌ ಚುನಾವಣೆ ಸಂದರ್ಭದಲ್ಲೇ ಬ್ಯಾನ್‌ ಮಾಡಿರುವ ಉದ್ದೇಶ ಇನ್ನೇನೂ ಇಲ್ಲ. ನಾವು ಭಯೋತ್ಪಾದನೆ ನಿಗ್ರಹಿಸುವವರು ಅಂತ ವಾಟ್ಸ್‌ಪ್‌ ಯೂನಿವರ್ಸಿಟಿಯಲ್ಲಿ ಪ್ರಕಟಿಸಿ ಸಿಂಪತಿ ಗಿಟ್ಟಿಸುವುದು ಅಷ್ಟೆಎಂದರು.

ಗುಜರಾತ್‌ ಚುನಾವಣೆ ಮುಗಿದ ಬಳಿಕ ಬಿಜೆಪಿ, ಪಿಎಫ್‌ಐ ಮತ್ತು ಎಸ್‌ಡಿಪಿಐ ಜುಗಲ್‌ಬಂದಿ ನಡೆಸುತ್ತವೆ. ಪಿಎಫ್‌ಐ ಮತ್ತು ಆರೆಸ್ಸೆಸ್‌ ಒಂದೇ ನಾಣ್ಯದ ಎರಡು ಮುಖಗಳು. ಆರೆಸ್ಸೆಸ್‌ ಬ್ಯಾನ್‌ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜವಾದ ಸಿದ್ಧಾಂತದಿಂದ ಕೋಮುವಾದ ಸಿದ್ಧಾಂತಕ್ಕೆ ಮತಾಂತರವಾಗಿದ್ದಾರೆ. ಕೇಶವಕೃಪಾದವರನ್ನು ಓಲೈಸಲು ಏನು ಬೇಕಾದರೂ ಮಾಡುತ್ತಾರೆ. ಇಷ್ಟುವರ್ಷ ನಂಬಿಕೊಂಡು ಬಂದ ಸಿದ್ಧಾಂತವನ್ನೂ ಗಾಳಿಗೆ ತೂರುತ್ತಾರೆ ಅಂತ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ತಿಳಿಸಿದ್ದಾರೆ. 
 

click me!