
ಬೆಂಗಳೂರು (ಜು.02): ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕರಣ ಸಂಬಂಧ ಜನಸಾಮಾನ್ಯರಲ್ಲಿ ಮನೆಮಾಡಿರುವ ಆತಂಕಕ್ಕೆ ಸ್ಪಂದಿಸಿ ಪರಿಹಾರ ಹುಡುಕಬೇಕಾದ ಸರ್ಕಾರ ಕೋವಿಡ್ ಲಸಿಕೆಗಳ ಮೇಲೆಯೇ ಹುಯಿಲೆಬ್ಬಿಸುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಹಠಾತ್ ಹೃದಯಾಘಾತಗಳಿಂದ 20ಕ್ಕೂ ಹೆಚ್ಚು ಅಮೂಲ್ಯ ಯುವ ಜೀವಗಳು ಬಲಿಯಾಗಿರುವುದು ಅತ್ಯಂತ ದುಃಖದ ವಿಷಯ ಮತ್ತು ಆತಂಕಕಾರಿ ಬೆಳವಣಿಗೆ.
ಆದರೆ ಇದಕ್ಕಿಂತ ಹೆಚ್ಚು ಆತಂಕಕಾರಿ ಸಂಗತಿ ಎಂದರೆ, ಈ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಮತ್ತು ಸಂವೇದನಾರಹಿತ ಸ್ಪಂದನೆ ಎಂದಿದ್ದಾರೆ. ಕೋವಿಡ್ ಲಸಿಕೆಗೆ ಆತುರದಲ್ಲಿ ಅನುಮತಿ ಕೊಟ್ಟಿರುವುದು ಈ ಸಾವುಗಳಿಗೆ ಕಾರಣವಾಗಿರಬಹುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ಹೇಳಿಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲದ, ಅಪಾಯಕಾರಿ ಹಾಗೂ ಜನ ಸಾಮಾನ್ಯರ ಮನಸ್ಸಿನಲ್ಲಿ ಅನಗತ್ಯ ಆತಂಕ ಹುಟ್ಟಿಸುವ ಹೇಳಿಕೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.
ಕೋವಿಡ್ ಲಸಿಕೆ ಬಿಜೆಪಿ ಲಸಿಕೆ ಅಲ್ಲ. ಇದು ಕೋಟ್ಯಂತರ ಭಾರತೀಯರನ್ನು ರಕ್ಷಿಸಿದ ಲಸಿಕೆ. ಇದು ಭಾರತೀಯ ವಿಜ್ಞಾನಿಗಳ, ವೈದ್ಯಕೀಯ ತಜ್ಞರ ಪರಿಶ್ರಮದ ಫಲ. ಈ ಲಸಿಕೆ ಭಾರತ ಸೇರಿ ವಿಶ್ವದ ಅನೇಕ ದೇಶಗಳಲ್ಲಿ ಕೋಟ್ಯಂತರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಮಾನ್ಯತೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಲಸಿಕೆಯನ್ನು ಇಂದು ರಾಜಕೀಯ ಲಾಭಕ್ಕಾಗಿ ಅನುಮಾನಿಸುವುದು, ಅದರ ಬಗ್ಗೆ ಅಪಪ್ರಚಾರ ಮಾಡುವುದು ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ, ವೈದ್ಯಕೀಯ ಲೋಕಕ್ಕೆ ಮಾಡುವ ಅಪಮಾನ. ಕೈಲಾಗದವನು ಮೈಪರಚಿಕೊಂಡ ಎಂಬಂತೆ, ಕೋವಿಡ್ ಲಸಿಕೆ ದೂಷಿಸುವ ಬದಲು, ಈ ಸಾವುಗಳನ್ನು ತಡೆಗಟ್ಟಲು ತಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವ ಕುರಿತು ಒಮ್ಮೆ ಸಿದ್ದರಾಮಯ್ಯ ತಮ್ಮ ಆತ್ಮಸಾಕ್ಷಿ ಪ್ರಶ್ನಿಸಿಕೊಳ್ಳಲಿ ಎಂದು ಅಶೋಕ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.