ಬೆಂಗಳೂರು (ಜು.02): ಶಾಸಕರ ಅಸಮಾಧಾನ ಶಮನಕ್ಕಾಗಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸುತ್ತಿರುವ ಶಾಸಕರೊಂದಿನ ಮುಖಾಮುಖಿ ಸಭೆಯಲ್ಲಿ ಬಣ ರಾಜಕಾರಣ ದೊಡ್ಡಮಟ್ಟದಲ್ಲೇ ಸ್ಫೋಟಗೊಂಡಿದ್ದು, ಕೆಲ ಶಾಸಕರು ಡಿ.ಕೆ. ಶಿವಕುಮಾರ್ ಅವರಿಗೆ ಮುಂದಿನ ಎರಡೂವರೆ ವರ್ಷ ಅವಕಾಶ ನೀಡಬೇಕು ಎಂದು ವಾದಿಸಿದರೆ, ಮತ್ತೆ ಕೆಲವರು ಸಿದ್ದರಾಮಯ್ಯ ಬದಲಾಯಿಸಿದರೆ ಸರ್ಕಾರವೇ ಇರಲ್ಲ ಎಂಬ ನೇರ ಎಚ್ಚರಿಕೆ ನೀಡಿದ್ದಾರೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸೇರಿ ಕೆಲ ಶಾಸಕರು ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪಿಸಿ, ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಸುರ್ಜೇವಾಲಾ ಎದುರು ನೇರವಾಗಿ ಮನವಿ ಮಾಡಿದ್ದರೆ. ಮಾಲೂರು ಶಾಸಕ ಕೆ.ವೈ ನಂಜೇಗೌಡ, ಅನಿಲ ಚಿಕ್ಕಮಾದು, ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಸೇರಿ ಮತ್ತಿತರರು ಸಿದ್ದರಾಮಯ್ಯರನ್ನು ಬದಲಿಸಿದರೆ ಸರ್ಕಾರದ ಅಸ್ತಿತ್ವಕ್ಕೆ ಕಂಟಕ ಎದುರಾಗಲಿದೆ ಎಂಬರ್ಥದ ಸಂದೇಶ ರವಾನಿಸಿದರು ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಪರವಾಗಿ ಬಹಿರಂಗ ಬ್ಯಾಟ್ ಬೀಸುತ್ತಿರುವ ಇಕ್ಬಾಲ್ ಹುಸೇನ್, ಸುರ್ಜೇವಾಲಾ ಅವರ ಮುಂದೆಯೂ ವಿಷಯ ಪ್ರಸ್ತಾಪಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಘಟನೆ ಮಾಡಿದ್ದಾರೆ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ನಮಗೆಲ್ಲ ಬದಲಾವಣೆ ಬೇಕಿದ್ದು, ಡಿ.ಕೆ. ಶಿವಕುಮಾರ್ ರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಕೋರಿದ್ದಾರೆ. ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಕೂಡ ಸುರ್ಜೇವಾಲಾ ಅವರ ಬಳಿ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.
ಬದಲಿಸಿದರೆ ಸರ್ಕಾರಕ್ಕೆ ಕಂಟಕ: ಮತ್ತೊಂದು ಶಾಸಕರ ಗುಂಪು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದು, ಸಿದ್ದರಾಮಯ್ಯ ಅವರು ಆಡಳಿತ ನಡೆಸಲು ಸಮರ್ಥರಾಗಿದ್ದಾರೆ. ಅವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅನುದಾನ, ಶಾಸಕರ ಸಮಸ್ಯೆ ನಿವಾರಿಸುತ್ತಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಶಾಸಕರು, ಸಿದ್ದರಾಮಯ್ಯರನ್ನು ಬದಲಿಸಿದರೆ ಸರ್ಕಾರಕ್ಕೆ ಕಂಟಕ ಎದುರಾಗಲಿದೆ. ಹೀಗಾಗಿ ಸದ್ಯಕ್ಕೆ ಆ ರೀತಿಯ ನಿರ್ಧಾರ ಕೈಗೊಳ್ಳದಂತೆಯೂ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಶಾಸಕರ ಬಣಗಳು ಬಹಿರಂಗ: ಶಾಸಕರೊಂದಿಗೆ ರಣದೀಪ್‌ಸಿಂಗ್ ಸುರ್ಜೇವಾಲಾ ಸಭೆ ನಡೆಸುವುದಕ್ಕೂ ಮುನ್ನ ಕೆಲವೇ ಕೆಲ ಶಾಸಕರು ಸಚಿವರು ಮತ್ತು ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡಿ ಮುಜುಗರವನ್ನುಂಟು ಮಾಡುತ್ತಿದ್ದರು. ಯಾರೂ ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಆದರೆ, ಸುರ್ಜೇವಾಲಾ ಸಭೆ ನಂತರ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಬಹಿರಂಗವಾಗುವಂತಾಗಿದೆ. ಹೈಕಮಾಂಡ್ ಸೂಚನೆ ನಂತರವೂ ಮುಖ್ಯಮಂತ್ರಿ ಬದಲಾವಣೆ ಕುರಿತು ಶಾಸಕರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾ, ಸರ್ಕಾರದೊಳಗೆ ಬಣಗಳು ಸೃಷ್ಟಿಯಾಗಿರುವುದು ಬಯಲಾಗಿದೆ.
ಇನ್ನು, ಸಭೆ ನಡೆಸುತ್ತಿರುವ ಸುರ್ಜೇವಾಲಾ ಅವರು ಸರ್ಕಾರದ ಕಾರ್ಯವೈಖರಿ, ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಕುರಿತು ಮಾತ್ರ ಶಾಸಕರಿಂದ ಅಭಿಪ್ರಾಯ ಪಡೆಯುತ್ತಿದ್ದಾರೆ. ಅದನ್ನು ಹೊರತುಪಡಿಸಿ ಶಾಸಕರಿಗೆ ಬುದ್ಧಿ ಹೇಳುವಂತಹ ಕೆಲಸ ಮಾಡುತ್ತಿಲ್ಲ. ಜತೆಗೆ ಶಾಸಕರಿಗೆ ಅನುದಾನ ಕೊಡಿಸುವ ಭರವಸೆ ಮತ್ತು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ. ಹೀಗಾಗಿಯೇ ಶಾಸಕರು ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ಸೇರಿ ಇನ್ನಿತರ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಅನುದಾನ ಸಮಸ್ಯೆ, ಸಚಿವರ ಅಸಹಕಾರ, ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿ ಶಾಸಕರ ಸಮಸ್ಯೆ ಆಲಿಸಿ, ಸಮಾಧಾನಪಡಿಸಲು ರಣದೀಪ್ ಸಿಂಗ್ ಸುರ್ಜೇವಾಲಾ ಕಳೆದೆರಡು ದಿನಗಳಿಂದ ಶಾಸಕರೊಂದಿಗೆ ಮುಖಾಮುಖಿ ಸಭೆ ನಡೆಸುತ್ತಿದ್ದಾರೆ. ಮಂಗಳವಾರ ರಾಮನಗರ, ಕೋಲಾರ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 20 ಶಾಸಕರೊಂದಿಗೆ ಮುಖಾಮುಖಿ ಸಭೆ ನಡೆಸಿದರು. ಈ ವೇಳೆ ಬಹುತೇಕ ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಜತೆಗೆ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸ್ಥಾನದ ಬೇಡಿಕೆಯನ್ನು ಸುರ್ಜೇವಾಲಾ ಮುಂದಿಟ್ಟಿದ್ದಾರೆ.
20 ಶಾಸಕರೊಂದಿಗೆ ಸಭೆ: ಎರಡನೇ ದಿನದ ಸಭೆಯಲ್ಲಿ ಸುರ್ಜೇವಾಲಾ ಅವರು ಶಾಸಕರಾದ ರಾಜು ಕಾಗೆ, ಎನ್.ಎ.ಹ್ಯಾರೀಸ್, ತನ್ವೀರ್ ಸೇಠ್, ಎ.ಸಿ. ಶ್ರೀನಿವಾಸ್, ಕೆ.ವೈ. ನಂಜೇಗೌಡ, ಪ್ರಿಯಕೃಷ್ಣ, ಇಕ್ಬಾಲ್ ಹುಸೇನ್, ಎಚ್.ಸಿ. ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್ ಸೇರಿದಂತೆ 20 ಶಾಸಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಬಹುತೇಕ ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲಿನ ಸಮಸ್ಯೆ, ಅನುದಾನ ಕೊರತೆ, ಗ್ಯಾರಂಟಿ ಯೋಜನೆಗಳಿಂದಾಗಿರುವ ಲಾಭಗಳ ಬಗ್ಗೆ ವಿವರಿಸಿದ್ದಾರೆ.
ಕೋಲಾರ ಕಾಂಗ್ರೆಸ್ ಗೊಂದಲ ಬಹಿರಂಗ: ಸುರ್ಜೇವಾಲಾ ಅವರೊಂದಿಗಿನ ಸಭೆಯಲ್ಲಿ ಕೋಲಾರ ಜಿಲ್ಲೆಯ ಶಾಸಕರ ನಡುವಿನ ಸಮನ್ವಯ ಕೊರತೆ ಬಹಿರಂಗವಾಗಿದೆ. ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರು ಕೋಲಾರ ಹಾಲು ಒಕ್ಕೂಟದ ಚುನಾವಣೆಯಲ್ಲಿನ ಪಕ್ಷ ವಿರೋಧಿ ಚಟುವಟಿಕೆ ಕುರಿತು ಪ್ರಸ್ತಾಪಿಸಿದ್ದಾರೆ. ಈ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ವಿರುದ್ಧ ದೂರು ನೀಡಿದ್ದಾರೆ.
ಬದಲಾವಣೆ ಬಗ್ಗೆ ವರಿಷ್ಠ ಬಳಿಯಲ್ಲೇ ಮಾತನಾಡುತ್ತೇನೆ: ಸುರ್ಜೇವಾಲಾ ಜತೆಗಿನ ಸಭೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಕ್ಷೇತ್ರದ ಸಮಸ್ಯೆ, ನಮ್ಮ ಕೆಲಸಗಳ ಬಗ್ಗೆ ಸುರ್ಜೇವಾಲಾ ಅವರು ಚರ್ಚೆ ನಡೆಸಿದ್ದಾರೆ. ಅದನ್ನು ಹೊರತುಪಡಿಸಿ ಬೇರೆ ವಿಷಯಗಳನ್ನು ಕೇಳಿಲ್ಲ. ಇನ್ನು, ಮುಖ್ಯಮಂತ್ರಿ, ಸಚಿವರ ಬದಲಾವಣೆ ಕುರಿತು ನಾವು ಪಕ್ಷದ ಹೈಕಮಾಂಡ್ ಬಳಿಯೇ ಮಾತನಾಡುತ್ತೇವೆ. ಸದ್ಯಕ್ಕೆ ಆ ವಿಚಾರ ಮಾತನಾಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.